ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಇಲ್ಲದಿದ್ದರೂ ಹಾಸ್ಟೆಲ್‌: ₹71.72 ಕೋಟಿ ನಷ್ಟ

Last Updated 23 ಫೆಬ್ರುವರಿ 2023, 16:34 IST
ಅಕ್ಷರ ಗಾತ್ರ

ಬೆಂಗಳೂರು: ತಾಂತ್ರಿಕ ಶಿಕ್ಷಣ ಇಲಾಖೆಯು ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ವಸತಿ ನಿಲಯಗಳಿಗೆ ಬೇಡಿಕೆ ಇಲ್ಲದಿದ್ದರೂ ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ (ಟಿಎಸ್‌ಪಿ) ಅಡಿ ಆ ಉದ್ದೇಶಕ್ಕೆ ₹ 71.72 ಕೋಟಿಯನ್ನು ಬಳಕೆ ಮಾಡಿದ್ದು, ಅದು ಅನುತ್ಪಾದಕ ವೆಚ್ಚವಾಗಿ ಪರಿಣಮಿಸಿದೆ ಎಂದು ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ.

2021ರ ಮಾರ್ಚ್‌ಗೆ ಕೊನೆಗೊಂಡ ಅವಧಿಯ ಅನುಪಾಲನಾ ಲೆಕ್ಕಪರಿಶೋಧನೆಯ ವರದಿಯನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಗುರುವಾರ ಮಂಡಿಸಲಾಯಿತು. ಈ ರೀತಿ ವಸತಿ ನಿಲಯ ನಿರ್ಮಾಣ ಮಾಡಿರುವುದು ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನದ ಮಾರ್ಗಪಲ್ಲಟ ಎಂದಿರುವ ಸಿಎಜಿ, ತಪ್ಪೆಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಶಿಫಾರಸು ಮಾಡಿದೆ.

ಬೇಡಿಕೆಯೇ ಇಲ್ಲದಿದ್ದರೂ 44 ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ವಸತಿ ನಿಲಯ ನಿರ್ಮಾಣಕ್ಕೆ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರು 2013–14ರಲ್ಲಿ ಸಲ್ಲಿಸಿದ್ದ ಪ್ರಸ್ತಾವಕ್ಕೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ರಾಜ್ಯ ಅಭಿವೃದ್ಧಿ ಮಂಡಳಿ ಅನುಮೋದಿಸಿತು. ಮಾರ್ಚ್‌ 2021ರ ವೇಳೆಗೆ 31 ವಸತಿ ನಿಲಯಗಳ ಕಾಮಗಾರಿ ಪೂರ್ಣಗೊಂಡಿತ್ತು. ಬೇಡಿಕೆಯೇ ಇಲ್ಲದ ಕಾರಣಕ್ಕೆ ಎರಡು ಕಟ್ಟಡಗಳನ್ನು ತಾಂತ್ರಿಕ ಶಿಕ್ಷಣ ನಿರ್ದೇಶಕರು ಬಳಸಿಕೊಂಡಿದ್ದರು. 15 ಕಟ್ಟಡಗಳನ್ನು ಇತರೆ ಇಲಾಖೆಗಳಿಗೆ ನೀಡಿದ್ದರೆ, 14 ಕಟ್ಟಡಗಳು ಖಾಲಿಯೇ ಉಳಿದಿದ್ದವು ಎಂದು ವರದಿ ತಿಳಿಸಿದೆ.

ನಿರ್ಮಾಣವಾದ ವಸತಿ ನಿಲಯಗಳು ಖಾಲಿ ಉಳಿದಿದ್ದರೂ, ಪುನಃ 43 ವಸತಿ ನಿಲಯಗಳಲ್ಲಿ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ₹ 27.90 ಕೋಟಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನವನ್ನು 2019–20ರಲ್ಲಿ ಒದಗಿಸಲಾಗಿತ್ತು. ಇದು ಮಂಜೂರಾದ ಹಣವನ್ನು ವೆಚ್ಚ ಮಾಡಬೇಕೆಂಬ ಏಕೈಕ ಉದ್ದೇಶದಿಂದ ಕೈಗೊಂಡ ಕಾಮಗಾರಿಯಾಗಿತ್ತು ಎಂಬ ಅಭಿಪ್ರಾಯ ವರದಿಯಲ್ಲಿದೆ.

ಇದೇ ಅವಧಿಯಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯ 68 ಅಧಿಕಾರಿಗಳಿಗೆ ಹೆಚ್ಚುವರಿಯಾಗಿ ₹ 2.18 ಕೋಟಿ ಮನೆ ಬಾಡಿಗೆ ಭತ್ಯೆ ವಿತರಿಸಲಾಗಿತ್ತು. 337 ಸಿಬ್ಬಂದಿಗೆ ಈ ಸೌಲಭ್ಯವನ್ನು ನಿರಾಕರಿಸಲಾಗಿತ್ತು ಎಂದು ಸಿಎಜಿ ಹೇಳಿದೆ.

ನೋಂದಣಿ ಶುಲ್ಕದಲ್ಲಿ ನಷ್ಟ: ಎಂಟು ಪ್ರಕರಣಗಳಲ್ಲಿ ದಾಖಲೆಗಳ ತಪ್ಪು ವರ್ಗೀಕರಣದಿಂದ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹದಲ್ಲಿ ₹ 14.71 ಕೋಟಿ ನಷ್ಟವಾಗಿತ್ತು. ಜಿಲ್ಲಾ ನೋಂದಣಿ ಅಧಿಕಾರಿಗಳು ಎಂಟು ಪ್ರಕರಣಗಳಲ್ಲಿ ಆಸ್ತಿಗಳ ಮೌಲ್ಯವನ್ನು ಕಡಿಮೆ ನಿರ್ಧರಿಸಿದ್ದರಿಂದ ₹ 15.09 ಕೋಟಿ ನಷ್ಟವಾಗಿದೆ. 70 ಪ್ರಕರಣಗಳಲ್ಲಿ ತಪ್ಪಾಗಿ ದರ ನಿರ್ಧರಿಸಿದ್ದರಿಂದ ₹ 8.09 ಕೋಟಿ ನಷ್ಟವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಪ್ಪು ಲೆಕ್ಕದಿಂದ ₹ 7.66 ಕೋಟಿ ನಷ್ಟ

ಪಶುಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವೆಗಳ ಇಲಾಖೆಯಲ್ಲಿ ಲಸಿಕೆಯ ವೈಲ್‌ಗಳ ಬದಲಿಗೆ ಡೋಸ್‌ ಆಧಾರದಲ್ಲಿ ಲೆಕ್ಕ ಹಾಕಲಾಗಿತ್ತು. ಇದರಿಂದ ₹ 7.66 ಕೋಟಿ ನಷ್ಟವಾಗಿದೆ ಎಂಬುದನ್ನು ಸಿಎಜಿ ವರದಿ ಬಹಿರಂಗಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT