ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಕರ್ನಾಟಕದ ಕಾರ್ಖಾನೆಗಳಲ್ಲಿ ಕಬ್ಬು ನುರಿಸುವಿಕೆ ನ.15ರಿಂದ ಆರಂಭ

Published 9 ಆಗಸ್ಟ್ 2024, 13:36 IST
Last Updated 9 ಆಗಸ್ಟ್ 2024, 13:36 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆಗಳಲ್ಲಿ ನ. 15ರಿಂದ ಕಬ್ಬು ನುರಿಸುವಿಕೆ ಆರಂಭಿಸಲು ತೀರ್ಮಾನಿಸಲಾಗಿದೆ.

ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಆ ಸಿಸ್ಮಾ (ಸೌಥ್ ಇಂಡಿಯನ್ ಶುಗರ್ ಮಿಲ್ಸ್ ಅಸೋಸಿಯೇಷನ್) ಸಭೆ ಗುರುವಾರ ನಡೆಯಿತು. ಈ ಸಭೆಯಲ್ಲಿ ಕಬ್ಬು ನುರಿಸುವಿಕೆ ಆರಂಭಿಸುವ ಕುರಿತು ಚರ್ಚೆ ನಡೆಯಿತು.

ನೆರೆಯ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ನ. 15ಕ್ಕಿಂತ ಮೊದಲೇ ಕಬ್ಬು ನುರಿಸುವಿಕೆ ಆರಂಭಿಸಿದರೆ, ರಾಜ್ಯದ ಗಡಿಭಾಗದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಸಮಸ್ಯೆ ಆಗಲಿದೆ. ಹೀಗಾಗಿ, ಮಹಾರಾಷ್ಟ್ರದಲ್ಲೂ ನ. 15ರಿಂದಲೇ ಕಬ್ಬು ನುರಿಸುವಿಕೆ ಆರಂಭಿಸುವುದು ಸೂಕ್ತ ಎಂದು ಸಿಸ್ಮಾ ಪದಾಧಿಕಾರಿಗಳು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಸಹಮತ ಸೂಚಿಸಿದ ಸಚಿವರು, ಈ ಬಗ್ಗೆ ಪತ್ರ ವ್ಯವಹಾರ ನಡೆಸುವ ಭರವಸೆ ನೀಡಿದರು.

‘ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ ಕರ್ನಾಟಕದಿಂದ ಕಬ್ಬು ಪೂರೈಕೆಯಾದರೆ ರಾಜ್ಯದಲ್ಲಿನ ಸಕ್ಕರೆ ಕಾರ್ಖಾನೆಗಳಿಗೆ ಸಮಸ್ಯೆಯಾಗಲಿದೆ. ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಕಬ್ಬು ಪೂರೈಕೆ ಆಗದಂತೆ ಕ್ರಮ ಕೈಗೊಳ್ಳಬೇಕು. ಆಯಾ ವರ್ಷದ ಸಕ್ಕರೆ ಇಳುವರಿ ಆಧರಿಸಿ ಕಬ್ಬಿಗೆ ನ್ಯಾಯಸಮ್ಮತ ಮತ್ತು ಪ್ರೋತ್ಸಾಹದಾಯಕ ದರ (ಎಫ್‌ಆರ್‌ಪಿ) ನಿಗದಿಪಡಿಸಬೇಕು. ಎಫ್‌ಆರ್‌ಪಿ ಪ್ರತಿವರ್ಷ ಹೆಚ್ಚಳವಾಗಲಿದ್ದು, ಅದೇ ರೀತಿ ಸಕ್ಕರೆ ಮತ್ತು ಎಥೆನಾಲ್ ಮಾರಾಟಕ್ಕೂ ಕನಿಷ್ಠ ದರ ನಿಗದಿಪಡಿಸಬೇಕು’ ಎಂದೂ ಸಿಸ್ಮಾ ಪದಾಧಿಕಾರಿಗಳು ಸಚಿವರಿಗೆ ಮನವಿ ಮಾಡಿದರು. 

‘ಸಕ್ಕರೆ ದಾಸ್ತಾನಿಗೆ ಶೇ 20ರಷ್ಟು ಸೆಣಬಿನ ಚೀಲಗಳ ಬಳಕೆ ಕಡ್ಡಾಯ ಮಾಡಲಾಗಿದೆ. ಸೆಣಬಿನ ಚೀಲಗಳನ್ನು ಬಳಸಿದರೆ ಸಕ್ಕರೆ ಗುಣಮಟ್ಟ ಹಾಳಾಗಲಿದೆ ಮತ್ತು ತೇವಾಂಶದಿಂದ ಸಮಸ್ಯೆ ಆಗಲಿದೆ. ಅಲ್ಲದೆ, ಸಕ್ಕರೆ ರಫ್ತಿಗೂ ತೊಂದರೆಯಾಗುತ್ತಿದೆ. ಸೆಣಬಿನ ಚೀಲಗಳ ಬಳಕೆ ಕಡ್ಡಾಯವನ್ನು ತೆರವುಗೊಳಿಸಬೇಕು’ ಎಂದೂ ಮನವಿ ಮಾಡಿದರು.

ಸಿಸ್ಮಾದ ಎಲ್ಲ ಬೇಡಿಕೆಗಳನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಸಕ್ಕರೆ ಕಾರ್ಖಾನೆಗಳ ಮಾಲೀಕರಾದ ಮುರುಗೇಶ ನಿರಾಣಿ, ಎಸ್.ಆರ್. ಪಾಟೀಲ, ಜಗದೀಶ ಗುಡಗುಂಟಿ, ಮಂಜುನಾಥ ಆರ್. ಕಬಾಡಿ, ಪ್ರಜ್ವಲ್ ಪಾಟೀಲ, ಉದಯಕುಮಾರ ಪುರಾಣಿಕಮಠ, ಸಂತೋಷ್ ಮೆಳ್ಳಿಗೇರಿ, ಕೆ.ಎಂ. ಮಂಜಪ್ಪ, ವಾದಿರಾಜ್, ಶಶಿಕಾಂತ್ ನಾಯಕ್, ವಿನಯ್ ದೇಶಪಾಂಡೆ, ರಮೇಶ ಪಾಟೀಲ ಮತ್ತಿತರರು ಸಭೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT