ಬೆಂಗಳೂರು: ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಚಿತ್ರನಟ ದರ್ಶನ್ ಅವರನ್ನು ನಗರ ಪೊಲೀಸರು ಗುರುವಾರ ನಸುಕಿನ ಜಾವ ದಿಢೀರ್ ಮಾರ್ಗ ಬದಲಿಸಿ ಆಂಧ್ರಪ್ರದೇಶ ಮಾರ್ಗವಾಗಿ ಬಳ್ಳಾರಿಗೆ ಕರೆದೊಯ್ದರು.
ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರಿಸುವ ಜವಾಬ್ದಾರಿಯನ್ನು ಪೀಣ್ಯ ಹಾಗೂ ಹಲಸೂರು ಉಪ ವಿಭಾಗಗಳ ಎಸಿಪಿಗಳಿಗೆ ವಹಿಸಲಾಗಿತ್ತು. ದರ್ಶನ್ ಹಾಗೂ ಸಹಚರರನ್ನು ಗುರುವಾರ ನಸುಕಿನ ವೇಳೆ ಕರೆದೊಯ್ಯಲು ತೀರ್ಮಾನಿಸಲಾಗಿತ್ತು. ಮುಂಜಾನೆ 4.30ರ ಸುಮಾರಿಗೆ ಆರೋಪಿಗಳ ಪ್ರಯಾಣ ಆರಂಭವಾಯಿತು.
‘ಆರಂಭದಲ್ಲಿ ಮೇಕ್ರಿ ವೃತ್ತ, ಯಶವಂತಪುರ, ದಾಸರಹಳ್ಳಿ, ನೆಲಮಂಗಲ, ತುಮಕೂರು, ಶಿರಾ, ಚಿತ್ರದುರ್ಗ ಮಾರ್ಗದಲ್ಲೇ ದರ್ಶನ್ ಅವರನ್ನು ಕರೆದೊಯ್ಯಲು ತೀರ್ಮಾನಿಸಲಾಗಿತ್ತು. ಹಿರಿಯ ಅಧಿಕಾರಿಗಳ ಸೂಚನೆ ಹಾಗೂ ಭದ್ರತಾ ದೃಷ್ಟಿಯಿಂದ ಮಾರ್ಗ ಬದಲಾವಣೆ ಮಾಡಲಾಯಿತು’ ಎಂದು ಪೊಲೀಸರು ಹೇಳಿದರು.
ಪರಪ್ಪನ ಅಗ್ರಹಾರದಿಂದ ಮೇಕ್ರಿ ವೃತ್ತಕ್ಕೆ ವಾಹನ ಬಂದ ತಕ್ಷಣವೇ ದರ್ಶನ್ ಅವರನ್ನು ಕರೆದೊಯ್ಯುವ ಮಾರ್ಗವನ್ನು ದಿಢೀರ್ ಬದಲಾವಣೆ ಮಾಡಿಕೊಂಡು ಹೆಬ್ಬಾಳ ಮೇಲ್ಸೇತುವೆ, ಯಲಹಂಕ, ದೇವನಹಳ್ಳಿ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಹಾಗೂ ಆಂಧ್ರಪ್ರದೇಶದ ಅನಂತಪುರ ಮಾರ್ಗವಾಗಿ ಬಳ್ಳಾರಿ ಜೈಲಿಗೆ ಕರೆದೊಯ್ಯಲಾಯಿತು.
‘ಆರಂಭದಲ್ಲಿ ತೆರಳಲು ನಿರ್ಧರಿಸಿದ್ದ ಸಂಚಾರ ಮಾರ್ಗದ ವಿವರ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಹೀಗಾಗಿ ಆ ಮಾರ್ಗದಲ್ಲಿ ಅಭಿಮಾನಿಗಳು ಜಮಾವಣೆ ಆಗುವ ಸಾಧ್ಯತೆಯಿತ್ತು. ಈ ಕಾರಣದಿಂದ ಮಾರ್ಗ ಬದಲಾವಣೆ ಮಾಡಿಕೊಂಡು ಎಲ್ಲಿಯೂ ನಿಲುಗಡೆ ಮಾಡದೆ ಬಳ್ಳಾರಿ ಕಾರಾಗೃಹಕ್ಕೆ ದರ್ಶನ್ ಅವರನ್ನು ಕರೆದೊಯ್ದು ಬಿಡಲಾಯಿತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಉಳಿದ ಆರೋಪಿಗಳನ್ನು ಪೂರ್ವ ನಿರ್ಧರಿತ ಮಾರ್ಗದಲ್ಲೇ ಕರೆದೊಯ್ಯಲಾಯಿತು.