ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಛಲವಾದಿ ಶೆಡ್ ಗಿರಾಕಿ ಎಂದ ಎಂ.ಬಿ. ಪಾಟೀಲ: ಕ್ಷಮೆಯಾಚನೆಗೆ ವಿಜಯೇಂದ್ರ ಆಗ್ರಹ

Published : 30 ಆಗಸ್ಟ್ 2024, 6:36 IST
Last Updated : 30 ಆಗಸ್ಟ್ 2024, 6:36 IST
ಫಾಲೋ ಮಾಡಿ
Comments

ಬೆಂಗಳೂರು: ವಿಧಾನಪರಿಷತ್‌ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ‘ಶೆಡ್‌ ಗಿರಾಕಿ’ ಎಂದು ಹೀಗಳೆದಿರುವ ಬೃಹತ್ ಕೈಗಾರಿಕೆ ಎಂ.ಬಿ.ಪಾಟೀಲ ವಿರುದ್ಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಎಕ್ಸ್ ಪೋಸ್ಟ್‌ನಲ್ಲಿ ಕಿಡಿಕಾರಿದ್ದಾರೆ.

ಛಲವಾದಿ ನಾರಾಯಣಸ್ವಾಮಿಯವರು, ಪರಿಶಿಷ್ಟ ಸಮುದಾಯದವರು ಎಂಬ ಕಾರಣಕ್ಕೆ ಅವರು ಗೌರವಾನ್ವಿತ ವಿರೋಧ ಪಕ್ಷದ ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ, ಅವರ ಸ್ಥಾನದ ಘನತೆಯನ್ನೂ ಲೆಕ್ಕಿಸದೇ, ಅವಹೇಳನಕಾರಿ ಹಾಗೂ ಕುಚೋದ್ಯದ ಪದ ಉಪಯೋಗಿಸುವ ಮೂಲಕ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಪದ ಸಂಸ್ಕೃತಿ ಇಲ್ಲದ ವ್ಯಕ್ತಿತ್ವವನ್ನು ಅನಾವರಣ ಮಾಡಿಕೊಂಡಿದ್ದಾರೆ. ಆ ಮೂಲಕ ಪರಿಶಿಷ್ಟ ಸಮುದಾಯದವರೊಬ್ಬರು ಉನ್ನತ ಸ್ಥಾನ ಅಲಂಕರಿಸಿರುವುದನ್ನು ಸಹಿಸಲಾಗದ ಅಸೂಯೆ ಹೊರಹಾಕಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.

ಪರಿಶಿಷ್ಟ ಸಮುದಾಯದ ಹೋರಾಟಗಾರನೊಬ್ಬನನ್ನು ಗುರುತಿಸಿ ಭಾರತೀಯ ಜನತಾ ಪಾರ್ಟಿ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಕುಳ್ಳಿರಿಸಿದೆ. ತಮ್ಮ ಜವಾಬ್ದಾರಿ ನಿರ್ವಹಿಸುವ ನಿಟ್ಟಿನಲ್ಲಿ ಕೆಐಎಡಿಬಿಯಲ್ಲಿ ನಡೆದಿರುವ ಸಿಎ ನಿವೇಶನಗಳ ನಿಯಮಬಾಹಿರ ಹಾಗೂ ಅಕ್ರಮ ಮಂಜೂರಾತಿ ಕುರಿತು ಛಲವಾದಿಯವರು ಆರೋಪ ಮಾಡಿದ್ದಾರೆ. ಇದನ್ನು ಆರೋಗ್ಯಕರ ಮನಸ್ಸಿನಿಂದ ಸ್ವೀಕರಿಸಿ ಮರು ಉತ್ತರಿಸಬೇಕಾದ ಎಂ.ಬಿ ಪಾಟೀಲರು ಪ್ರತಿಕ್ರಿಯಿಸಿರುವ ಪರಿಯನ್ನು ನೋಡಿದರೆ ಅವರು ತಮ್ಮ ರಾಷ್ಟ್ರೀಯ ಅಧ್ಯಕ್ಷರನ್ನು ಓಲೈಸುವ ಭರದಲ್ಲಿ ತಳಮಟ್ಟದಿಂದ ಮೇಲೆದ್ದು ಬಂದು ಗೌರವಾನ್ವಿತ ಸ್ಥಾನ ಅಲಂಕರಿಸಿರುವ ಪರಿಶಿಷ್ಟ ಸಮುದಾಯದ ವ್ಯಕ್ತಿಯನ್ನು ಅಪಮಾನಿಸುವ ಮೂಲಕ ಪರಿಶಿಷ್ಟರ ಬಗ್ಗೆ ತಮಗಿರುವ ಗೌರವ ಯಾವ ಮಟ್ಟದ್ದು ಎನ್ನುವುದನ್ನು ಪ್ರದರ್ಶಿಸಿಕೊಂಡಿದ್ದಾರೆ.

ರಾಜಕೀಯದಲ್ಲಿ ಟೀಕೆ ಟಿಪ್ಪಣಿಗಳಿರಬೇಕು. ಅದರಲ್ಲೂ ಆಡಳಿತ ಪಕ್ಷದಲ್ಲಿರುವವರು ವಿರೋಧ ಪಕ್ಷದ ಟೀಕೆಗಳನ್ನು ಸಕಾರಾತ್ಮಕ ಮನಸ್ಸಿನಿಂದ ಸ್ವೀಕರಿಸುವ ಔದಾರ್ಯ ತೋರಬೇಕು. ಆದರೆ, ಹತಾಶೆಗೊಳಗಾದವರಂತೆ ವರ್ತಿಸುವುದು ಪ್ರಜಾತಂತ್ರ ವ್ಯವಸ್ಥೆಯನ್ನು ಅಪಮಾನಿಸಿದಂತೆ. ಈ ನಿಟ್ಟಿನಲ್ಲಿ ಎಂ.ಬಿ. ಪಾಟೀಲರು ಪ್ರಜಾತಂತ್ರ ವ್ಯವಸ್ಥೆಯನ್ನು ಅಪಮಾನಿಸಿದ್ದಾರೆ, ಶೋಷಿತ ಸಮುದಾಯದಿಂದ ಮೇಲೆದ್ದು ಬಂದ ವ್ಯಕ್ತಿತ್ವವನ್ನು ಅವಹೇಳನ ಮಾಡಿರುವುದು ಇಡೀ ಪರಿಶಿಷ್ಟ ಸಮುದಾಯವನ್ನು ಅಪಮಾನಿಸಿದಂತಾಗಿದೆ. ಎಂ.ಬಿ ಪಾಟೀಲರ ಈ ವರ್ತನೆಯನ್ನು ಖಂಡಿಸಿ. ಈ ಕೂಡಲೇ ಅವರು ಛಲವಾದಿ ನಾರಾಯಣ ಸ್ವಾಮಿಯವರು ಹಾಗೂ ಪರಿಶಿಷ್ಟ ಸಮುದಾಯಗಳಲ್ಲಿ ಬೇಷರತ್ ಕ್ಷಮೆ ಯಾಚಿಸಬೇಕೆಂದು ಆಗ್ರಹಪಡಿಸುತ್ತೇನೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಟ್ರಸ್ಟ್‌ಗೆ ಸಿಎ ನಿವೇಶನ ಹಂಚಿಕೆ ಮಾಡಿರುವುದು ಸಮರ್ಥಿಸಿಕೊಳ್ಳಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಂ.ಬಿ.ಪಾಟೀಲ, ವಿಧಾನಪರಿಷತ್‌ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ‘ನಾರಾಯಣಸ್ವಾಮಿ ಶೆಡ್‌ ಗಿರಾಕಿ’ ಎಂದು ಹೀಗಳೆದಿದ್ದರು.

‘ನಾರಾಯಣಸ್ವಾಮಿ ಮೈಸೂರು ಸಮೀಪದ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಎರಡು ಎಕರೆ 8,029 ಚದರ ಮೀಟರ್‌ ಜಮೀನು ಪಡೆದುಕೊಂಡಿದ್ದರು. ಬೃಂದಾವನ ಸಾಫ್ಟ್‌ವೇರ್‌ ಟೆಕ್ನಾಲಜಿ ಎಂಬ ಉದ್ಯಮ ಸ್ಥಾಪಿಸುವುದಾಗಿ ಹೇಳಿಕೊಂಡಿದ್ದರು. ಆ ಬಳಿಕ ಗಾರ್ಮೆಂಟ್‌ ಉದ್ಯಮ ಸ್ಥಾಪಿಸುವುದಾಗಿ ಹೇಳಿಕೊಂಡರು. ಈಗ ಅಲ್ಲಿ ಶೆಡ್‌ ನಿರ್ಮಿಸಿ ಬಾಡಿಗೆಗೆ ಕೊಡುವುದಾಗಿ ಬೋರ್ಡ್‌ ಹಾಕಿಕೊಂಡಿದ್ದಾರೆ’ ಎಂದು ವ್ಯಂಗ್ಯವಾಗಿ ಹೇಳಿದ್ದರು.

‘ಶೆಡ್‌ ಕಟ್ಟುವ ಯೋಗ್ಯತೆಯೂ ಇಲ್ಲದ ಈ ವ್ಯಕ್ತಿಗೆ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಬಗ್ಗೆ ಮಾತನಾಡುವ ಯೋಗ್ಯತೆ ಇದೆಯೆ?. ಹೈಕೋರ್ಟ್‌ ನೀಡಿದ ಸಮಯದ ಒಳಗೆ ಕೈಗಾರಿಕಾ ಜಮೀನು ಬಳಸಿಕೊಳ್ಳದಿದ್ದಾರೆ ವಾಪಸ್‌ ಪಡೆಯುತ್ತೇವೆ’ ಎಂದೂ ಕಿಡಿಕಾರಿದ್ದರು.

Venugopala K.
Venugopala K.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT