ಬೆಂಗಳೂರು: ಇಲ್ಲಿನ ನೃಪತುಂಗ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವ ಉದ್ದೇಶಿಸಿ ಮಾತನಾಡಿದ ಯುಜಿಸಿ ಅಧ್ಯಕ್ಷ ಪ್ರೊ. ಮಾಮಿದಾಳ ಜಗದೀಶ್ ಕುಮಾರ್, ಭಾಷಣದುದ್ದಕ್ಕೂ ರಾಮಾಯಣ, ಮಹಾಭಾರತದ ಪಾತ್ರ ಮತ್ತು ಪ್ರಸಂಗಗಳನ್ನು ಉಲ್ಲೇಖಿಸಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
‘ರಾಮ ತನ್ನ 16–17ನೇ ವಯಸ್ಸಿನಲ್ಲಿ ತಾನು ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಮುಂದಾದ. ನೀವೂ ಹಾಗೆಯೇ ಹುಡುಕಾಟ ನಡೆಸಬೇಕು. ಭವಿಷ್ಯ ಹೇಗಿರಬೇಕು ಎಂಬ ಪ್ರಶ್ನೆ ನಿಮ್ಮ ಮುಂದಿರಬೇಕು. 2050ರ ವೇಳೆಗೆ ವಿಶ್ವದ ಜನಸಂಖ್ಯೆ 900 ಕೋಟಿ ದಾಟಲಿದೆ. ಈಗಿರುವ ಸಂಪನ್ಮೂಲದಲ್ಲೇ ಅಷ್ಟೂ ಜನ ಬದುಕಬೇಕಾದ ಸವಾಲು ಎದುರಾಗುತ್ತದೆ. ಅಂತಹ ಸವಾಲುಗಳಿಗೆ ಪರಿಹಾರ ಹುಡುಕುವ ಅವಕಾಶ ನಿಮ್ಮೆದುರು ಇದೆ’ ಎಂದರು.
‘ಭಗೀರಥ ಹಲವು ಪ್ರಯತ್ನದ ನಂತರ ಭೂಮಿಗೆ ಗಂಗೆಯ ತಂದ. ಅದೇ ರೀತಿ ಸವಾಲುಗಳನ್ನು ಮೈಮೇಲೆ ಎಳೆದುಕೊಳ್ಳುವುದನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಹಲವು ವೈಫಲ್ಯಗಳ ನಂತರ ಪ್ರತಿಫಲ ದೊರೆಯುತ್ತದೆ’ ಎಂದರು.
‘ಲಂಕೆಗೆ ಸಮುದ್ರ ದಾಟುವುದು ಹೇಗೆ ಎಂದು ಹನುಮಂತ ಯೋಚನೆಯಲ್ಲಿದ್ದ. ಅವನಲ್ಲಿ ಸಮುದ್ರ ದಾಟುವ ಶಕ್ತಿ ಇದೆ ಎಂದು ಪ್ರೋತ್ಸಾಹಿಸಿದ್ದು ಜಾಂಬವಂತ. ಹೀಗೆ ವಿದ್ಯಾರ್ಥಿಗಳಿಗೆ ಅವರಲ್ಲಿನ ಶಕ್ತಿಯ ಅರಿವನ್ನು ಮಾಡಿಸುವ ಕೆಲಸ ವಿಶ್ವವಿದ್ಯಾಲಯಗಳು, ಶಿಕ್ಷಕರು ದುಡಿಯಬೇಕು’ ಎಂದರು.