ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಗಣೇಶೋತ್ಸವಕ್ಕೆ ದಿನಗಣನೆ

Last Updated 10 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು ಗಣೇಶೋತ್ಸವ ಮತ್ತೆ ಬಂದಿದೆ. ನಗರದ ಕಲಾ ರಸಿಕರಿಗೆ 11 ದಿನಗಳು ವಿವಿಧ ಬಗೆಯ ಕಲೆಯನ್ನು ಆಸ್ವಾದಿಸಲು ಅವಕಾಶ ಒದಗಿಸುವ ಈ ವೇದಿಕೆಯು ಹಿರಿಯ, ಕಿರಿಯ ಕಲಾವಿದರ ಸಮಾಗಮಕ್ಕೂ ಅವಕಾಶ ಕಲ್ಪಿಸಿದೆ. ಪ್ರಸಿದ್ಧ ಕಲಾವಿದರು, ಗಾಯಕರು, ನೃತ್ಯಗಾರರು, ರಂಗಕರ್ಮಿಗಳು, ಹಾಸ್ಯ ಕಲಾವಿದರ ದಂಡೇ ಇಲ್ಲಿ ಜಮಾಯಿಸಲಿದೆ.

ಅದು ನಗರದ ಹಳೆಯ ಗಣೇಶ ಉತ್ಸವಗಳಲ್ಲಿ ಒಂದಾದ ‘ಬಸವನಗುಡಿ ಗಣೇಶ ಉತ್ಸವ’. ‘ಬೆಂಗಳೂರು ಗಣೇಶೋತ್ಸವ’ ಎಂದೇ ಪ್ರಸಿದ್ಧಿಯಾಗಿರುವ ಇದಕ್ಕೆ ಐದು ದಶಕಕ್ಕೂ ಹೆಚ್ಚಿನ ಇತಿಹಾಸವಿದೆ. ಈ ಬಾರಿಯದ್ದು 56ನೇ ಗಣೇಶೋತ್ಸವ. ‘ಶ್ರೀ ವಿದ್ಯಾರಣ್ಯ ಯುವಕ ಸಂಘ’ ಈ ಉತ್ಸವವನ್ನು ಆಯೋಜಿಸಿಕೊಂಡು ಬರುತ್ತಿದೆ.

ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಹೆಚ್ಚಿಸಿಕೊಂಡು ಸಾಗಿರುವ ಈ ಉತ್ಸವವು ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ, ಸಾಂಸ್ಕೃತಿಕ ಕಲಾ ಪ್ರಕಾರಗಳನ್ನೂ ಪೋಷಿಸುತ್ತ, ಶಾಸ್ತ್ರೀಯ ಮತ್ತು ಆಧುನಿಕ ಸಂಗೀತವನ್ನು ಏಕಕಾಲಕ್ಕೆ ಪೊರೆಯುತ್ತ ಬಂದಿದೆ.

11 ದಿನಗಳ ಗಣೇಶೋತ್ಸವ: ಇದೇ 13ರಿಂದ 22ರವರೆಗೂ ನಡೆಯುವ ಈಗಣೇಶೋತ್ಸವವು ಬಸವನಗುಡಿಯ ಎಪಿಎಸ್‌ ಕಾಲೇಜು ಮೈದಾನ ಮತ್ತು ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಗಣೇಶ ಮೂರ್ತಿಯನ್ನು ಎಪಿಎಸ್‌ ಕಾಲೇಜು ಮೈದಾನದಲ್ಲಿ ಪ್ರತಿಷ್ಠಾಪಿಸಲಾಗುತ್ತಿದ್ದು, ಅದಕ್ಕಾಗಿ ವಿಶೇಷಾಲಂಕಾರದ ವೇದಿಕೆ ಸಜ್ಜುಗೊಳ್ಳುತ್ತಿದೆ. ಇದೇ 13ರಿಂದ 18ರವರೆಗೆ ಎಪಿಎಸ್‌ ಕಾಲೇಜು ಮೈದಾನದಲ್ಲಿ ಹಾಗೂ 19ರಿಂದ 23ರವರೆಗೆ ನ್ಯಾಷನಲ್‌ ಕಾಲೇಜು ಮೈದಾನದಲ್ಲಿಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ದೇವಲೋಕವೇ ಸೃಷ್ಟಿ: ಈ ಬಾರಿಯೂ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ವೇದಿಕೆಯೂ ವಿಶೇಷ ಮತ್ತು ವಿಭಿನ್ನವಾಗಿಸಲು ಆಯೋಜಕರು ಶ್ರಮಿಸುತ್ತಿದ್ದಾರೆ. ಈ ಬಾರಿ ದೇವಲೋಕವನ್ನೇ ಧರೆಗಿಳಿಸುವಂತೆ ಯೋಜಿಸಿದ್ದಾರೆ. ವಿಘ್ನ ನಿವಾರಕ ಗಣಪತಿಯನ್ನು ಆರು ಜನರು ಪಲ್ಲಕ್ಕಿಯಲ್ಲಿ ಹೊತ್ತು, ಆನೆ ಹಾಗೂ ಜಿಂಕೆಗಳ ಹಿಂಡಿನ ಹಿಂದೆ ಕಾಡಿನಲ್ಲಿ ಕರೆದೊಯ್ಯುವ ರೀತಿಯಲ್ಲಿ ರೂಪಿಸಲಾಗುತ್ತಿದೆ.ಸಿದ್ಧಿ ವಿನಾಯಕನ ಮಂಟಪವನ್ನು ಪುರಾಣದ ಹಿನ್ನೆಲೆಯನ್ನು ಬಳಸಿಕೊಂಡು 80 ಅಡಿ ಅಗಲ ಮತ್ತು 60 ಅಡಿ ಉದ್ದದ ವಿಸ್ತೀರ್ಣದಲ್ಲಿ ವಿನೂತನವಾಗಿ ರಚಿಸಲಾಗುತ್ತಿದೆ.

ಆಭರಣಗಳಿಂದ ಝಗಮಗಿಸುವ ಕಂಬಗಳು, ಹೊಳೆಯುವ ಗಾಜಿನಿಂದ ಕೂಡಿದ ಛಾವಣಿಗಳು, ಅಲಂಕಾರಿಕ ಸ್ಟೀಲ್ ಗ್ರಿಲ್‍ಗಳು, ದೀಪಧಾರಿಣಿಯರಿಂದ ಅಲಂಕೃತವಾದ ಪರಿಸರ ಹಾಗೂ ಅತ್ಯಾಕರ್ಷಕ ಹೂವಿನ ಅಲಂಕಾರದೊಂದಿಗೆ ಗಣೇಶನ ಮಂಟಪವನ್ನು ಸಿಂಗರಿಸಲಾಗುತ್ತಿದೆ. ಕರಕುಶಲ ಕಲೆಗೆ 2002ರಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಶಿಲ್ಪಿ ಗೌರಂಗ ಕುಯ್ಲಾ ಅವರು ಈ ಬಾರಿ ಮಂಟಪವನ್ನು ವಿನ್ಯಾಸಗೊಳಿಸುತ್ತಿದ್ದಾರೆ.

ಖ್ಯಾತ ಚಿತ್ರಕಲಾವಿದ, ಶಿಲ್ಪಿ ಹಾಗೂ ಇನ್‍ಸ್ಟಲೇಶನ್ ಆರ್ಟಿಸ್ಟ್ ಆಗಿರುವ ಗೌರಂಗ ಅವರು ಕೋಲ್ಕತ್ತದಲ್ಲಿ ದುರ್ಗಾ ಪೂಜೆಯ ಸುಂದರ ಪೆಂಡಾಲ್‍ಗಳನ್ನು ನಿರ್ಮಿಸುವಲ್ಲಿ ಖ್ಯಾತಿ ಪಡೆದಿದ್ದಾರೆ ಎನ್ನುತ್ತಾರೆಗಣೇಶ ಉತ್ಸವ ಸಮಿತಿಯ ವ್ಯವಸ್ಥಾಪಕ ಟ್ರಸ್ಟಿ ಎಸ್‌.ಎಂ. ನಂದೀಶ್.

2017ರಲ್ಲಿ ಮೈಸೂರು ಅರಮನೆಯ ದರ್ಬಾರು ಸಭಾಂಗಣ, 2016ರಲ್ಲಿ ಮೇಲು ಕೋಟೆಯ ಕಲ್ಯಾಣಿ, 2015ರಲ್ಲಿ ಕೊಲ್ಲೂರಿನ ಮೂಕಾಂಬಿಕಾ ದೇವಾಲಯ, 2014ರಲ್ಲಿ ಹಂಪಿಯ ವಾಸ್ತುಶೈಲಿ ಮಾದರಿಯ ವೇದಿಕೆಗಳನ್ನು ನಿರ್ಮಿಸಿ ಉತ್ಸವ ಆಕರ್ಷಕವಾಗುವಂತೆ ಮಾಡಲಾಗಿತ್ತು.

ತಾರೆಗಳ ದಂಡು: ಉತ್ಸವದಲ್ಲಿ ಭಾಗವಹಿಸಲು ತಾರೆಗಳ ದಂಡೇ ಬಸವನಗುಡಿಗೆ ಆಗಮಿಸುತ್ತಿದೆ. ಖ್ಯಾತ ಗಾಯಕರಾದ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಶ್ರೇಯಾ ಘೋಷಾಲ್ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಬಾಲಿವುಡ್‍ನ ದಂತಕತೆ, ಪ್ರಸಿದ್ಧ ನಟ ರಿಷಿ ಕಪೂರ್ ಉತ್ಸವಕ್ಕೆ ಮೆರುಗು ನೀಡಲಿದ್ದಾರೆ. ಪ್ರಸಿದ್ಧ ಗಾಯಕ ವಿಜಯ ಪ್ರಕಾಶ್ ಅವರು ರಿಷಿ ಕಪೂರ್ ಅವರೊಂದಿಗೆ ಸಂವಾದ ನಡೆಸಲಿದ್ದಾರೆ. ಇವುಗಳ ಜೊತೆಗೆ, ಸುಮಧುರ ಸಂಗೀತ ಸಂಜೆಗಳು, ಹಸ್ಮಿತಾ ಗಣೇಶ್ ಅವರಿಂದ ಭರತನಾಟ್ಯ ಸೇರಿದಂತೆ ಹಲವು ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಳಿಸಲಿವೆ.

ಪುರಂದರ ಆರಾಧನಾ ಮಹೋತ್ಸವ: ಉತ್ಸವದ ಮೊದಲ ಭಾನುವಾರ ರಾಜ್ಯದ ವಿವಿಧ ಭಾಗಗಳ ಸಂಗೀತಗಾರರಿಂದ 12 ಗಂಟೆಗಳ ನಿರಂತರ ಪುರಂದರ ಆರಾಧನಾ ಮಹೋತ್ಸವವಿದೆ. ಐದನೇ ದಿನ ಸಂಗೀತ ಕ್ಷೇತ್ರದ ಮಾಂತ್ರಿಕ ಆರ್.ಡಿ.ಬರ್ಮನ್ ಅವರ ಸ್ಮರಣಾರ್ಥ ಸಂಗೀತ ಸಂಜೆ ನಡೆಯಲಿದ್ದು, ಪ್ರಸಿದ್ಧ ಗಾಯಕರಾದ ಮೋಹನ್ ಕೃಷ್ಣ, ಎಂ.ಡಿ. ಪಲ್ಲವಿ, ಮಾಳವಿಕಾ ಸುಂದರ್, ಅಲೋಕ್ ಕಾಟ್ದರೆ ಹಾಗೂ ಆದಿತ್ಯ ವಿಠ್ಠಲ್ ಅವರು ಹಾಡಲಿದ್ದಾರೆ. ಅರುಣ್ ಕುಮಾರ್ ಮತ್ತು ತಂಡ ಹಾಗೂ ಕಿಶೋರ್ ಸೋಧಾ ಅವರು ವಾದ್ಯದ ಸಾಥ್ ನೀಡಲಿದ್ದಾರೆ.

ಭರತನಾಟ್ಯ ಮತ್ತು ರಾಗರಂಜಿನಿ: ಭರತನಾಟ್ಯದ ಮೂಲಕ ರಾಜ್ಯದ ವಿವಿಧ ಭಾಷೆಗಳ ಕುರಿತ ಕಲಾ ಸಂಭ್ರಮವೂ ನಡೆಯಲಿದೆ. ಕನ್ನಡ, ಕೊಂಕಣಿ, ತುಳು, ಕೊಡವ ಭಾಷೆಗಳಲ್ಲಿನ ಅಪರೂಪದ ರಚನೆಗೆ ಕುಮಾರಿ ಕಿರಣ್‌ ಕಾಮತ್‌ ಅವರು ಭರತನಾಟ್ಯ ಪ್ರದರ್ಶಿಸುವರು. ಅಲ್ಲದೆ ಪ್ರಸಿದ್ಧ ಕೊಳಲು ವಾದಕ ಪ್ರವೀಣ್‌ ಗೋಡ್ಖಿಂಡಿ ಮತ್ತು ಪಂಡಿತ್‌ ಜಯತೀರ್ಥ ಮೇವುಂಡಿ ಅವರಿಂದ ಶಾಸ್ತ್ರೀಯ ಸಂಗೀತ ಜುಗಲ್‌ಬಂದಿ ಮತ್ತು ಫ್ಯೂಷನ್‌ ಸಂಗೀತ ಕಛೇರಿ ಆಯೋಜನೆಗೊಂಡಿದೆ. ಅಂತೆಯೇ ಮಿಮಿಕ್ರಿ ದಯಾನಂದ್‌, ಪ್ರೊ.ಕೃಷ್ಣೇಗೌಡ ಅವರಿಂದ ಹಾಸ್ಯ ಸಂಜೆ, ಪ್ರಹ್ಲಾದ ಆಚಾರ್ಯ ಅವರಿಂದ ನೆರಳು ಕಲೆ ಹಾಗೂ ಮ್ಯಾಜಿಕ್‌ ಪ್ರದರ್ಶನವೂ ನಡೆಯಲಿದೆ.

ರಂಗೋತ್ಸವ: ಹಿರಿಯ ರಂಗಕರ್ಮಿ ಬಿ. ಜಯಶ್ರೀ ಮತ್ತು ತಂಡದಿಂದ ರಂಗಗೀತೆಗಳು ಹಾಗೂ ಮಂಡ್ಯ ರಮೇಶ್‌ ನಿರ್ದೇಶನದಲ್ಲಿ ನಟನ ರಂಗಶಾಲೆಯ ಕಲಾವಿದರಿಂದ ‘ಚೋರ ಚಂದ್ರಹಾಸ’ ನಾಟಕವೂ ಪ್ರದರ್ಶನಗೊಳ್ಳಲಿದೆ. ಹೀಗೆ 11 ದಿನ ವಿವಿಧ ಕ್ಷೇತ್ರದ ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸುವ ಮೂಲಕ ಕಲಾ ರಸಿಕರ ಮನತಣಿಸಲಿದ್ದಾರೆ.

ಈ ಅದ್ಧೂರಿ ಉತ್ಸವಕ್ಕೆ ಬರುವವರಿಗೆ ಉಚಿತ ಪ್ರವೇಶಾವಕಾಶವಿದೆ. ಮಾಹಿತಿಗೆ ವೆಬ್‌ಸೈಟ್‌ಗೆ (www.bgu.co.in) ಭೇಟಿ ನೀಡಿ.

20 ಕೆ.ಜಿ ಬೆಳ್ಳಿ ಲೇಪಿತ ಕಿರೀಟ

ಉತ್ಸವದ ವೇಳೆ ಹಲವರು ಹಲವು ಬಗೆಯ ಹರಕೆ ಕಟ್ಟಿಕೊಳ್ಳುತ್ತಾರೆ. ಅದು ಈಡೇರಿರುವ ನಿದರ್ಶನಗಳೂ ಇವೆ. ಅದರಂತೆ ಹರಕೆ ಕಟ್ಟಿಕೊಂಡ ರಾಜ್‌ಹನ್ಸ್‌ ಎಂಟರ್‌ಪ್ರೈಸಸ್‌ನ ವ್ಯವಸ್ಥಾಪಕ ನಿರ್ದೇಶಕ ಬಾಲಚಂದ್ರ ಅವರು 20 ಕೆ.ಜಿ ಬೆಳ್ಳಿ ಲೇಪಿತ ಕಿರೀಟ ಮತ್ತು ಆಭರಣಗಳನ್ನು ಗಣಪತಿ ಮೂರ್ತಿಗೆ ನೀಡಿ ಹರಕೆ ತೀರಿಸುತ್ತಿದ್ದಾರೆ ಎಂದು ಎಸ್‌.ಎಂ. ನಂದೀಶ್‌ ಮಾಹಿತಿ ನೀಡಿದರು.

ಗಣೇಶೋತ್ಸವ ನಡೆದು ಬಂದ ಹಾದಿ

‘ಬೆಂಗಳೂರು ಗಣೇಶೋತ್ಸವ’ ಆರಂಭವಾಗಿದ್ದು 1962ರಲ್ಲಿ. ಅಲ್ಲಿಂದ 1975ರವರೆಗೆ ನಗರದ ಡಿವಿಜಿ ರಸ್ತೆಯಲ್ಲಿ ನಡೆಯುತ್ತಿತ್ತು. ರಸ್ತೆ ತುಂಬಾ ನೆಲಹಾಸು ಹಾಸಲಾಗುತ್ತಿತ್ತು. ವರ್ಷದಿಂದ ವರ್ಷಕ್ಕೆ ಜನ ಸೇರುವುದು ಹೆಚ್ಚಾದ್ದರಿಂದ 1975ರಲ್ಲಿ ಎಪಿಎಸ್‌ ಕಾಲೇಜು ಬಳಿಯ ಮಲ್ಲಿಕಾರ್ಜುನ ಗುಡಿ ಹತ್ತಿರದ ಮೈದಾನದಲ್ಲಿ ಉತ್ಸವ ಆಯೋಜಿಸಲಾಗುತ್ತಿತ್ತು. ಇಲ್ಲಿ ಸುಮಾರು 20 ವರ್ಷ ಉತ್ಸವ ನಡೆಯಿತು. ಅಲ್ಲೂ ಜನದಟ್ಟಣೆ ಹೆಚ್ಚಾದ್ದರಿಂದ ಉತ್ಸವವನ್ನು ಎಪಿಎಸ್‌ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸಲಾಯಿತು. ಉತ್ಸವದ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿ ವೀಕ್ಷಕರ ಸಂಖ್ಯೆ ಹೆಚ್ಚಳವಾದ್ದರಿಂದ ಕೆಲ ವರ್ಷಗಳಿಂದ ಉತ್ಸವದ ಕೆಲವು ಸಾಂಸ್ಕೃತಿಕ ಕಾರ್ಯಕ್ರಮವನ್ನು ಬಸವನಗುಡಿಯ ನ್ಯಾಷನಲ್‌ ಕಾಲೇಜು ಮೈದಾನದಲ್ಲಿಯೂ ಆಯೋಜಿಸಲಾಗುತ್ತಿದೆ ಎನ್ನುತ್ತಾರೆ ಉತ್ಸವ ಸಮಿತಿಯ ವ್ಯವಸ್ಥಾಪಕ ಟ್ರಸ್ಟಿ ಎಸ್‌.ಎಂ. ನಂದೀಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT