ಬೆಂಗಳೂರು: ‘ಕನ್ನಡ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್‌ನಂಥ ಪ್ರಕರಣಗಳು ಕಂಡುಬಂದರೆ, ಸರ್ಕಾರ ಕಠಿಣ ಕ್ರಮಕೈಗೊಳ್ಳಲಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ’ಆ ರೀತಿ ಏನಾದರೂ ಆಗಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು. ಮಹಿಳೆಯರ ರಕ್ಷಣೆಯೇ ನಮಗೆ ಮುಖ್ಯ’ ಎಂದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಆ ವಿಚಾರದ ಬಗ್ಗೆ ಭರವಸೆ ನೀಡಿದ್ದಾರೆ. ಮಹಿಳೆಯರ ರಕ್ಷಣೆಗೆ ಸರ್ಕಾರ ಸದಾ ಬದ್ಧ’ ಎಂದರು.
ಇಡೀ ದೇಶದಲ್ಲಿ ಕಮಿಟಿ ಮಾಡಬೇಕು: ‘ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಹೇಮಾ ಕಮಿಟಿ ಮಾದರಿಯಲ್ಲಿ ಕಮಿಟಿ ಮಾಡಬೇಕು’ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಹೇಳಿದರು.
‘ಕೇರಳದ ಹೇಮಾ ಕಮಿಟಿ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ದೇಶದಲ್ಲಿ ಶೇ 50ರಷ್ಟು ಮಹಿಳೆಯರಿದ್ದೇವೆ. ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಇದನ್ನು ಮೊದಲು ನಿಲ್ಲಿಸಬೇಕು’ ಎಂದರು.
‘ಮಹಿಳೆಯರಿಗೂ ಸಮಾನತೆ, ಸುರಕ್ಷತೆ ಬೇಕು. ಪೌರಕಾರ್ಮಿಕ ಮಹಿಳೆಯೂ ಸ್ವಾಭಿಮಾನದಿಂದ ಬದುಕಬೇಕು’ ಎಂದರು.
ಸಮಿತಿ ರಚನೆಗೆ ಮುಖ್ಯಮಂತ್ರಿಗೆ ಮನವಿ
‘ಕನ್ನಡ ಚಿತ್ರೋದ್ಯಮದಲ್ಲಿ ಕಲಾವಿದೆಯರು ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ಅಧ್ಯಯನ ಮಾಡಿ ವರದಿ ಸಲ್ಲಿಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ‘ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಆ್ಯಂಡ್ ಇಕ್ವಾಲಿಟಿ (ಫೈರ್)’ ನಿಯೋಗ ಗುರುವಾರ ಭೇಟಿ ಮಾಡಿ ಮನವಿ ಸಲ್ಲಿಸಿದೆ. ಮುಖ್ಯಮಂತ್ರಿಯನ್ನು ಸರ್ಕಾರಿ ನಿವಾಸ ‘ಕಾವೇರಿ’ಯಲ್ಲಿ ಭೇಟಿ ಮಾಡಿದ ನಟ ಚೇತನ್ ನಟಿಯರಾದ ಶ್ರುತಿ ಹರಿಹರನ್ ನೀತು ಶೆಟ್ಟಿ ಸಾಮಾಜಿಕ ಕಾರ್ಯಕರ್ತೆ ವಿಜಯಮ್ಮ ಮತ್ತಿತರರಿದ್ದ ನಿಯೋಗ ‘ಕೇರಳದಲ್ಲಿ ರಚಿಸಿದ್ದ ನ್ಯಾಯಮೂರ್ತಿ ಹೇಮಾ ಸಮಿತಿ ಮಾದರಿಯಲ್ಲಿ ಕರ್ನಾಟದಲ್ಲೂ ರಚಿಸಬೇಕು’ ಎಂದು ಕೋರಿದೆ. ನಟಿ ಸಂಜನಾ ಅವರು ವಿಧಾನಸೌಧದ ಕಚೇರಿಯಲ್ಲಿ ಮುಖ್ಯಮಂತ್ರಿಯನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಸಮಿತಿ ರಚಿಸುವಂತೆ ಮನವಿ ಸಲ್ಲಿಸಿದರು. 153 ಮಂದಿ ಸಹಿ ಮಾಡಿರುವ ಪತ್ರವನ್ನು ಫೈರ್ ಸಂಘಟನೆ ಬುಧವಾರವೇ ರಾಜ್ಯ ಸರ್ಕಾರಕ್ಕೆ ನೀಡಿತ್ತು. ನಿಯೋಗದ ಮನವಿಗೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.