ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಬಲ ತುಂಬುವ ಸುದೀರ್ಘ ಹೋರಾಟದ ಪರಂಪರೆಯ ಡಿ.ಕೆ. ಶಿವಕುಮಾರ್, ಅಧಿಕಾರ ಹಸ್ತಾಂತರದ ಗೊಂದಲಗಳನ್ನೆಲ್ಲ ಕಳೆದುಕೊಂಡು ‘ಶುಭಮುಹೂರ್ತ’ದಲ್ಲಿ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಬುಧವಾರ ಸಂಜೆಯಿಂದಲೇ ಅವರ ಸರ್ಕಾರ ಕಾರ್ಯಾರಂಭ ಮಾಡಿದೆ.

ನೂತನ ಮುಖ್ಯಮಂತ್ರಿಯಾಗಿ ಲೋಕಭವನದ ಗಾಜಿನ ಮನೆಯಲ್ಲಿ ಸಂಭ್ರಮದ ನಡುವೆಯೇ, ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದರು.

ಉಪ ಮುಖ್ಯಮಂತ್ರಿಯಾಗಿ ಜಿ. ಪರಮೇಶ್ವರ ಮತ್ತು ಸಂಪುಟ ದರ್ಜೆಯ ಸಚಿವರುಗಳಾಗಿ 12 ಶಾಸಕರು ಕೂಡ ಇದೇ ಸಂದರ್ಭದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಸಂಪುಟದಲ್ಲಿ ಸ್ಥಾನ ಪಡೆದಿರುವವರ ಪೈಕಿ ಯತೀಂದ್ರ ಸಿದ್ದರಾಮಯ್ಯ ಮಾತ್ರ ಹೊಸ ಮುಖ. ಸಭಾಧ್ಯಕ್ಷರಾಗಿದ್ದ ಯು.ಟಿ. ಖಾದರ್ ಅವರಿಗೆ ಸಚಿವ ಹುದ್ದೆ ನೀಡಿರುವುದು ಹೊರತುಪಡಿಸಿದರೆ, ಉಳಿದ ಎಲ್ಲರೂ ಸಿದ್ದರಾಮಯ್ಯ ನೇತೃತ್ವದ ಸಂಪುಟದಲ್ಲಿದ್ದವರೇ. ಮೊದಲ ಕಂತಿನ ಸಂಪುಟದಲ್ಲಿ ಮಹಿಳೆಯರಿಗೆ ಅವಕಾಶ ಸಿಕ್ಕಿಲ್ಲ.

ಲೋಕಭವನದ ಪೂರ್ವಾಭಿಮುಖವಾಗಿ ಸಿದ್ದಪಡಿಸಲಾದ ವೇದಿಕೆಯಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಚಿವರಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಧಿಕಾರ ಪದ ಮತ್ತು ಗೋಪ್ಯತಾ ಪ್ರಮಾಣವಚನ ಬೋಧಿಸಿದರು. ನಾಡಿನ ಸರ್ವ ಸಮುದಾಯಗಳ 40ಕ್ಕೂ ಹೆಚ್ಚು ಸ್ವಾಮೀಜಿಗಳು, ಧರ್ಮ ಗುರುಗಳು, ವಿವಿಧ ಕ್ಷೇತ್ರಗಳ ಗಣ್ಯರು ಈ ಮಹತ್ವದ ಕ್ಷಣಕ್ಕೆ ಸಾಕ್ಷಿಯಾದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಕೇರಳಂ ಮುಖ್ಯಮಂತ್ರಿ ವಿ.ಡಿ. ಸತೀಶನ್, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಗ್ ಸುಖು, ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತಿತರರು ಉಪಸ್ಥಿತರಿದ್ದರು.

ಮಾರ್ದನಿಸಿದ ಘೋಷಣೆ: ಗಾಜಿನ ಮನೆಯಲ್ಲಿ ಶಿವಕುಮಾರ್ ಅಭಿಮಾನಿಗಳಿಂದ ‘ಡಿ.ಕೆ, ಡಿ.ಕೆ’ ಉದ್ಗಾರವು ಮಾರ್ದನಿಸಿತು. ಸಭಾಂಗಣದ ಇಕ್ಕೆಲಗಳಲ್ಲಿ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನೂತನ ಮುಖ್ಯಮಂತ್ರಿಗೆ ಹಸ್ತಲಾಘವ ಮಾಡಲು ಮುಗಿಬಿದ್ದರು. ಧರ್ಮಗುರುಗಳು, ವಿವಿಧ ಮಠಗಳ ಸ್ವಾಮೀಜಿಗಳು ಆಸೀನರಾಗಿದ್ದ ಕಡೆ ತೆರಳಿ ಶಿವಕುಮಾರ್ ಆಶೀರ್ವಾದ ಪಡೆದರು.

ಆದಿ ಚುಂಚನಗಿರಿ ಮಠದ ನಿರ್ಮಾಲಾನಂದನಾಥ ಸ್ವಾಮೀಜಿ ಅವರು ರುದ್ರಾಕ್ಷಿ ಮಾಲೆಯನ್ನು ಶಿವಕುಮಾರ್ಗೆ ಹಾಕಿ ಅಭಿನಂದಿಸಿದರು. ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಕರಿ ಕಂಬಳಿ ಹೊದೆಸಿದರೆ, ಇನ್ನೂ ಕೆಲವು ಸ್ವಾಮೀಜಿಗಳು ರುದ್ರಾಕ್ಷಿ ಮಾಲೆ ನೀಡಿದರು. ಕ್ರೈಸ್ತ ಧರ್ಮಗುರುಗಳು ಶಿಲುಬೆಯಿರುವ ದಾರವನ್ನು ಕೊರಳಿಗೆ ಹಾಕಿ ಹಾರೈಸಿದರು. ಸಂತ ಸೇವಾಲಾಲ್ ಸ್ವಾಮೀಜಿ, ಲಂಬಾಣಿ ಕುಸುರಿ ಕಲೆಯ ಶಲ್ಯ ನೀಡಿದರು. ಸುಬ್ರಹ್ಮಣ್ಯ ಕ್ಷೇತ್ರದ ವಿದ್ಯಾಪ್ರಸನ್ನ ತೀರ್ಥರು ಸೇರಿದಂತೆ ಅನೇಕರು ಹರಸಿದರು. ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಮುಗಿದ ಬಳಿಕ ಲೋಕಭವನದಿಂದ ನೇರವಾಗಿ ವಿಧಾನಸೌಧಕ್ಕೆ ತೆರಳಿದ ಶಿವಕುಮಾರ್, ತಮ್ಮ ಸಂಪುಟದ ಮೊದಲ ಸಭೆ ನಡೆಸಿದರು.

ಅಂತಿಮ ಕ್ಷಣದ ಬದಲಾವಣೆ: ಭಾರಿ ಕುತೂಹಲ ಮೂಡಿಸಿದ್ದ ಸಚಿವರ ಪಟ್ಟಿಯು ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಹೊರಬಿತ್ತು. ಹೈಕಮಾಂಡ್ ನಾಯಕರ ಜೊತೆ ಚರ್ಚಿಸಿ, ಪಟ್ಟಿಗೆ ಅಂತಿಮ ಸ್ಪರ್ಶ ನೀಡಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಡಿ.ಕೆ. ಶಿವಕುಮಾರ್ ಮತ್ತು ಉಸ್ತುವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ರಾತ್ರಿ ದೆಹಲಿಯಿಂದ ವಾಪಸಾಗಿದ್ದರು.

ತಡರಾತ್ರಿ ಮತ್ತೆ ಸಭೆ ಸೇರಿದ್ದ ಕಾಂಗ್ರೆಸ್ ವರಿಷ್ಠರು ಹಿರಿಯ ಮತ್ತು ಅನುಭವಿ ಶಾಸಕರನ್ನು ಒಳಗೊಂಡ ಪಟ್ಟಿಯನ್ನು ಅಂತಿಮಗೊಳಿಸಿದ್ದರು. ಸಿದ್ದರಾಮಯ್ಯ ಅವರ ಒತ್ತಡಕ್ಕೆ ಮಣಿದು ಜಿ. ಪರಮೇಶ್ವರ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಕರುಣಿಸಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಪ್ತರಾಗಿರುವ ಶರಣಪ್ರಕಾಶ ಪಾಟೀಲ ಹೆಸರು ಕೊನೆ ಕ್ಷಣದಲ್ಲಿ ಪಟ್ಟಿಗೆ ಸೇರ್ಪಡೆ ಆಗಿತ್ತು.

ಸಂಪುಟದಲ್ಲಿ ಜಾತಿ ಲೆಕ್ಕಾಚಾರ

ಒಕ್ಕಲಿಗ–2, ರೆಡ್ಡಿ ಒಕ್ಕಲಿಗ–1, ವೀರಶೈವ–ಲಿಂಗಾಯತ–3, ಪರಿಶಿಷ್ಟ ಜಾತಿ–3, ಪರಿಶಿಷ್ಟ ಪಂಗಡ–1, ಕುರುಬ–2, ಕ್ರೈಸ್ತ–1, ಮುಸ್ಲಿಂ–1

ಮೊದಲ ಹಂತದ ಸಂಪುಟದಲ್ಲಿ ನಾಲ್ವರು ದಲಿತರು, ಇಬ್ಬರು ಒಕ್ಕಲಿಗ, ಮೂವರು ಲಿಂಗಾಯತ, ಅಲ್ಪಸಂಖ್ಯಾತ ಮತ್ತು ಕುರುಬ ಸಮುದಾಯದ ತಲಾ ಇಬ್ಬರು, ಒಬ್ಬರು ರೆಡ್ಡಿ ಸಮುದಾಯದವರಿಗೆ ಅವಕಾಶ ನೀಡಲಾಗಿದೆ. ಆದರೆ, ಪ್ರಾದೇಶಿಕವಾರು ಹಂಚಿಕೆ ಆಗಿಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒಕ್ಕಲಿಗ. ದಲಿತರ ಪೈಕಿ ಜಿ. ಪರಮೇಶ್ವರ, ಪ್ರಿಯಾಂಕ್ ಖರ್ಗೆ ಬಲಗೈ ಸಮುದಾಯದವರು. ಕೆ.ಎಚ್. ಮುನಿಯಪ್ಪ ಎಡಗೈ ಗುಂಪಿನವರು. ಲಿಂಗಾಯತ ಸಮುದಾಯದಿಂದ ಎಂ.ಬಿ. ಪಾಟೀಲ, ಶರಣಪ್ರಕಾಶ್ ಪಾಟೀಲ, ಈಶ್ವರ್ ಖಂಡ್ರೆಗೆ ಅವಕಾಶ ನೀಡಲಾಗಿದೆ. ಪರಿಶಿಷ್ಟ ಪಂಗಡದಿಂದ ಸತೀಶ ಜಾರಕಿಹೊಳಿ, ಒಕ್ಕಲಿಗ ಸಮುದಾಯದಿಂದ ಕೃಷ್ಣ ಬೈರೇಗೌಡ ಸ್ಥಾನ ಪಡೆದಿದ್ದಾರೆ. ಅಲ್ಪಸಂಖ್ಯಾತ ಸಮುದಾಯದಿಂದ ಯು.ಟಿ. ಖಾದರ್ ಮತ್ತು ಕೆ.ಜೆ. ಜಾರ್ಜ್, ರೆಡ್ಡಿ ಸಮುದಾಯದಿಂದ ರಾಮಲಿಂಗಾರೆಡ್ಡಿ, ಕುರುಬ ಸಮುದಾಯದಿಂದ ಬೈರತಿ ಸುರೇಶ್, ಯತೀಂದ್ರ ಸಿದ್ದರಾಮಯ್ಯ ಅವರಿಗೆ ಅವಕಾಶ ನೀಡಲಾಗಿದೆ.

ಸಂಪುಟದಲ್ಲಿ ಯಾರ್ಯಾರು?

ಮುಖ್ಯಮಂತ್ರಿ: ಡಿ.ಕೆ. ಶಿವಕುಮಾರ್

ಉಪ ಮುಖ್ಯಮಂತ್ರಿ: ಜಿ. ಪರಮೇಶ್ವರ

ಸಂಪುಟ ಸಚಿವರು...

ಕೆ.ಎಚ್. ಮುನಿಯಪ್ಪ

ಕೆ.ಜೆ. ಜಾರ್ಜ್

ಎಂ.ಬಿ. ಪಾಟೀಲ

ರಾಮಲಿಂಗಾರೆಡ್ಡಿ

ಸತೀಶ ಜಾರಕಿಹೊಳಿ

ಕೃಷ್ಣ ಬೈರೇಗೌಡ

ಪ್ರಿಯಾಂಕ್ ಖರ್ಗೆ

ಯು.ಟಿ. ಖಾದರ್

ಈಶ್ವರ್ ಖಂಡ್ರೆ

ಯತೀಂದ್ರ ಸಿದ್ದರಾಮಯ್ಯ

ಬೈರತಿ ಸುರೇಶ್

ಶರಣಪ್ರಕಾಶ್ ಪಾಟೀಲ

ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್

ಇನ್ನು ಮುಂದೆ ಶಾಲಾ–ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳಿಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಉಚಿತ ಬಸ್ ಪಾಸ್ ವಿತರಿಸುವ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಚೊಚ್ಚಲ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಶಿವಕುಮಾರ್ ಅವರು ಈ ಮಾಹಿತಿ ನೀಡಿದರು. ‘ಈವರೆಗೆ ವಿದ್ಯಾರ್ಥಿನಿಯರಿಗೆ ಮಾತ್ರ ಉಚಿತ ಪಾಸ್ ನೀಡಲಾಗುತ್ತಿತ್ತು. ಗಂಡು ಮಕ್ಕಳಿಗೆ ಉಚಿತ ಪಾಸ್ ಸಿಗುತ್ತಿರಲಿಲ್ಲ. ಇನ್ನು ಮುಂದೆ ಪ್ರಾಥಮಿಕ ಶಾಲಾ ಹಂತದಿಂದ ಪದವಿ ಕಾಲೇಜು ಹಂತದವರೆಗೆ ಎಲ್ಲರಿಗೂ ಉಚಿತ ಪಾಸ್ ನೀಡಲಾಗುವುದು’ ಎಂದರು.

‘ರಾಜ್ಯದಲ್ಲಿ 10 ಸಾವಿರ ಭಾರತ್ ಜೋಡೊ ಯುವಕ ಸಂಘಗಳನ್ನು ಸ್ಥಾಪಿಸಲಾಗುವುದು. ಗ್ರಾಮಾಂತರ ಪ್ರದೇಶದಲ್ಲಿ 6,000 ಮತ್ತು ನಗರ ಪ್ರದೇಶಗಳಲ್ಲಿ 4,000 ಸಂಘಗಳನ್ನು ಸ್ಥಾಪಿಸಲಾಗುವುದು. ಪ್ರತಿ ಸಂಘಕ್ಕೆ ಸರ್ಕಾರದ ವತಿಯಿಂದ ₹10 ಲಕ್ಷ ನೆರವು ನೀಡಲಾಗುವುದು. ಈ ಸಂಘಗಳ ಮೂಲಕ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಮತ್ತು ನಾಯಕತ್ವ ರೂಪಿಸುವುದಕ್ಕೆ ಆದ್ಯತೆ ನೀಡಲಾಗುವುದು’ ಎಂದು ಶಿವಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.