ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asian Games | ಏಷ್ಯಾಡ್‌ನಲ್ಲಿ ಕನ್ನಡಿಗರ ಸವಾಲು

Published 23 ಸೆಪ್ಟೆಂಬರ್ 2023, 15:31 IST
Last Updated 23 ಸೆಪ್ಟೆಂಬರ್ 2023, 15:31 IST
ಅಕ್ಷರ ಗಾತ್ರ

ಬೆಂಗಳೂರು: ಏಷ್ಯನ್‌ ಗೇಮ್ಸ್‌ನಲ್ಲಿ ಭಾರತವು ಈ ಬಾರಿ ‘ಪದಕದ ಶತಕ’ ದಾಖಲಿಸುವ ಗುರಿ ಇಟ್ಟುಕೊಂಡಿದೆ. ಈ ಗುರಿ ಈಡೇರಿಸಲು ಕರ್ನಾಟಕದ ಕ್ರೀಡಾಪಟುಗಳೂ ತಮ್ಮ ಕೊಡುಗೆ ನೀಡಲು ಸಜ್ಜಾಗಿದ್ದಾರೆ. ಕರುನಾಡಿನ ಅನುಭವಿ ಹಾಗೂ ಯುವ ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಪದಕದ ನಿರೀಕ್ಷೆ ಮೂಡಿಸಿದ್ದಾರೆ.

ರೋಹನ್‌ ಬೋಪಣ್ಣ: ಟೆನಿಸ್‌ ಆಟಗಾರ 43 ವರ್ಷದ ರೋಹನ್‌ ಬೋಪಣ್ಣ ಅವರು ಕಣದಲ್ಲಿರುವ ಕರ್ನಾಟಕದ ಹಿರಿಯ ಕ್ರೀಡಾಪಟು. ಕಳೆದ ಕೂಟದ ಪುರುಷರ ಡಬಲ್ಸ್‌ನಲ್ಲಿ ಅವರು ಚಿನ್ನ ಜಯಿಸಿದ್ದರು. ಕಳೆದ ವಾರವಷ್ಟೇ ಡೇವಿಸ್‌ ಕಪ್‌ನಿಂದ ನಿವೃತ್ತಿ ಹೊಂದಿರುವ ಬೋಪಣ್ಣ ಈ ಬಾರಿಯೂ ಪದಕದ ನಿರೀಕ್ಷೆಯಲ್ಲಿದ್ದಾರೆ.

ಸಿಂಚಲ್‌ ಕಾವೇರಮ್ಮ: ಮಹಿಳೆಯರ 400 ಮೀ. ಹರ್ಡಲ್ಸ್‌ನಲ್ಲಿ ಸ್ಪರ್ಧಿಸಲಿರುವ ಸಿಂಚಲ್‌ ಕಾವೇರಮ್ಮ ಅವರು ಈಚೆಗೆ ನಡೆದ ಅಥ್ಲೆಟಿಕ್‌ ಕೂಟಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ.

ಶ್ರೀಹರಿ ನಟರಾಜ್‌: ಭಾರತ ಈಜು ತಂಡದಲ್ಲಿ ರಾಜ್ಯದ ಹಲವರು ಸ್ಥಾನ ಪಡೆದಿದ್ದು, ಅವರಲ್ಲಿ ಒಲಿಂಪಿಯನ್ ಈಜುಪಟು ಶ್ರೀಹರಿ ನಟರಾಜ್‌ ಪ್ರಮುಖರು. ವಿಶ್ವ ಈಜು ಚಾಂಪಿಯನ್‌ಷಿಪ್‌, ಕಾಮನ್‌ವೆಲ್ತ್‌  ಗೇಮ್ಸ್‌ನಲ್ಲಿ ಪಾಲ್ಗೊಂಡಿರುವ ಅವರು ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ಧಾರೆ.

ಅದಿತಿ, ಅವನಿ: ಗಾಲ್ಫ್‌ನಲ್ಲಿ ಅದಿತಿ ಅಶೋಕ್‌, ಅವನಿ ಪ್ರಶಾಂತ್‌ ಮತ್ತು ಪ್ರಣವಿ ಅರಸ್‌ ಭಾರತದ ಸವಾಲು ಮುನ್ನಡೆಸಲಿದ್ದಾರೆ. ಲೇಡಿಸ್‌ ಪ್ರೊಫೆಷನಲ್‌ ಗಾಲ್ಫ್‌ ಟೂರ್‌ನಲ್ಲಿ ಆಡಿದ ಅನುಭವ ಹೊಂದಿರುವ ಅದಿತಿ, ಮಹಿಳಾ ವಿಭಾಗದಲ್ಲಿ ಭಾರತದ ನಂ.1 ಆಟಗಾರ್ತಿಯೂ ಹೌದು.

ಅಶ್ವಿನಿ ಪೊನ್ನಪ್ಪ: ಅನುಭವಿ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಅವರು ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ತನಿಷಾ ಕ್ರಾಸ್ಟೊ ಅವರೊಂದಿಗೆ ಆಡಲಿದ್ಧಾರೆ. 2014ರಲ್ಲಿ ಮಹಿಳೆಯರ ತಂಡ ವಿಭಾಗದಲ್ಲಿ ಅವರು ಕಂಚಿನ ಪದಕ ಗೆದ್ದುಕೊಂಡಿದ್ದರು.

ವೆಂಕಪ್ಪ ಶಿವಪ್ಪ: ಬಾಗಲಕೋಟೆಯ ಸೈಕ್ಷಿಸ್ಟ್‌ ವೆಂಕಪ್ಪ ಶಿವಪ್ಪ ಅವರು ಈ ಕೂಟದಲ್ಲಿ ತಂಡ ವಿಭಾಗದಲ್ಲಿ ಸ್ಪರ್ಧಿಸುವರು. ಏಷ್ಯನ್‌ ಟ್ರ್ಯಾಕ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಅವರು ಕಂಚಿನ ಪದಕ ಜಯಿಸಿದ್ದರು.

ಅದಿತಿ ಅಶೋಕ್
ಅದಿತಿ ಅಶೋಕ್

ರಾಜೇಶ್ವರಿ ಗಾಯಕ್ವಾಡ್‌: ಭಾರತ ಮಹಿಳಾ ಕ್ರಿಕೆಟ್‌ ತಂಡದಲ್ಲಿರುವ ಕರ್ನಾಟಕದ ಏಕೈಕ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್‌. ಏಷ್ಯನ್‌ ಗೇಮ್ಸ್‌ನಲ್ಲಿ ಇದೇ ಮೊದಲ ಬಾರಿ ಮಹಿಳಾ ಕ್ರಿಕೆಟ್‌ ಪರಿಚಯಿಸಲಾಗಿದ್ದು, ಭಾರತವು ಚಿನ್ನ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ. ರಾಜೇಶ್ವರಿ ಅವರು ಸ್ಪಿನ್‌ ವಿಭಾಗಕ್ಕೆ ಬಲ ತುಂಬಲಿದ್ದಾರೆ.

ಅಶ್ವಿನಿ ಪೊನ್ನಪ್ಪ
ಅಶ್ವಿನಿ ಪೊನ್ನಪ್ಪ

ಭರತ್‌ ಪೆರೇರಾ: ಹಾಂಗ್‌ಝೌ ಕೂಟದ ಕ್ಲೈಂಬಿಂಗ್‌ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ಏಳು ಸದಸ್ಯರ ಭಾರತ ತಂಡದಲ್ಲಿ ಕರ್ನಾಟಕದ ಭರತ್‌ ಪೆರೇರಾ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT