ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಪೊಲೀಸರಿಂದ ಕಿರುಕುಳ: ಎಚ್‌ಡಿಕೆ ಆಕ್ರೋಶ

Last Updated 3 ನವೆಂಬರ್ 2022, 12:47 IST
ಅಕ್ಷರ ಗಾತ್ರ

ಬೆಂಗಳೂರು: ಬೈಕ್‌ನಲ್ಲಿ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಹೆಲ್ಮೆಟ್‌ ಧರಿಸಿಲ್ಲ ಎಂಬ ಕಾರಣಕ್ಕೆ ದಂಪತಿಗೆ ಪೊಲೀಸರು ಕಿರುಕುಳ ನೀಡಿರುವ ಕುರಿತು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ವಿಡಿಯೊ ಹಂಚಿಕೊಂಡಿದ್ದಾರೆ. ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಪೊಲೀಸ್‌ ವ್ಯವಸ್ಥೆಯನ್ನು ಹಾಳು ಮಾಡಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯದಲ್ಲಿ ದಂಪತಿ ಬೈಕ್‌ನಲ್ಲಿ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಹೆಲ್ಮೆಟ್‌ ಧರಿಸದ ಕಾರಣಕ್ಕೆ ಅಡ್ಡಗಟ್ಟಿದ ಪೊಲೀಸರು ಬೈಕಿನ ಕೀ ಕಿತ್ತುಕೊಂಡು ಕಿರುಕುಳ ನೀಡಿದ್ದಾರೆ. ಹಣಕ್ಕಾಗಿ ಪೀಡಿಸಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಘಟನೆಯ ಕುರಿತು ವಿಡಿಯೊ ತುಣುಕುಗಳು ಸೇರಿದಂತೆ ಸರಣಿ ಟ್ವೀಟ್‌ ಮಾಡಿರುವ ಕುಮಾರಸ್ವಾಮಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಹಣವಿಲ್ಲದೇ ದಂಪತಿ ರಸ್ತೆಯಲ್ಲೇ ಪರದಾಡಿದ್ದಾರೆ. ಆ ಮಗುವಿನ ತಂದೆ ಹಣಕ್ಕಾಗಿ ಒದ್ದಾಡಿದ್ದಾರೆ. ಆ ತಾಯಿ ಅನಾರೋಗ್ಯಕ್ಕೆ ತುತ್ತಾಗಿದ್ದ ಮಗುವನ್ನು ರಸ್ತೆ ನಡುವೆಯೇ ಮಡಿಲಲ್ಲಿಟ್ಟುಕೊಂಡು ಅನುಭವಿಸಿದ ವೇದನೆ ಬಿಜೆಪಿ ಸರ್ಕಾರದ ಕೆಟ್ಟ ಆಡಳಿತಕ್ಕೆ ಹಿಡಿದ ಕನ್ನಡಿ. ಮನುಷ್ಯತ್ವ ಸತ್ತ ಸರ್ಕಾರದ ಇನ್ನೊಂದು ಕರಾಳಮುಖ ಎನ್ನದೇ ವಿಧಿ ಇಲ್ಲ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ಮಗುವಿನ ಅನಾರೋಗ್ಯದಿಂದ ಆತಂಕಗೊಂಡಿದ್ದ ದಂಪತಿಯೊಂದಿಗೆ ಪೊಲೀಸರು ಹೀಗೆ ನಡೆದುಕೊಂಡಿದ್ದು ಅಕ್ಷಮ್ಯ ಮತ್ತು ಹೇಯ. "ದಮ್ಮಯ್ಯ, ನಮ್ಮಲ್ಲಿ ಹಣವಿಲ್ಲ, ದಯವಿಟ್ಟು ಬಿಟ್ಟುಬಿಡಿ" ಎಂದು ಬೇಡಿಕೊಂಡರೂ ಪೊಲೀಸರು ದಯೆ ತೋರಿಸಿಲ್ಲ. ದಂಡದ ಮಾತು ಹೇಳುತ್ತಲೇ ಪೊಲೀಸರು ಹಣಕ್ಕಾಗಿ ಪೀಡಿಸಿರುವುದು ಪೈಶಾಚಿಕ ನಡವಳಿಕೆ, ಇಲಾಖೆಯೇ ತಲೆ ತಗ್ಗಿಸುವಂತದ್ದು ಎಂದು ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ಆ ಮಗುವಿನ ತಂದೆ ಕೊನೆಗೂ ಗೆಳೆಯರೊಬ್ಬರಿಂದ ಹಣ ಪಡೆದು ತಮ್ಮ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡು ದಂಡ ಕಟ್ಟಿದ ಮೇಲೆ ಪೊಲೀಸರು ಬೈಕ್ ಬಿಟ್ಟು ಕಳಿಸಿದ್ದಾರೆ. ಬದಲಿಗೆ ದಂಡದ ರಸೀತಿ ಕೊಟ್ಟು, ಆ ನಂತರ ದಂಡ ಕಟ್ಟಿ ಎಂದು ಪೊಲೀಸರು ಹೇಳಬಹುದಿತ್ತು. ಹಾಗೆ ಮಾಡದೇ ಪೊಲೀಸರು ದಂಡಪ್ರಯೋಗದ ಹೆಸರಿನಲ್ಲಿ ಹಿಂಸೆ ನೀಡಿದ್ದಾರೆ. ಕೂಡಲೇ ಆ ಪೊಲೀಸ್ ಸಿಬ್ಬಂದಿಯ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ವಹಿಸಬೇಕು ಹಾಗೂ ಇಂಥ ಮನಃಸ್ಥಿತಿಯುಳ್ಳ ಪೊಲೀಸ್ ಸಿಬ್ಬಂದಿಯ ಮನಃಪರಿವರ್ತನೆ ಮಾಡಬೇಕು. ಹಿರಿಯ ಅಧಿಕಾರಿಗಳು ಈ ಬಗ್ಗೆ ಹೆಚ್ಚು ಮುತುವರ್ಜಿ, ಎಚ್ಚರಿಕೆ ವಹಿಸಬೇಕು ಎಂದು ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

ಗೃಹ ಸಚಿವರು ಈ ಬಗ್ಗೆ ಜನರಿಗೆ ಉತ್ತರ ನೀಡಬೇಕಲ್ಲದೆ, ನೊಂದ ದಂಪತಿಗೆ ಸಾಂತ್ವನ ಹೇಳಲೇಬೇಕು. ಇಂಥ ಘಟನೆಗಳು ರಾಜ್ಯದಲ್ಲಿ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಹಾಗೂ ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಯನ್ನಾಗಿ ಮಾಡಲು ಎಲ್ಲಾ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT