ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯೋಗೀಶ್‌ಗೌಡ ಕೊಲೆ ಪ್ರಕರಣ: ಆರೋಪಿಗಳ ಅರ್ಜಿ ವಜಾ

Published : 31 ಆಗಸ್ಟ್ 2024, 15:38 IST
Last Updated : 31 ಆಗಸ್ಟ್ 2024, 15:38 IST
ಫಾಲೋ ಮಾಡಿ
Comments

ಬೆಂಗಳೂರು: ‘ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್‌ಗೌಡ ಗೌಡರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ವಿಚಾರಣೆ ನಡೆಯಬೇಕು’ ಎಂಬ ಸಿಬಿಐ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಲಾದ ಎರಡು ಅರ್ಜಿಗಳನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಇದನ್ನು ಪ್ರಶ್ನಿಸಿ ಆರೋಪಿಗಳಾದ ವಿಕ್ರಂ ಬಳ್ಳಾರಿ, ಕೀರ್ತಿಕುಮಾರ ಬಸವರಾಜ ಕುರಹಟ್ಟಿ, ಸಂದೀಪ್‌ ಸೌದತ್ತಿ, ವಿನಾಯಕ ಕಟಗಿ, ಮಹಾಬಲೇಶ್ವರ ಹೊಂಗಲ್‌ ಅಲಿಯಾಸ್‌ ಮುದುಕ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ಹಾಗೂ ಮತ್ತೊಬ್ಬ ಆರೋಪಿ ಬಸವರಾಜ ಮುತ್ತಗಿ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ಪೂರೈಸಿ ಕಾಯ್ದಿರಿಸಿದ್ದ ಆದೇಶವನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ಪೀಠದಲ್ಲಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಶನಿವಾರ ಪ್ರಕಟಿಸಿದರು.

ಅಪರಾಧ ಪ್ರಕ್ರಿಯಾ ದಂಡ ಸಂಹಿತೆ–1973ರ ಕಲಂ (ಸಿಆರ್‌ಪಿಸಿ) 230 ಮತ್ತು 231ರ ಅನುಸಾರ ಪ್ರಕರಣದ ಮರು ವಿಚಾರಣೆಯನ್ನು ನಿಗದಿಪಡಿಸಿ ಸಿಬಿಐ ವಿಶೇಷ ನ್ಯಾಯಾಲಯ 2024ರ ಜೂನ್‌ 28ರಂದು ಆದೇಶಿಸಿತ್ತು. ಅರ್ಜಿದಾರರು ಇದಕ್ಕೆ ತಕರಾರು ಸಲ್ಲಿಸಿದ್ದರು. ಆದರೆ, ವಿಶೇಷ ನ್ಯಾಯಾಲಯ ಈ ತಕರಾರನ್ನು ಮಾನ್ಯ ಮಾಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈಗ ಹೈಕೋರ್ಟ್‌, ಆರೋಪಿಗಳ ತಕರಾರು ಅರ್ಜಿ ವಜಾಗೊಳಿಸಿದೆ. ಅಂತೆಯೇ, ಈ ಆದೇಶದಿಂದಾಗಿ ಪ್ರಕರಣದಲ್ಲಿನ ಎಲ್ಲ ಆರೋಪಿಗಳು ಸಿಬಿಐ ವಿಚಾರಣಾ ನ್ಯಾಯಾಲಯದ ಹೊಸ ವಿಚಾರಣಾ ಪ್ರಕ್ರಿಯೆಗೆ ಒಳಗಾಗಲಿದ್ದಾರೆ.

ಪ್ರಕರಣವೇನು?: ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2016ರ ಜೂನ್‌ 15ರಂದು ಯೋಗೀಶ್‌ಗೌಡ ಗೌಡರ್ ಕೊಲೆ ನಡೆದಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದು, ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಸಿಬಿಐ ಪರ ಪಿ.ಪ್ರಸನ್ನ ಕುಮಾರ್‌, ಅರ್ಜಿದಾರರ ಪರ ಹಿರಿಯ ವಕೀಲ ಸಿ.ವಿ.ನಾಗೇಶ್‌ ವಾದ ಮಂಡಿಸಿದ್ದರು. ಹೈಕೋರ್ಟ್‌ ವಕೀಲ ಎಸ್‌.ಸುನಿಲ್ ಕುಮಾರ್‌ ಮತ್ತು ಆರ್‌.ನಾಗೇಂದ್ರ ನಾಯಕ್‌ ವಕಾಲತ್ತು ವಹಿಸಿದ್ದರು.

ತಕರಾರು ಏನಿತ್ತು?: ‘ಮರು ವಿಚಾರಣೆ ನಡೆಸಿದರೆ ಕಾನೂನು ತೊಡಕು ಉಂಟಾಗುತ್ತದೆ’ ಎಂಬ ಅರ್ಜಿದಾರರ ವಾದವನ್ನು ಅಲ್ಲಗಳೆದಿದ್ದ ಸಿಬಿಐ, ’ಈ ಪ್ರಕರಣದಲ್ಲಿ 1–6ನೇ ಆರೋಪಿಗಳ ಬಗ್ಗೆ ಅಂದಿನ ರಾಜ್ಯ ಸರ್ಕಾರ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಇದರಲ್ಲಿ ಶಾಸಕ ವಿನಯ ಕುಲಕರ್ಣಿ ಹೆಸರು ಕೈಬಿಡಲಾಗಿತ್ತು. ಆದರೆ, ನಂತರ ಸಿಬಿಐ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ 7–21ರವರೆಗೆ ಹೊಸ ಆರೋಪಿಗಳನ್ನು ಸೇರ್ಪಡೆ ಮಾಡಲಾಗಿದೆ’ ಎಂದು ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT