ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳಿಂದಲೇ ‘ಅಸ್ಪೃಶ್ಯತೆ’ ಆಚರಣೆ! ಏನಿದು ಪ್ರಕರಣ

ಜಾತಿ ಕಾರಣಕ್ಕೆ ಪ್ರಾಧ್ಯಾಪಕನಿಗೆ ಡಿಮಾನ್ಸ್‌ನಲ್ಲಿ ಹುದ್ದೆ ನಿರಾಕರಣೆ
Published 25 ಮೇ 2023, 0:29 IST
Last Updated 25 ಮೇ 2023, 0:29 IST
ಅಕ್ಷರ ಗಾತ್ರ

ಬೆಂಗಳೂರು: ಅಸ್ಪೃಶ್ಯತೆ ಆಚರಣೆಯಲ್ಲಿರುವ ಕಾರಣಕ್ಕೆ ಪ್ರಾಧ್ಯಾಪಕ ಡಾ. ಬಿ. ರಮೇಶ್‌ ಬಾಬು ಅವರಿಗೆ ಡಿಮಾನ್ಸ್‌ನಲ್ಲಿ (ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ) ಕರ್ತವ್ಯ ನಿರ್ವಹಿಸಲು ಅವಕಾಶ ಕೊಡದೇ ಇರುವ ಪ್ರಕರಣ ಪತ್ತೆಯಾಗಿದೆ. 

‘ಅಸ್ಪೃಶ್ಯತೆ ಚಾಲ್ತಿಯಲ್ಲಿ ಇರುವುದರಿಂದಾಗಿ ಮೂರು ವರ್ಷಗಳಿಂದ ಶೋಷಣೆಗೆ ಒಳಗಾಗಿರುವ ಡಾ.ಬಿ. ರಮೇಶ್ ಬಾಬು, ಮತ್ತವರ ಕುಟುಂಬ ಸದಸ್ಯರು ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ. ಅವರು ಕರ್ತವ್ಯದಲ್ಲಿ ಮುಂದುವರಿಯಲು ತಕ್ಷಣ ಆದೇಶ ಹೊರಡಿಸಬೇಕು’ ಎಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಐಜಿ ವೈದ್ಯಕೀಯ ಶಿಕ್ಷಣ ಇಲಾಖೆಗೆ ಸೂಚಿಸಿದ್ದಾರೆ.

‘ಪರಿಶಿಷ್ಟರಿಗೆ ಮೀಸಲಾದ ಬ್ಯಾಕ್‌ಲಾಗ್‌ ಹುದ್ದೆಯಲ್ಲಿ ರಮೇಶ್‌ ಬಾಬು ಅವರಿಗೆ ಉದ್ಯೋಗ ಮಾಡುವ ಹಕ್ಕು ಸ್ಥಿರೀಕರಿಸಿ, ಇತರ ವರ್ಗದ ವ್ಯಕ್ತಿಗಳಿಗೆ ನೀಡುವಂತೆ ಅವರಿಗೂ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. ಆದೇಶದ ಪ್ರತಿಯನ್ನು 10 ದಿನಗಳ ಒಳಗೆ ನಿರ್ದೇಶನಾಲಯಕ್ಕೆ ಸಲ್ಲಿಸಬೇಕು. ತಪ್ಪಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಇಲಾಖೆಯ ಅಧೀನ ಕಾರ್ಯದರ್ಶಿಗೆ ಡಿಐಜಿ ಎಚ್ಚರಿಕೆ ನೀಡಿದ್ದಾರೆ. ಪತ್ರವನ್ನು ಎಡಿಜಿಪಿ ಅನುಮೋದಿಸಿದ್ದಾರೆ.

ರಿಮ್ಸ್‌ನಿಂದ (ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ) ಡಿಮಾನ್ಸ್‌ಗೆ ವರ್ಗಾವಣೆಯಾಗಿದ್ದರೂ ಕರ್ತವ್ಯ ನಿರ್ವಹಿಸಲು ಅವಕಾಶ ನಿರಾಕರಿಸಲಾಗಿದೆ ಎಂದು ಆರೋಪಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ (ದೌರ್ಜನ್ಯಗಳ ತಡೆ) ಕಾಯ್ದೆಯಡಿ ಪೊಲೀಸರಿಗೆ ರಮೇಶ್‌ ಬಾಬು ದೂರು ನೀಡಿದ್ದರು.

‘ಈ ಕಾಯ್ದೆಯ ನಿಯಮ 12 (4)ರಲ್ಲಿ ಎಫ್‌ಐಆರ್ ದಾಖಲಾದ ಏಳು ದಿನಗಳ ಒಳಗೆ ಬಾಧಿತರ ಹಕ್ಕುಗಳನ್ನು ಅನುಷ್ಠಾನ ಮಾಡಬೇಕಿದೆ. ನಿರ್ದೇಶನಾಲಯ ಸೂಚನೆ ನೀಡಿ ಎಂಟು ತಿಂಗಳಾದರೂ ಆದೇಶ ಜಾರಿ ಮಾಡಿಲ್ಲ. ಆಡಳಿತ ವಿವೇಚನೆ ದುರ್ಬಳಕೆ ಮಾಡಿಕೊಂಡು ಆರೋಪಿತರ ಜೊತೆ ವ್ಯವಹಾರ ಮಾಡಿ, ಅವರ ಅಭಿಪ್ರಾಯ ಪಡೆಯಬೇಕೆಂದು ಹೇಳಿಕೊಂಡು ಸಂತ್ರಸ್ತರ ಹಕ್ಕುಗಳನ್ನು ಅನುಷ್ಠಾನ ಮಾಡಿಲ್ಲ’ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ. 

ಏನಿದು ಪ್ರಕರಣ: ರಮೇಶ್‌ ಬಾಬು 2019ರ ಡಿ. 19ರಂದು ಡಿಮಾನ್ಸ್‌ಗೆ ವರ್ಗಾವಣೆಯಾಗಿದ್ದರು. ಆ ಹೊತ್ತಿನಲ್ಲೇ, ಪ್ರಾಧ್ಯಾಪಕ ಹುದ್ದೆ ಬಡ್ತಿಗೆ ಅರ್ಹರಾಗಿದ್ದ ರಾಘವೇಂದ್ರ ನಾಯಕ, ಬಾಬುರವರ ವರ್ಗಾವಣೆಗೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ಹೀಗಾಗಿ, ವರ್ಗಾವಣೆಯನ್ನು 2020ರ ಫೆ. 17ರಂದು ಸರ್ಕಾರ ಹಿಂಪಡೆದಿತ್ತು. ಆದರೆ, ತಡೆಯಾಜ್ಞೆಗೆ ನಂತರ ತಡೆ ನೀಡಿದ ಹೈಕೋರ್ಟ್‌, ಅಂತಿಮ ತೀರ್ಮಾನ ತೆಗೆದುಕೊಳ್ಳುವಂತೆ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿತ್ತು. ರಮೇಶ್‌ಬಾಬು ರಿಮ್ಸ್‌ನಲ್ಲಿ ಕರ್ತವ್ಯ ನಿರ್ವಹಿಸಬೇಕು. ಅಲ್ಲಿಯವರೆಗಿನ ಬಾಕಿ ವೇತನವನ್ನು ಡಿಮಾನ್ಸ್ ನೀಡಬೇಕು ಎಂದು ಡಿ. 8ರಂದು ಅವರು ಆದೇಶಿಸಿದ್ದರು.

ಹೈಕೋರ್ಟ್‌ ಆದೇಶದಂತೆ 2021ರ ಜುಲೈ 2ರಂದು ರಿಮ್ಸ್‌ನಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದ ರಮೇಶ್‌ಬಾಬು, ತಮಗೆ ಅನ್ಯಾಯ ಆಗಿರುವ ಬಗ್ಗೆ ರಾಷ್ಟ್ರೀಯ ಪರಿಶಿಷ್ಟ ಜಾತಿಯ ಆಯೋಗಕ್ಕೆ ದೂರು ನೀಡಿದ್ದರು. ಆಯೋಗ, 10 ದಿನಗಳ ಒಳಗೆ ದೂರುದಾರರಿಗೆ ಡಿಮಾನ್ಸ್‌ನಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡುವಂತೆ 2021 ಜುಲೈ 6ರಂದು ಸೂಚಿಸಿತ್ತು. ಆದರೆ, ಮತ್ತೆ ಆಗಸ್ಟ್‌ 9 ಮತ್ತು ಸೆ. 2ರಂದು ಸರ್ಕಾರ ಸೂಚಿಸಿದರೂ ಇಲಾಖೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

‘ವೈದ್ಯರಿಗೆ ಈ ರೀತಿ ದೌರ್ಜನ್ಯವಾದರೆ ಬಡ ಜನರಿಗೆ ಇನ್ನೆಷ್ಟು ದೌರ್ಜನ್ಯವಾಗಬಹುದು. ಮುಖ್ಯಮಂತ್ರಿ ಅವರು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಂಘ ಆಗ್ರಹಿದೆ.

ಪ್ರತಿಕ್ರಿಯೆಗಾಗಿ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್‌ರಾಜ್ ಸಿಂಗ್‌ರನ್ನು ಸಂಪರ್ಕಿಸಲು ಯತ್ನಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.

Quote - ರಾಜ್ಯ ಸರ್ಕಾರ ನನ್ನನ್ನು ಡಿಮಾನ್ಸ್‌ಗೆ ವರ್ಗಾವಣೆ ಮಾಡಿದ್ದರೂ ಕೆಲವರ ಷಡ್ಯಂತ್ರದಿಂದ ಕರ್ತವ್ಯ ನಿರ್ವಹಿಸಲು ಅವಕಾಶ ಸಿಕ್ಕಿಲ್ಲ. ನ್ಯಾಯಕ್ಕಾಗಿ ಮೂರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇನೆ ಡಾ.ಬಿ. ರಮೇಶ್‌ ಬಾಬು ಪ್ರಾಧ್ಯಾಪಕ ರಿಮ್ಸ್‌

ಯಾವ ವರದಿಗೂ ಬಗ್ಗದ ಇಲಾಖೆ

‘ಡಿಮಾನ್ಸ್‌ನ ಮಹೇಶ ದೇಸಾಯಿ ಮತ್ತು ರಾಘವೇಂದ್ರ ನಾಯಕ ನನಗೆ ನ್ಯಾಯ ಸಿಗದಂತೆ ಮಾಡಿದ್ದಾರೆ’ ಎಂದು ಆರೋಪಿಸಿ ರಮೇಶ್‌ ಬಾಬು 2022ರ ಸೆ. 19ರಂದು ರಾಯಚೂರಿನಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಈ ದೂರನ್ನು ಧಾರವಾಡಕ್ಕೆ ವರ್ಗಾವಣೆ ಮಾಡಲಾಗಿತ್ತು. ಸಂತ್ರಸ್ತರು ಪುನರ್‌ ವಸತಿಗೆ ಅರ್ಹರಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಧಾರವಾಡ ಜಂಟಿ ನಿರ್ದೇಶಕರು ವರದಿ ನೀಡಿದ್ದರು. ಡಿಮಾನ್ಸ್‌ನಲ್ಲಿ ನೇಮಕಗೊಂಡ ಹುದ್ದೆಯನ್ನು ‘ಪರಿಶಿಷ್ಟ ಜಾತಿಯ ಭರ್ತಿಯಾಗದ ಬ್ಯಾಗಲಾಗ್‌ ಹುದ್ದೆ’ ಎಂದು ಪರಿಗಣಿಸಿ ಹಿರಿತನ ಪರಿಗಣಿಸಿ ಸೇವಾ ಸೌಲಭ್ಯ ನೀಡಬೇಕೆಂದು ಮುಖ್ಯ ಕಾರ್ಯದರ್ಶಿಗೆ 2022ರ ಆಗಸ್ಟ್‌ 5ರಂದು ರಾಯಚೂರು ಉಪ ನಿರ್ದೇಶಕರು ‌ವರದಿ ನೀಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT