ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಘಾ ಮಠ ಆಡಳಿತಾಧಿಕಾರಿ ನೇಮಕ ರದ್ದುಪಡಿಸಿದ ಹೈಕೋರ್ಟ್‌

ಲಿಂಗಾಯತ–ವೀರಶೈವ ಮಠಗಳ ಕೊಡುಗೆಗೆ ಪ್ರಶಂಸೆ
Published 22 ಮೇ 2023, 15:11 IST
Last Updated 22 ಮೇ 2023, 15:11 IST
ಅಕ್ಷರ ಗಾತ್ರ

ಬೆಂಗಳೂರು: ಚಿತ್ರದುರ್ಗ ಮುರುಘಾ ಮಠಕ್ಕೆ ನಿವೃತ್ತ ಐಎಎಸ್‌ ಅಧಿಕಾರಿ ಪಿ.ಎಸ್‌.ವಸ್ತ್ರದ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ ಮತ್ತು ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ ಅಡಿ ಮುರುಘಾ ಶರಣರ ಅಧಿಕಾರ ಚಲಾವಣೆಗೆ ನಿರ್ಬಂಧ ವಿಧಿಸಿದ್ದ ಚಿತ್ರದುರ್ಗ ಸೆಷನ್ಸ್‌ ಕೋರ್ಟ್‌ ಆದೇಶವನ್ನೂ ಇದೇ ವೇಳೆ ವಜಾಗೊಳಿಸಲಾಗಿದೆ. ಈ ಕುರಿತಂತೆ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಪ್ರಕಟಿಸಿದೆ.

ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿದ್ದನ್ನು ಪ್ರಶ್ನಿಸಿ ಎಸ್‌ಜೆಎಂ ವಿದ್ಯಾಪೀಠದ ಅಧ್ಯಕ್ಷ, ಮಠದ ತಾತ್ಕಾಲಿಕ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಮತ್ತು ಭಕ್ತರು ಸಲ್ಲಿಸಿದ್ದ ರಿಟ್‌ ಅರ್ಜಿಗಳ ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ ಅವರು, ’ಮಠ ಮಾನ್ಯಗಳಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲದು‘ ಎಂಬ ಖಂಡತುಂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

’ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಕಾಯ್ದೆ–1997ಕ್ಕೆ ರಾಜ್ಯ ಸರ್ಕಾರ 2011ರಲ್ಲೇ ತಿದ್ದುಪಡಿ ತಂದಿದೆ. ಈ ತಿದ್ದುಪಡಿಯ ಅನುಸಾರ ಯಾವುದೇ ಮಠ, ಮಠಕ್ಕೆ ಹೊಂದಿಕೊಂಡ ದೇಗುಲಗಳನ್ನು ಶಾಸನದಿಂದ ಹೊರಗಿಡಲಾಗಿದೆ. ಈ ಕುರಿತ ತಿದ್ದುಪಡಿಯನ್ನು ಸುಪ್ರೀಂ ಕೋರ್ಟಿಗೂ ಸಲ್ಲಿಸಲಾಗಿದೆ‘ ಎಂಬ ಅಂಶವನ್ನು ತೀರ್ಪಿನಲ್ಲಿ ಕಾಣಿಸಿರುವ ನ್ಯಾಯಪೀಠ, ’ಸರ್ಕಾರವು ಮಠದ ವಿಷಯಗಳಲ್ಲಿ ಮಧ್ಯಪ್ರವೇಶಿಸಲು ಬರುವುದಿಲ್ಲ. ಶಾಸನಯುಕ್ತ ಅಧಿಕಾರ ಇದ್ದರೆ ಮಾತ್ರವೇ ಮಧ್ಯಪ್ರವೇಶ ಮಾಡಬಹುದು. ಹೀಗಾಗಿ, ಈ ಪ್ರಕರಣದಲ್ಲಿ ಆಡಳಿತಾಧಿಕಾರಿ ನೇಮಕಾತಿಯನ್ನು ಅಸಿಂಧುಗೊಳಿಸಲಾಗಿದೆ‘ ಎಂದು ಸ್ಪಷ್ಟಪಡಿಸಿದೆ. ಅಂತೆಯೇ, ’ಶಾಸನವೇ ಇಲ್ಲದೇ ಮಠ ಮತ್ತು ಮಠ ನಡೆಸುವ ಶಿಕ್ಷಣ ಸಂಸ್ಥೆಗಳ ವಿಷಯದಲ್ಲಿ ಸರ್ಕಾರ ಕೈ ಹಾಕುವಂತಿಲ್ಲ‘ ಎಂಬುದಕ್ಕೆ ಪೂರ್ವನಿದರ್ಶನವಾಗಿ 1954ರಲ್ಲಿ ನೀಡಲಾಗಿರುವ ಶಿರೂರು ಮಠದ ತೀರ್ಪನ್ನು ಉಲ್ಲೇಖಿಸಿದೆ.

ಭ್ರಮೆ ಬೇಡ: ’ಮಠದೊಳಗಣ ಕಷ್ಟವನ್ನು ಪರಿಹರಿಸಿಕೊಳ್ಳಲು ನಾಗರಿಕ ಸಮಾಜಕ್ಕೆ ಸಾಧ್ಯವಿಲ್ಲ ಎಂಬ ಭ್ರಮೆಯನ್ನು ಯಾವುದೇ ಸರ್ಕಾರ ಹೊಂದಿರಬಾರದು. ಮಠಗಳಲ್ಲಿ ನಡೆಯುವ ಅಪರಾ–ತಪರಾಗಳ ಬಗ್ಗೆ, ಸಂಘರ್ಷಗಳ ಬಗ್ಗೆ, ಭಕ್ತಾದಿಗಳು ಮತ್ತು ಸಮಾಜದ ಪ್ರಮುಖರು ತಮ್ಮಲ್ಲಿನ ಜಾಣ್ಮೆ, ಒ‌ಳ್ಳೆಯತನವನ್ನು ಕ್ರೋಡೀಕರಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕು. ವಿವಾದಿತ ಮಠದ ಪೀಠಾಧಿಪತಿ ಜೈಲಿನಲ್ಲಿದ್ದರೆ ಅಂತಹ ಮಠಾಧೀಶರಿಗೆ ನಿರ್ವಹಣೆಯ ಅಧಿಕಾರವೇನೊ ಇರಬಹುದು. ಆದರೆ, ನಿರ್ವಹಣೆ ಮಾಡಲು ಆಗುವುದಿಲ್ಲ. ಹಾಗಾಗಿ, ಸಮಾಜದ ಪ್ರಮುಖರೇ ಇದನ್ನು ತೀರ್ಮಾನ ಮಾಡಬೇಕು‘ ಎಂದು ನ್ಯಾಯಪೀಠ ಹೇಳಿದೆ. 

‘ಮುರುಘಾ ಮಠದ ಆಂತರಿಕ ಸಮಸ್ಯೆಯನ್ನು ಭಕ್ತಗಣ, ಸಮಾಜದ ಮುಖಂಡರು ಒಂದೆಡೆ ಕೂತು ಆರು ವಾರಗಳ ಒಳಗೆ ಯುದ್ಧೋಪಾದಿಯಲ್ಲಿ ಬಗೆಹರಿಸಿಕೊಳ್ಳಬೇಕು. ಈ ಸಮಯದಲ್ಲಿ ಆಡಳಿತಾಧಿಕಾರಿ ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬಾರದು. ಅಷ್ಟಕ್ಕೂ, ಮುರುಘಾ ಶರಣರ ವಿರುದ್ಧದ ಗುರುತರ ಆರೋಪಗಳು ಮತ್ತು ಅವರನ್ನು ಪೀಠದಿಂದ ಇಳಿಸುವ ಕುರಿತಂತೆ ಭಕ್ತರು ಸಿಪಿಸಿ-1908ರ ಕಲಂ 92ರ ಅನುಸಾರ ಅಸಲು ದಾವೆ ಸಲ್ಲಿಸಿ ಪರಿಹಾರ ಪಡೆಯಲು ಈ ಪ್ರಕರಣ ಸೂಕ್ತವಾಗಿದೆ‘ ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.

ಶ್ಲಾಘನೆ: ‘ಮಠಗಳ ಇತಿಹಾಸವನ್ನು ಅವಲೋಕಿಸಿದರೆ ಶಿಕ್ಷಣ ಕ್ಷೇತ್ರದಲ್ಲಿ ಲಿಂಗಾಯತ, ವೀರಶೈವ ಮಠಗಳ ಕೊಡುಗೆ ಅಪಾರವಾಗಿದೆ‘ ಎಂದು ಮುಕ್ತಕಂಠದ ಶ್ಲಾಘನೆ ವ್ಯಕ್ತಪಡಿಸಿರುವ ನ್ಯಾಯಪೀಠವು, ’ಈ ನಿಟ್ಟಿನಲ್ಲಿ ಸಿದ್ದಗಂಗಾ, ಸುತ್ತೂರು ಮತ್ತು ಚಿತ್ರದುರ್ಗ ಮುರುಘಾ ಮಠಗಳು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ನಾಡಿಗೆ ಅನವರತ  ಅನನ್ಯ ಸೇವೆ ಸಲ್ಲಿಸುತ್ತಿವೆ‘ ಎಂದು ಪ್ರಶಂಸಿಸಿದೆ. 

ಮಠಗಳ ಜಿಜ್ಞಾಸೆ: ಮಠಗಳು ಎಂದರೆ ಏನು, ಮಠದ ಪರಿಕಲ್ಪನೆ ಯಾವ ಶತಮಾನದಲ್ಲಿ ಆಯಿತು, ಮಠಗಳ ಉದ್ದೇಶ, ಕಾರ್ಯವ್ಯಾಪ್ತಿ, ಇವುಗಳಲ್ಲಿ ಸರ್ಕಾರದ ಹಸ್ತಕ್ಷೇಪ, ಕಾನೂನು, ಮಠ ಮತ್ತು ಸರ್ಕಾರಗಳ ನಡುವೆ ಇರುವ ಗೋಡೆ, ಸಂವಿಧಾನದಲ್ಲಿ ಇವಕ್ಕೆ ಕೊಡಮಾಡುವ ಹಕ್ಕುಬಾಧ್ಯತೆಗಳ ತೀರ್ಪುಗಳು, ಅಮೆರಿಕ, ಆಸ್ಟ್ರೇಲಿಯಾದ ಸುಪ್ರೀಂ ಕೋರ್ಟ್‌ ಮತ್ತು ಮದ್ರಾಸ್‌ ಹೈಕೋರ್ಟ್‌ ಪೂರ್ಣಪೀಠದ ತೀರ್ಪು, ನ್ಯಾಯಮೂರ್ತಿ ಬಿ.ಕೆ.ಮುಖರ್ಜಿ ಅವರ ಹಿಂದೂ ಧಾರ್ಮಿಕ ದತ್ತಿ ಕಾನೂನು ಮೇಲಿನ ಉಪನ್ಯಾಸ, ಮಠ ಮತ್ತು ಅವುಗಳ ಅಧಿಕಾರ ಹಾಗೂ ಬಂಧನಕ್ಕೆ ಒಳಪಟ್ಟ ಮಠಾಧಿಪತಿಗಳ ಸ್ಥಾನಮಾನ, ಬಂದೀಖಾನೆಯಿಂದ ಮಠದ ಉಸ್ತುವಾರಿಯ ಆಡಳಿತ... ಇತ್ಯಾದಿ ಅಂಶಗಳ ಕುರಿತಂತೆ ತೀರ್ಪಿನಲ್ಲಿ ಸವಿವರವಾಗಿ ಚರ್ಚಿಸಲಾಗಿದೆ.

ಶರಣರು ಆರೋಪಿ: ಚಿತ್ರದುರ್ಗ ಮುರುಘರಾಜೇಂದ್ರ ಬೃಹನ್ಮಠದ ಪೀಠಾಧಿಪತಿ ಮತ್ತು ಎಸ್‌ಜೆಎಂ ವಿದ್ಯಾಪೀಠದ ಅಧ್ಯಕ್ಷರೂ ಆದ ಶಿವಮೂರ್ತಿ ಮುರುಘರಾಜೇಂದ್ರ ಶರಣರು ‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012 (ಪೊಕ್ಸೊ), ಅತ್ಯಾಚಾರ, ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಗುರುತರವಾದ ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಶರಣರು 2022ರ ಸೆಪ್ಟೆಂಬರ್‌ 1ರಿಂದ ಚಿತ್ರದುರ್ಗ ನ್ಯಾಯಾಂಗ ಬಂಧನದಲ್ಲಿದ್ದು ಸದ್ಯ ಚಿತ್ರದುರ್ಗ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ಜೈಲಿನಿಂದಲೇ ಹಾಜರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್‌ಜೆಎಂ ವಿದ್ಯಾಪೀಠದ ದಿನನಿತ್ಯದ ಕಾರ್ಯ ಚಟುವಟಿಕೆಗಳಿಗೆ ಅನುವಾಗುವಂತೆ ಮೇಲುಸ್ತುವಾರಿ ನಡೆಸಲು, ಮಠದ ಸ್ಥಿರ–ಚರಾಸ್ತಿಗಳನ್ನು ಸಂರಕ್ಷಿಸಲು ಹಾಗೂ ಸಂಸ್ಥೆಯ ಹಣ ದುರುಪಯೋಗ ಆಗದಂತೆ ಲೆಕ್ಕಪತ್ರಗಳನ್ನು ನಿರ್ವಹಿಸುವ ದೃಷ್ಟಿಯಿಂದ ನಿವೃತ್ತ ಐಎಎಸ್‌ ಅಧಿಕಾರಿ ಬಿ.ಎಸ್‌.ವಸ್ತ್ರದ ಅವರನ್ನು ಮಠದ ಟ್ರಸ್ಟ್‌ ಮತ್ತು ಶಿಕ್ಷಣ ಸಂಸ್ಥೆಗೆ ಆಡಳಿತಾಧಿಕಾರಿಯನ್ನಾಗಿ ಸರ್ಕಾರ 2022ರ ಡಿಸೆಂಬರ್ 13ರಂದು ನೇಮಕ ಮಾಡಿತ್ತು. ಅವರು 2022ರ ಡಿಸೆಂಬರ್ 15ರಂದು ಅಧಿಕಾರ ಸ್ವೀಕರಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT