ದಾವಣಗೆರೆ/ಚಿಕ್ಕಮಗಳೂರು: ರಾಜ್ಯದ ಕೆಲವೆಡೆ ಸೋಮವಾರ ಮಳೆಯಾಗಿದೆ. ದಾವಣಗೆರೆ ನಗರವೂ ಸೇರಿ ಜಿಲ್ಲೆಯ ವಿವಿಧೆಡೆ ಬಿರುಗಾಳಿ ಸಹಿತ ಉತ್ತಮ ಮಳೆ ಸುರಿದಿದೆ.
ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಗುಡುಗು ಸಹಿತ ಭಾರಿ ಮಳೆ ಸುರಿಯಿತು. ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ಬಿಸಿಲು ಮತ್ತು ವಿಪರೀತ ಸೆಕೆ ವಾತಾವರಣ ಇತ್ತು. ಸಂಜೆ ಬಳಿಕ ಧಾರಾಕಾರ ಮಳೆ ಸುರಿಯಿತು. ಕಳಸ, ಕೊಪ್ಪ, ಬಾಳೆಹೊನ್ನೂರು, ಎನ್.ಆರ್.ಪುರ ಸುತ್ತಮತ್ತ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ.
ಬಾಳೆಹೊನ್ನೂರು, ಕಳಸ ತಾಲ್ಲೂಕಿನ ಸಂಸೆಯಲ್ಲಿ ಅರ್ಧಗಂಟೆ ಸುರಿದ ಮಳೆಗೆ ರಸ್ತೆ ಮತ್ತು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು. ಸೋಮವಾರ ನಸುಕಿನಲ್ಲಿ ಆರಂಭವಾದ ಮಳೆ ಚನ್ನಗಿರಿ ತಾಲ್ಲೂಕಿನಲ್ಲಿ ಉತ್ತಮವಾಗಿ ಸುರಿದಿದೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನಲ್ಲಿ ಭಾರಿ ಮಳೆಯಾಗಿದೆ. ತಾಲ್ಲೂಕಿನ ಚಿಕ್ಕಜಾಜೂರು ಹೋಬಳಿ ವ್ಯಾಪ್ತಿಯಲ್ಲಿ ಕೆಲ ಮನೆಗಳ ಗೋಡೆಗಳು ಕುಸಿದಿದ್ದು, ನಿವಾಸಿಗಳಿಗೆ ಸಮಸ್ಯೆ ಉಂಟಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರದ ಸುತ್ತಮುತ್ತ ರಭಸದ ಮಳೆ ಸುರಿದಿದ್ದು, ಭತ್ತದ ಗದ್ದೆಗಳು, ಅಡಿಕೆ ತೋಟಗಳು ಜಲಾವೃತವಾಗಿವೆ. ಗುಡುಗು, ಮಿಂಚು ಸಹಿತ ಅಬ್ಬರದ ಮಳೆಯಿಂದಾಗಿ ಮುಂಬಾಳು ಗ್ರಾಮದ ನೂರಾರು ಎಕರೆ ಜಮೀನು ಜಲಾವೃತವಾಗಿದೆ.
ಬೀದರ್ ವರದಿ: ಜಿಲ್ಲೆಯ ಹುಲಸೂರ ಮತ್ತು ಕಮಲನಗರದಲ್ಲಿ ಬಿರುಸಿನ ಮಳೆಯಾಗಿದೆ. ಭಾನುವಾರ ರಾತ್ರಿಯಿಂದ ಬಿಟ್ಟು ಬಿಟ್ಟು ವರ್ಷಧಾರೆಯಾಗುತ್ತಿದೆ. ಬೀದರ್ ನಗರ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಜಿಟಿಜಿಟಿ ಮಳೆಯಾಗಿದೆ.
ಚಾಮರಾಜನಗರ ವರದಿ: ಜಿಲ್ಲೆಯಾದ್ಯಂತ ಸೋಮವಾರ ಉತ್ತಮ ಮಳೆ ಸುರಿಯಿತು. ರಾಜಕಾಲುವೆ ಉಕ್ಕಿದ ಪರಿಣಾಮ ಬಿ.ರಾಚಯ್ಯ ಜೋಡಿ ರಸ್ತೆಗೆ ತ್ಯಾಜ್ಯ ಹರಿದು ಸುಗಮ ಸಂಚಾರಕ್ಕೆ ಅಡ್ಡಿಯಾಯಿತು. ಚೆನ್ನಾಪುರದ ಮೊಳೆ ರಸ್ತೆಯಲ್ಲಿ ಚರಂಡಿ ತುಂಬಿ ರಸ್ತೆಗೆ ಹರಿದು ನಿವಾಸಿಗಳು ಸಮಸ್ಯೆ ಅನುಭವಿಸಿದರು.
ಹುಬ್ಬಳ್ಳಿ ವರದಿ: ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಕೆಲವೆಡೆ ರಭಸದ ಮಳೆಯಾಗಿದೆ. ವಿಜಯಪುರ ಜಿಲ್ಲೆ ನಾಲತವಾಡ ಪಟ್ಟಣದಲ್ಲಿ ಮಧ್ಯಾಹ್ನ ಒಂದು ಗಂಟೆಗೂ ಹೆಚ್ಚು ಸಮಯ ರಭಸದ ಮಳೆಯಾದ್ದರಿಂದ ಸಂತೆ ಮಾರುಕಟ್ಟೆ ಅಸ್ತವ್ಯಸ್ತಗೊಂಡಿತು.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣ ಸೇರಿ ಗ್ರಾಮೀಣ ಪ್ರದೇಶದಲ್ಲಿ ನಸುಕಿನಲ್ಲಿ ಹಾಗೂ ಸಂಜೆ ಗುಡುಗು-ಸಿಡಿಲಿನ ಆರ್ಭಟದೊಂದಿಗೆ ಒಂದು ಗಂಟೆಗೂ ಹೆಚ್ಚು ಸಮಯ ಧಾರಾಕಾರ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.