ಹಾಂಗ್‌ಝೌ: ಭಾರತದ ಅಗ್ರಮಾನ್ಯ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ – ಚಿರಾಗ್ ಶೆಟ್ಟಿ ಅವರು ಏಷ್ಯನ್ ಕ್ರೀಡಾಕೂಟದ ಬ್ಯಾಡ್ಮಿಂಟನ್ ಡಬಲ್ಸ್‌ನಲ್ಲಿ ತೀವ್ರ ಹೋರಾಟದ ನಂತರ ಇಂಡೊನೇಷ್ಯಾದ ಜೋಡಿಯನ್ನು ಸೋಲಿಸಿ ಎಂಟರ ಘಟ್ಟ ತಲುಪಿದರು. ಸಿಂಗಲ್ಸ್‌ನಲ್ಲಿ ಭಾರತದ ಭರವಸೆಗಳಾದ ಸಿಂಧು ಮತ್ತು ಪ್ರಣಯ್ ಅವರೂ ಕೂಡ ಬುಧವಾರ ಕ್ವಾರ್ಟರ್‌ಫೈನಲ್‌ಗೆ ದಾಪುಗಾಲಿಟ್ಟರು.
ವಿಶ್ವ ಕ್ರಮಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಸಾತ್ವಿಕ್– ಚಿರಾಗ್ ಜೋಡಿ ದೀರ್ಘ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ 24–22, 16–21, 21–12 ರಿಂದ ಲಿಯೊ ರೋಲಿ ಕಾರ್ನಾಂಡೊ– ಡೇನಿಯಲ್ ಮಾರ್ಥಿನ್ ಜೋಡಿಯನ್ನು ಸೋಲಿಸಿತು. ವಿಶ್ವ ಕ್ರಮಾಂಕದಲ್ಲಿ 11ನೇ ಸ್ಥಾನದಲ್ಲಿರುವ ಇಂಡೊನೇಷ್ಯಾ ಜೋಡಿ ಏನೂ ಕಮ್ಮಿಯಿಲ್ಲ ಎಂಬಂತೆ ಆಡಿದ್ದು, ಪ್ರತಿ ಪಾಯಿಂಟ್‌ಗೂ ಹೋರಾಟ ನಡೆದಿದ್ದರಿಂದ ಪಂದ್ಯ 84 ನಿಮಿಷಗಳಿಗೆ ಬೆಳೆಯಿತು.
ಇದಕ್ಕೆ ಮೊದಲು ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಮತ್ತು ಎಚ್.ಎಸ್.ಪ್ರಣಯ್ ಸಿಂಗಲ್ಸ್ ವಿಭಾಗದಲ್ಲಿ ಎದುರಾಳಿಗಳನ್ನು ನೇರ ಸೆಟ್‌ಗಳಿಂದ ಹಿಮ್ಮೆಟ್ಟಿಸಿದರು.
ಮಾಜಿ ವಿಶ್ವ ಚಾಂಪಿಯನ್ ಸಿಂಧು 16ರ ಸುತ್ತಿನ ಪಂದ್ಯದಲ್ಲಿ ಪುತ್ರಿ ಕುಸುಮಾ ವರ್ದಾನಿ (ಇಂಡೊನೇಷ್ಯಾ) ಅವರನ್ನು 21–16, 21–16 ರಿಂದ ಸೋಲಿಸಿದರು. ಅವರು ಕ್ವಾರ್ಟರ್‌ಫೈನಲ್‌ನಲ್ಲಿ ಚೀನಾದ ಹೆ ಬಿಂಗ್‌ಜಿಯಾವೊ ಅವರನ್ನು ಎದುರಿಸಲಿದ್ದಾರೆ. ಚೀನಾ ಆಟಗಾರ್ತಿ ಇನ್ನೊಂದು ಪಂದ್ಯದಲ್ಲಿ 21–10, 21–4 ರಿಂದ ರಸಿಲಾ ಮಹಾರ್ಜನ್ (ನೇಪಾಳ) ವಿರುದ್ಧ ಜಯಗಳಿಸದಿರು.
ಪುರುಷರ ಸಿಂಗಲ್ಸ್ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಪ್ರಣಯ್ 21–12, 21–13 ರಿಂದ ಕಜಕಸ್ತಾನದ ಡಿಮಿಟ್ರಿ ಪನಾರಿನ್ ಅವರನ್ನು ಸೋಲಿಸಿದರು.
ಸೋತ ಟ್ರೀಸಾ– ಗಾಯತ್ರಿ:
ಮಹಿಳೆಯರ ಡಬಲ್ಸ್‌ನಲ್ಲಿ ಟ್ರಿಸಾ ಜೋಳಿ–ಗಾಯತ್ರಿ ಗೋಪಿಚಂದ್ ಜೋಡಿ ಹೊರಬಿತ್ತು. ಕೊರಿಯಾದ ಕಿಮ್ ಸೊಯೊಂಗ್– ಕಾಂಗ್ ಹೀಯಾಂಗ್ ಜೋಡಿ 21–15, 18–21, 21–13 ರಿಂದ ಭಾರತದ ಆಟಗಾರ್ತಿಯರ ಮೇಲೆ ಜಯಗಳಿಸಿತು.
ತನಿಶಾ ಕ್ರಾಸ್ಟೊ–ಸಾಯಿ ಪ್ರತೀಕ್ ಕೃಷ್ಣ ಪ್ರಸಾದ್ ಅವರು ಮಿಕ್ಸೆಡ್ ಡಬಲ್ಸ್‌ನಲ್ಲಿ ಸೋಲನುಭವಿಸಿದರು. ಮಲೇಷ್ಯಾದ ಜೋಡಿ 21–18, 21–18 ರಲ್ಲಿ ಜಯಗಳಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.