ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲಿಗರ ಸಂಘದ ಚುಕ್ಕಾಣಿಗೆ ನಾನಾ ಕಸರತ್ತು

ಕಾರ್ಯಕಾರಿ ಸಮಿತಿಗೆ ಕೆಂಚಪ್ಪಗೌಡ ಬಣದಿಂದ 10 ಸದಸ್ಯರು ಆಯ್ಕೆ
Last Updated 16 ಡಿಸೆಂಬರ್ 2021, 20:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಯ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಸಂಘದ ಚುಕ್ಕಾಣಿ ಹಿಡಿಯಲು ನಾನಾ ಕಸರತ್ತು ಆರಂಭವಾಗಿದೆ.

ಕಾರ್ಯಕಾರಿ ಸಮಿತಿಯು ಒಟ್ಟು35 ಸದಸ್ಯರನ್ನು ಹೊಂದಿದ್ದು, ಅಧ್ಯಕ್ಷರಾಗಲು 18 ಜನರ ಬೆಂಬಲ ಅಗತ್ಯ. ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳ 15 ಸ್ಥಾನಗಳಲ್ಲಿ ಹೆಚ್ಚು ಸ್ಥಾನ ಗಳಿಸಿದವರೇ ಅಧ್ಯಕ್ಷರಾಗುವುದು ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯ. ಈ ಬಾರಿ ಈ 15 ಸ್ಥಾನಗಳಲ್ಲಿ 10 ಸ್ಥಾನಗಳನ್ನು ಬಿ.ಕೆಂಚಪ್ಪಗೌಡ ಅವರ ಬಣ ಗೆದ್ದಿದೆ.

ಮಂಡ್ಯ ಜಿಲ್ಲೆಯ ನಾಲ್ಕು, ಹಾಸನ, ಮೈಸೂರು ಮತ್ತು ಕೋಲಾರ ಜಿಲ್ಲೆಗಳ ತಲಾ ಮೂರು, ತುಮಕೂರು ಜಿಲ್ಲೆಯ ಇಬ್ಬರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ಚಿತ್ರದುರ್ಗ ಜಿಲ್ಲೆಯ ತಲಾ ಒಬ್ಬರು ಸೇರಿ ಒಟ್ಟು 20 ಸದಸ್ಯರಿದ್ದಾರೆ. ಇವರಲ್ಲಿ ಬಹುತೇಕರು ಹೊಸಬರೇ ಆಗಿದ್ದಾರೆ.

ನಾಲ್ಕು ಬಾರಿ ನಿರ್ದೇಶಕರಾಗಿ, ಎರಡು ಬಾರಿ ಕಾರ್ಯದರ್ಶಿಯಾಗಿ ಮತ್ತು ಒಮ್ಮೆ ಅಧ್ಯಕ್ಷರಾಗಿ ಕೆಲಸ ಮಾಡಿರುವ ಕೆಂಚಪ್ಪಗೌಡ ಈ ಬಾರಿ ಮತ್ತೆ ಅಧ್ಯಕ್ಷರಾಗುವ ಬಯಕೆ ಹೊಂದಿದ್ದಾರೆ. ತಮ್ಮ ಬಣವು ಮೇಲುಗೈ ಸಾಧಿಸಿರುವ ಹುಮ್ಮಸ್ಸಿನಲ್ಲಿರುವ ಅವರು ಅವಿರೋಧವಾಗಿ ಆಯ್ಕೆ ಆಗಲು ತಂತ್ರಗಾರಿಕೆ ಆರಂಭಿಸಿದ್ದಾರೆ.

ಕಿಮ್ಸ್‌ ವೈದ್ಯ ಡಾ. ಆಂಜನಪ್ಪ ಬಣದಿಂದ ಇಬ್ಬರು ಹಾಗೂ ವಿಧಾನ ಪರಿಷತ್‌ ಸದಸ್ಯ ಅ. ದೇವೇಗೌಡ ಬಣದಿಂದ ಮೂವರು ಚುನಾಯಿತರಾಗಿದ್ದಾರೆ. ಆಂಜನಪ್ಪ ಅವರೂ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿ. ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳು ಹೊರತಾಗಿ ಉಳಿದ ಜಿಲ್ಲೆಗಳಿಂದ ಆಯ್ಕೆಯಾಗಿರುವ 20 ಸದಸ್ಯರ ಬೆಂಬಲ ಗಳಿಸಲು ಅವರು ಪ್ರಯತ್ನಿಸುತ್ತಿದ್ದಾರೆ.

ಸತತ ಮೂರು ಬಾರಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಚುನಾಯಿತರಾಗಿರುವ ಶ್ರವಣಬೆಳಗೊಳದ ಶಾಸಕ ಸಿ.ಎನ್. ಬಾಲಕೃಷ್ಣ ಅವರೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಸಂಘದ ಮೂಲಗಳು ತಿಳಿಸಿವೆ.

‘ಕಾರ್ಯಕಾರಿ ಸಮಿತಿಗೆ ಆಯ್ಕೆಯಾಗಿರುವ ನಾಲ್ಕೈದು ಸದಸ್ಯರನ್ನು ಹೊರತಾಗಿ ಉಳಿದವರೆಲ್ಲರೂ ಹೊಸಬರು. ಅಧ್ಯಕ್ಷರು ಯಾರಾಗಬೇಕು ಎಂಬ ಬಗ್ಗೆ ಚರ್ಚಿಸಿ ಒಮ್ಮತದ ತೀರ್ಮಾನಕ್ಕೆ ಬರುತ್ತೇವೆ’ ಎಂದು ಬಾಲಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಂಚಪ್ಪಗೌಡ ಅವರ ಬಣದಿಂದ 10 ಜನ ಚುನಾಯಿತರಾಗಿದ್ದೇವೆ. ಜೊತೆಗೆ 8 ಜನರ ಬೆಂಬಲ ನಮ್ಮ ಬಣಕ್ಕೆ ಸಿಕ್ಕಿದೆ. ಕೆಂಚಪ್ಪಗೌಡ ಅವರೇ ಅಧ್ಯಕ್ಷರಾಗಲಿದ್ದಾರೆ. ಇನ್ನಷ್ಟು ಸದಸ್ಯರು ನಮ್ಮ ಬಣ ಸೇರಿಕೊಳ್ಳಲಿದ್ದಾರೆ’ ಎಂದು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಚುನಾಯಿತರಾಗಿರುವ ಎಲ್.ಶ್ರೀನಿವಾಸ್ ಹೇಳಿದರು.

‘ಅಧ್ಯಕ್ಷ, ಎರಡು ಉಪಾಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ, ಜಂಟಿ ಕಾರ್ಯದರ್ಶಿ ಸ್ಥಾನಗಳಿಗೆ ಡಿ.30ರೊಳಗೆ ಚುನಾವಣೆ ನಡೆಯಲಿದೆ. ಚುನಾವಣೆಗೆ ಮುನ್ನ ಗುಂಪುಗಳಿದ್ದವು. ಈಗ ಗುಂಪುಗಳನ್ನು ಬಿಟ್ಟು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರನ್ನೂ ಒಂದೆಡೆ ಸೇರಿಸಿ ಸಭೆ ನಡೆಸಿ ಒಮ್ಮತದ ತೀರ್ಮಾನಕ್ಕೆ ಬರಲು ಪ್ರಯತ್ನಿಸುತ್ತಿದ್ದೇವೆ’ ಎಂದು ಕೆಂಚಪ್ಪಗೌಡ ತಿಳಿಸಿದರು.

‘ಬೆಂಗಳೂರಿನಲ್ಲಿ 10 ಸ್ಥಾನಗಳನ್ನು ಗೆದ್ದ ಮಾತ್ರಕ್ಕೆ ಅವರೇ ಅಧ್ಯಕ್ಷರಾಗುತ್ತಾರೆ ಎಂದು ಹೇಳಲಾಗದು. ಹೊರ ಜಿಲ್ಲೆಗಳಲ್ಲಿ 20 ಸದಸ್ಯರಿದ್ದಾರೆ. ಅವರೆಲ್ಲರೂ ಸೇರಿ ಬೇರೆ ಜಿಲ್ಲೆಯವರಿಗೆ ಅವಕಾಶ ಕಲ್ಪಿಸುವ ಸಾಧ್ಯತೆಯೂ ಇದೆ. ಎಲ್ಲಾ ರೀತಿಯ ಪ್ರಯತ್ನಗಳೂ ತೆರೆಮರೆಯಲ್ಲಿ ನಡೆಯುತ್ತಿವೆ. ಅಧ್ಯಕ್ಷ ಸ್ಥಾನಕ್ಕೆ ನಾನೂ ಅಕಾಂಕ್ಷಿ’ ಎಂದು ಬಿ.ಪಿ. ಮಂಜೇಗೌಡ ಹೇಳಿದರು.

‘ಸ್ವಾಮೀಜಿ, ಹಿರಿಯರಿಂದ ಸಂಧಾನ’
‘ಅಧ್ಯಕ್ಷರು ಮತ್ತು ಇತರ ಪದಾಧಿಕಾರಿಗಳು ಯಾರಾಗಬೇಕು ಎಂಬುದನ್ನು ಸಮುದಾಯದ ಸ್ವಾಮೀಜಿಗಳು ಮತ್ತು ಹಿರಿಯರು ಸೇರಿ ತೀರ್ಮಾನಿಸಲಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸದಸ್ಯರೊಬ್ಬರು ‘‍ಪ್ರಜಾವಾಣಿ’ಗೆ ತಿಳಿಸಿದರು.

‘ಚುನಾವಣೆಯಲ್ಲಿ ಗೆದ್ದಿರುವ ಬಹುತೇಕರು ಆದಿ ಚುಂಚನಗಿರಿ ಮಠದೊಂದಿಗೆ ಒಡನಾಟ ಇಟ್ಟುಕೊಂಡವರೇ ಆಗಿದ್ದಾರೆ. ಹಾಗಾಗಿ, ಒಮ್ಮತದಿಂದ ಸಂಘ ಮುನ್ನಡೆಸಲು ನಿರ್ಮಲಾನಂದನಾಥ ಸ್ವಾಮೀಜಿ ಸಲಹೆಗಳನ್ನು ನೀಡುವ ಸಾಧ್ಯತೆಯೂ ಇದೆ. ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡರ ಸಲಹೆಯನ್ನೂ ಪಡೆದು ತೀರ್ಮಾನಕ್ಕೆ ಬರುವ ನಿರೀಕ್ಷೆ ಇದೆ’ ಎಂದು ಅವರು ವಿವರಿಸಿದರು.

ತಡರಾತ್ರಿ ಪ್ರಕಟವಾದ ಫಲಿತಾಂಶ
ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆ ಹಾಗೂ ತಮಿಳುನಾಡಿನ ಹೊಸೂರು ಜಿಲ್ಲಾ ಕ್ಷೇತ್ರಗಳ 15 ಸ್ಥಾನಗಳ ಫಲಿತಾಂಶ ಬುಧವಾರ ತಡರಾತ್ರಿ ಪ್ರಕಟವಾಯಿತು. ಗೆದ್ದವರ ವಿವರ ಇಂತಿದೆ.

ಡಾ. ಎಚ್‌.ಟಿ. ಅಂಜನಪ್ಪ (68,398 ಮತ), ಎಚ್.ಎನ್. ಅಶೋಕ್ (61,892), ಬಿ.ಕೆಂಚಪ್ಪಗೌಡ (58,‌066), ಆರ್.ಪ್ರಕಾಶ್ (56,694), ಎಚ್‌.ಸಿ. ಜಯಮುತ್ತು (56,254), ಸಿ.ದೇವರಾಜು ಹಾಪ್‌ಕಾಮ್ಸ್‌ (55,903), ಎಚ್. ಶ್ರೀನಿವಾಸ್‌ (49,217), ಸಿ.ಎಂ. ಮಾರೇಗೌಡ (48,492), ಬಿ.ವಿ. ರಾಜಶೇಖರಗೌಡ (46,180), ಕೆ.ಎಸ್. ಸುರೇಶ್‌ (45,601), ಎಂ.ಎಸ್.ಉಮಾಪತಿ (44,709), ವೆಂಕಟರಾಮೇಗೌಡ (43,022), ಡಿ. ಹನುಮಂತಯ್ಯ ಚೋಳನಾಯಕನಹಳ್ಳಿ (41,687), ಎಂ. ಪುಟ್ಟಸ್ವಾಮಿ (41,165), ಡಾ. ವಿ. ನಾರಾಯಣಸ್ವಾಮಿ (40,728) ಆಯ್ಕೆಯಾಗಿದ್ದಾರೆ.

ಈ ಮೂರೂ ಜಿಲ್ಲೆಗಳಿಂದ ಒಟ್ಟು 141 ಅಭ್ಯರ್ಥಿಗಳು ಕಣದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT