ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್ಮೀಕಿ ಶ್ರೀಗಳ ಧರಣಿಗೆ ಬೆಂಬಲ: ಡಾ. ಎಂ ವೆಂಕಟಸ್ವಾಮಿ

Last Updated 12 ಫೆಬ್ರುವರಿ 2022, 20:47 IST
ಅಕ್ಷರ ಗಾತ್ರ

ಬೆಂಗಳೂರು: ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಇಲ್ಲಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಶನಿವಾರ ಮೂರನೇ ದಿನಕ್ಕೆ ಕಾಲಿರಿಸಿದೆ.

ಶ್ರೀಗಳಿಗೆ ಬೆಂಬಲ ವ್ಯಕ್ತಪಡಿಸಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಡಾ. ಎಂ ವೆಂಕಟಸ್ವಾಮಿ ಧರಣಿ ಸ್ಥಳಕ್ಕೆ ಭೇಟಿ ನೀಡಿದರು.

‘ಸಮುದಾಯದ ಒಳಿತಿಗಾಗಿ ಸ್ವಾಮೀಜಿ ಅವರು ಸತ್ಯಾಗ್ರಹ ಕೈಗೊಂಡಿದ್ದಾರೆ. ಸ್ವಾಮೀಜಿ ಅವರು, ಕೇವಲ ವಾಲ್ಮೀಕಿ ಸಮಾಜಕ್ಕಾಗಿ ಸೀಮಿತವಾಗಿ ಹೋರಾಟ ಮಾಡುತ್ತಿಲ್ಲ. ಪರಿಶಿಷ್ಟ ಜಾತಿಯ 101 ಜಾತಿಗಳು ಪರಿಶಿಷ್ಟ ಪಂಗಡದ 51 ಜಾತಿಗಳ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ’ ಎಂದು ವೆಂಕಟಸ್ವಾಮಿ ಹೇಳಿದರು.

‘ಸ್ವಾಮೀಜಿ ಕರೆ ಕೊಟ್ಟರೆ ನಾವು ಲಕ್ಷ, ಲಕ್ಷ ಜನ ಸೇರಿಸಿ ಬೆಂಬಲ ನೀಡುತ್ತೇವೆ. ಸರ್ಕಾರ ನಿರ್ಲಕ್ಷ್ಯ ಮಾಡದೆ ಕೂಡಲೇ ನಮ್ಮ ಸಮುದಾಯಗಳ ಬೇಡಿಕೆ ಈಡೇರಿಸಬೇಕು’ ಎಂದು ಒತ್ತಾಯಿಸಿದರು.ಮುಖಂಡರಾದ ಕೆ.ಎನ್‌. ರಾಜೇಂದ್ರ, ವಕೀಲ ಅನಂತ ನಾಯಕ್ ಇದ್ದರು.

ವಿಧಾನಸೌಧದ ಎದುರು ನಿರ್ಣಾಯಕ ಹೋರಾಟಕ್ಕೆ ನಿರ್ಧಾರ

ದಾವಣಗೆರೆ: ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ 7.5ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಿ ವಿಧಾನಸೌಧದ ಎದುರು ನಿರ್ಣಾಯಕ ಹೋರಾಟ ಕೈಗೊಳ್ಳಲು ಜಿಲ್ಲಾ ವಾಲ್ಮೀಕಿ ನಾಯಕ ಸಮಾಜ ನಿರ್ಧರಿಸಿದೆ.

‘ಈ ಹಿಂದೆ ಹಲವು ಬಗೆಯಲ್ಲಿ ಹೋರಾಟ ಮಾಡಲಾಗಿದೆ. ಆದರೆ, ಆ ಹೋರಾಟಗಳು ಫಲ ಕೊಟ್ಟಿಲ್ಲ. ಸರ್ಕಾರ ಯಾವುದೇ ಸಕಾರಾತ್ಮಕ ಕ್ರಮ ಕೈಗೊಳ್ಳದೇ ಮೀನಮೇಷ ಎಣಿಸುತ್ತಿದೆ. ಈ ನಿರ್ಣಾಯಕ ಹೋರಾಟ ತಾರ್ಕಿಕ ಅಂತ್ಯ ಕಾಣುವವರೆಗೂ ನಿಲ್ಲಿಸುವುದಿಲ್ಲ’ ಎಂದು ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಬಿ.ವೀರಣ್ಣ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರೊ.ಎ.ಬಿ. ರಾಮಚಂದ್ರಪ್ಪ ಮಾತನಾಡಿ ‘ಸರ್ಕಾರಕ್ಕೆ ಫೆ.15ರವರೆಗೆ ಗಡುವು ನೀಡುತ್ತೇವೆ. ಬೇಡಿಕೆ ಈಡೇರದಿದ್ದರೆ, ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಜನರನ್ನು ಸಂಘಟಿಸಿ ವಿಧಾನಸೌಧದ ಎದುರು ಅನಿರ್ದಿಷ್ಟಾವಧಿ ಧರಣಿ ಕೈಗೊಳ್ಳಲಾಗುವುದು. ಅಲ್ಲಿಯೇ ಡೇರೆ ಹಾಕಿ ಅಡುಗೆ ಮಾಡಿ ಪ್ರತಿಭಟಿಸಲಾಗುವುದು’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT