ಬೆಂಗಳೂರು: ‘ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಸೇರಿದಂತೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಡೆದಿದೆ ಎನ್ನಲಾದ ಅಂದಾಜು ₹ 50 ಸಾವಿರ ಕೋಟಿ ಮೊತ್ತದ ಅವ್ಯವಹಾರ ಪ್ರಕರಣಗಳ ಕುರಿತು ಸಿಬಿಐ ತನಿಖೆಗೆ ಆದೇಶಿಸಬೇಕು’ ಎಂದು ಕೋರಿ ಹೈಕೋರ್ಟ್ಗೆ ರಿಟ್ ಅರ್ಜಿಯೊಂದನ್ನು ಸಲ್ಲಿಸಲಾಗಿದೆ.
ಮೈಸೂರಿನ ಕೆ.ಆರ್.ನಗರದ ವಕೀಲ ಸಿ.ಸಂತೋಷ್ ಈ ರಿಟ್ ಅರ್ಜಿ ಸಲ್ಲಿಸಿದ್ದು, ಇದಿನ್ನೂ ವಿಚಾರಣೆಗೆ ನಿಗದಿಯಾಗಬೇಕಿದೆ. ಅರ್ಜಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ. ಹೈಕೋರ್ಟ್ ವಕೀಲ ಬಿ.ಎಸ್.ಸಾವಂತ್ ವಕಾಲತ್ತು ವಹಿಸಿದ್ದಾರೆ.
‘2015ರಲ್ಲಿ ನೀರಾವರಿ ಯೋಜನೆ ಅಕ್ರಮದಲ್ಲಿ ₹40 ಕೋಟಿ, 2019 ರಿಂದ 2023ರ ಅವಧಿಯಲ್ಲಿನ ಕಿಯೋನಿಕ್ಸ್ನಲ್ಲಿ ₹500 ಕೋಟಿ, ಕೋವಿಡ್-19ರ ಹೆಸರಿನಲ್ಲಿ ₹40 ಸಾವಿರ ಕೋಟಿ, ಪಿಎಸ್ಐ ನೇಮಕಾತಿ ಹಗರಣದಲ್ಲಿ ₹100 ಕೋಟಿ, ಸರ್ಕಾರಿ ಗುತ್ತಿಗೆ ಮಂಜೂರಾತಿಯಲ್ಲಿ ಶೇ.40ರ ಕಮಿಷನ್ನಿಂದ ₹2 ಸಾವಿರ ಕೋಟಿ ಮೊತ್ತವೂ ಸೇರಿದಂತೆ ಹಲವು ಅಕ್ರಮಗಳು ನಡೆದಿವೆ’ ಎಂದು ಹಲವು ಹಗರಣಗಳನ್ನು ಅರ್ಜಿಯಲ್ಲಿ ಪಟ್ಟಿ ಮಾಡಲಾಗಿದೆ.