ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕಾಗಿ ಒಗ್ಗಟ್ಟಿನಿಂದ ಸಾಗಬೇಕು: ಫಾರೂಕ್‌ ಅಬ್ದುಲ್ಲಾ

Published 7 ಜೂನ್ 2023, 20:29 IST
Last Updated 7 ಜೂನ್ 2023, 20:29 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದ ಒಳಿತಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಲೋಕಸಭಾ ಚುನಾವಣೆ ಎದುರಿಸಬೇಕಿದೆ’ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಫಾರೂಕ್‌ ಅಬ್ದುಲ್ಲಾ ಹೇಳಿದರು.

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಅವರ ನಿವಾಸಕ್ಕೆ ಬುಧವಾರ ಬೆಳಿಗ್ಗೆ ಭೇಟಿನೀಡಿ ಚರ್ಚಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಯಾರೂ ನಿರಾಶರಾಗಬೇಕಿಲ್ಲ. ನಿಧಾನವಾಗಿ ನಮಗೆ ದಾರಿ ಸಿಗುತ್ತದೆ. ಒಗ್ಗಟ್ಟಿನಿಂದ ಸಾಗಬೇಕಿರುವುದು ಈಗ ನಮ್ಮ ಮುಂದಿರುವ ಮುಖ್ಯ ವಿಚಾರ’ ಎಂದರು.

‘ಧರ್ಮದ ಆಧಾರದಲ್ಲಿ ದೇಶ ವಿಭಜನೆ ಆಗಬೇಕಾ? ದೇಶ ಒಟ್ಟಾಗಿ ಇರುವುದು ಬೇಕಾ? ನಮ್ಮದು ವೈವಿಧ್ಯವನ್ನು ಹೊಂದಿರುವ ದೇಶ. ಕರ್ನಾಟಕ ಮತ್ತು ಕಾಶ್ಮೀರದ ಮಧ್ಯೆ ಸಾಮ್ಯತೆ ಕಾಣಲು ಸಾಧ್ಯವಿಲ್ಲ. ದೇಶ ಉಳಿಯಬೇಕಾದರೆ ನಾವೆಲ್ಲರೂ ಉಳಿಯಬೇಕು’ ಎಂದು ಹೇಳಿದರು.

‘ಇದು ಸೌಜನ್ಯದ ಭೇಟಿ. ದೇವೇಗೌಡರು ಕಾಶ್ಮೀರಕ್ಕೆ ನೀಡಿದ ಕೊಡುಗೆ ದೊಡ್ಡದು. ದೇಶದ ಇತರ ನಾಯಕರು ಕಾಶ್ಮೀರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾಗ ಅವರು ಧೈರ್ಯದಿಂದ ಭೇಟಿ ನೀಡಿದ್ದರು. ಅದಕ್ಕಾಗಿ ಅವರಿಗೆ ಕೃತಜ್ಞತೆ ಹೇಳಿದ್ದೇನೆ’ ಎಂದರು.

ಸಿದ್ದರಾಮಯ್ಯ ಅಭಿನಂದಿಸಿದ ಫಾರೂಕ್‌
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬುಧವಾರ ಸಂಜೆ ಭೇಟಿಮಾಡಿದ ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಫಾರೂಕ್‌ ಅಬ್ದುಲ್ಲಾ ಅವರು ಅಭಿನಂದನೆ ಸಲ್ಲಿಸಿದರು. ವಸತಿ ಸಚಿವ ಬಿ.ಜೆಡ್. ಜಮೀರ್‌ ಅಹಮದ್ ಖಾನ್‌ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳಾದ ಕೆ. ಗೋವಿಂದರಾಜು ಮತ್ತು ನಜೀರ್‌ ಅಹಮದ್ ಉಪಸ್ಥಿತರಿದ್ದರು.

‘ಕಾಶ್ಮೀರ ಫೈಲ್ಸ್‌’ ಮತ್ತು ‘ಕೇರಳ ಸ್ಟೋರಿ’ ಸಿನಿಮಾಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಫಾರೂಕ್‌, ‘ಇವು ದೇಶ ಒಡೆಯುವ ಉದ್ದೇಶದಿಂದ ನಿರ್ಮಿಸಿದ ಚಿತ್ರಗಳು. ಇಂತಹ ಚಿತ್ರಗಳಿಂದ ಸಂವಿಧಾನಕ್ಕೆ ಅಪಾಯ ಎದುರಾಗುತ್ತದೆ. ಹಿಂದೂ, ಮುಸ್ಲಿಂ ಯಾವುದೇ ಸಮುದಾಯ ಇರಲಿ. ಈ ರೀತಿಯ ಚಿತ್ರಗಳು ದೇಶಕ್ಕೆ ಮಾರಕ’ ಎಂದು ಹೇಳಿದರು.

ಒಡಿಶಾದ ಬಾಲೇಶ್ವರ ರೈಲು ಅಪಘಾತದ ಕುರಿತು ಪ್ರತಿಕ್ರಿಯಿಸಿದ ಅವರು, ‘ನೂರಾರು ಮಂದಿ ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ. ಸರಿಯಾದ ತನಿಖೆ ಆಗಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು’ ಎಂದರು.

ಫಾರೂಕ್‌ ಅಬ್ದುಲ್ಲಾ ಅವರ ಭೇಟಿ ವೇಳೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಶಾಸಕ ಎಚ್‌.ಡಿ. ರೇವಣ್ಣ, ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್, ಮಾಜಿ ಸಚಿವ ಆರ್. ರೋಷನ್ ಬೇಗ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT