ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರ್ಮಿಕರ ನಿಧಿ ಬಿಳಿ ಕಾಲರಿನ ಅಧಿಕಾರಿಗಳಿಗೇಕೆ: ಹೈಕೋರ್ಟ್‌ ಕಿಡಿ

Published : 27 ಸೆಪ್ಟೆಂಬರ್ 2024, 20:30 IST
Last Updated : 27 ಸೆಪ್ಟೆಂಬರ್ 2024, 20:30 IST
ಫಾಲೋ ಮಾಡಿ
Comments

ಬೆಂಗಳೂರು: ‘ಕಟ್ಟಡ ಕಾರ್ಮಿಕರ ಬಡ ಮಕ್ಕಳ ಶಿಕ್ಷಣ ಹಾಗೂ ಇತರ ಅವಶ್ಯಕತೆಗಳಿಗೆ, ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನಿಧಿಯಲ್ಲಿ ಮೀಸಲಿಟ್ಟ ಹಣವನ್ನು ಬಿಳಿ ಕಾಲರಿನ ಅಧಿಕಾರಿಗಳಿಗೆ ಬಳಕೆ ಮಾಡುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ’ ಎಂದು ಹೈಕೋರ್ಟ್, ಮಂಡಳಿಯ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

‘ಕಟ್ಟಡ ಕಾರ್ಮಿಕರ ಮಕ್ಕಳಿಗೆ ಮೀಸಲಾದ ವರ್ಗದಲ್ಲಿ ಶೈಕ್ಷಣಿಕ ಧನಸಹಾಯ ಮಾಡಲು ನಿರ್ದೇಶಿಸಬೇಕು’ ಎಂದು ಕೋರಿ, ‘ಕರ್ನಾಟಕ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಫೆಡರೇಶನ್’ ಪ್ರಧಾನ ಕಾರ್ಯದರ್ಶಿ ಕೆ.ಮಹಂತೇಶ್‌ ಹಾಗೂ ಇತರ ಮೂವರು ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಕಲ್ಯಾಣ ಮಂಡಳಿ‌ ಪರ ಹಾಜರಿದ್ದ ವಕೀಲ ಹಿರಿಯ ವಕೀಲರು, ‘ನಿಧಿಯನ್ನು ನಿಯಮಗಳ ಅನುಸಾರವೇ ಬಳಕೆ ಮಾಡಲಾಗುತ್ತಿದೆ. ಅರ್ಜಿದಾರರು ನ್ಯಾಯಾಲಯದ ಅನುಕಂಪ ಗಿಟ್ಟಿಸಿಕೊಳ್ಳಲು ಸತ್ಯವಲ್ಲದ ಮಾಹಿತಿಗಳನ್ನು ನ್ಯಾಯಾಲಯಕ್ಕೆ ನೀಡುತ್ತಿದ್ದಾರೆ’ ಎಂದರು.

ಈ ಮಾತಿಗೆ ಕನಲಿದ ನ್ಯಾಯಪೀಠ, ‘ಇದರಲ್ಲಿ ಅನುಕಂಪ ಗಿಟ್ಟಿಸಿಕೊಳ್ಳುವಂತಹುದು ಏನಿದೆ? ಕಾಯ್ದೆಗೆ ವಿರುದ್ಧವಾಗಿ, ಮಹಾಲೇಖಪಾಲರ (ಸಿಎಜಿ) ವರದಿಗೆ ವ್ಯತಿರಿಕ್ತವಾಗಿ ಮಂಡಳಿಯ ಹಣವನ್ನು ಅನ್ಯ ಕಾರುಬಾರುಗಳಿಗೆ ಬಳಿಸಿಕೊಂಡಿರುವುದು ಯಾಕೆ? ಮಂಡಳಿಯ ಹಣವನ್ನು ನರೇಗಾ ಯೋಜನೆಗೆ, ಇಂದಿರಾ ಕ್ಯಾಂಟೀನ್‌ಗೆ ಯಾಕೆ ವೆಚ್ಚ ಮಾಡಿದ್ದೀರಿ? ಅಧಿಕಾರಿಗಳಿಗೆ ಕಾರು, ಎ.ಸಿಗಳನ್ನು ಖರೀದಿ ಮಾಡಿದ್ದೀರಲ್ಲಾ?’ ಎಂದು ಕಿಡಿ ಕಾರಿತು.

ಕಾರ್ಮಿಕ ಇಲಾಖೆ ಪರ ಹಾಜರಾಗಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್ ಪ್ರತಿಮಾ ಹೊನ್ನಾಪುರ, ‘ಮಂಡಳಿಗೆ ನೆರವು ಕೋರಿ ಈ ಮೊದಲಿಗೆ ಒಂದು ಲಕ್ಷದಷ್ಟು ಅರ್ಜಿಗಳು ಸಲ್ಲಿಕೆಯಾಗುತ್ತಿದ್ದವು. ಆದರೆ, ಕಳೆದ ಮೂರು ವರ್ಷಗಳಿಂದ ಇವು 11 ಲಕ್ಷಕ್ಕೆ ಏರಿಕೆಯಾಗಿವೆ. ಅಂತೆಯೇ, ಕಲ್ಯಾಣ ನಿಧಿ ವಿದ್ಯಾಭ್ಯಾಸದ ನೆರವಿಗೆ ಸೀಮಿತವಾಗಿಲ್ಲ. ಕಾರ್ಮಿಕರ ಮದುವೆ, ಆರೋಗ್ಯ, ಮತ್ತಿತರ ಅಗತ್ಯ ನೆರವುಗಳಿಗೂ ಬಳಕೆಯಾಗಬೇಕು’ ಎಂದು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಮಂಡಳಿ ಪರ ಹಿರಿಯ ವಕೀಲರನ್ನು ಉದ್ದೇಶಿಸಿ, ‘ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿರುವ ನಿಧಿಯನ್ನು ಯಾವ ಯೋಜನೆಗಳಿಗೆ, ಕಾರ್ಯಕ್ರಮಗಳಿಗೆ ವೆಚ್ಚ ಮಾಡಲಾಗುತ್ತದೆ? ಇದರಲ್ಲಿನ ಫಲಾನುಭವಿಗಳೆಷ್ಟು? ಇಲ್ಲಿಯವರೆಗೆ ಎಷ್ಟು ಖರ್ಚು ಮಾಡಲಾಗಿದೆ? ನರೇಗಾ, ಇಂದಿರಾ ಕ್ಯಾಂಟಿನ್‌ಗೆ ಹಣ ಕೊಟ್ಟಿದ್ದು ಯಾಕೆ? ಎಂಬ ಬಗ್ಗೆ ವಿವರವಾದ ಮಾಹಿತಿಯನ್ನು ಪ್ರಮಾಣ ಪತ್ರದ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಿ’ ಎಂದು ನಿರ್ದೇಶಿಸಿ ವಿಚಾರಣೆಯನ್ನು ಅಕ್ಟೋಬರ್ 1ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT