ಪೋರ್ಟಿಸೆಲ್ಲೊ: ಸಿಸಿಲಿ ದ್ವೀಪದಲ್ಲಿ ಮುಳುಗಿರುವ ಹಾಯಿದೋಣಿಯಲ್ಲಿದ್ದ ಪ್ರಯಾಣಿಕರಿಗಾಗಿ ಮಂಗಳವಾರವೂ ಶೋಧ ನಡೆಯಿತು. ಬ್ರಿಟನ್ ಉದ್ಯಮಿ ಮೈಕ್ ಲಿಂಚ್ ಸೇರಿದಂತೆ ಆರು ಜನರು ಸಮುದ್ರದ 50 ಮೀಟರ್ (164 ಅಡಿ) ಆಳದಲ್ಲಿ ಸಿಲುಕಿರಬಹುದೆಂದು ಮುಳುಗುತಜ್ಞರು ಪಾಳಿಯಲ್ಲಿ ಕಾರ್ಯಾಚರಣೆ ನಡೆಸಿದರು.
‘ಮುಳುಗುತಜ್ಞರು ಇಷ್ಟು ಆಳಕ್ಕೆ ಇಳಿದು 12 ನಿಮಿಷ ಮಾತ್ರ ಹುಡುಕಾಟ ನಡೆಸಬಹುದು. ಹೀಗಾಗಿ 12 ನಿಮಿಷಗಳ ಪಾಳಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದರಿಂದಾಗಿ ಶೋಧಕಾರ್ಯ ವಿಳಂಬವಾಗುತ್ತಿದೆ’ ಎಂದು ಅಗ್ನಿಶಾಮಕ ತಂಡ ಹೇಳಿಕೆಯಲ್ಲಿ ತಿಳಿಸಿದೆ.
ಸೋಮವಾರ ಮುಂಜಾನೆ ಚಂಡಮಾರುತಕ್ಕೆ ಸಿಲುಕಿ ಹಾಯಿದೋಣಿಯು ಮುಳುಗಿದ್ದು, ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಮಹಿಳೆ ಸೇರಿದಂತೆ 15 ಮಂದಿಯನ್ನು ರಕ್ಷಿಸಲಾಗಿದೆ. ಆರು ಮಂದಿ ನಾಪತ್ತೆಯಾಗಿದ್ದಾರೆ.