ನವದೆಹಲಿ: ರಷ್ಯಾ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ 45 ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ. ಮತ್ತಷ್ಟು 50 ಮಂದಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ತಿಳಿಸಿದೆ.
'ಈ ಪೈಕಿ ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಫಲಪ್ರದ ಚರ್ಚೆ ನಡೆಸಿದ ಬಳಿಕ 35 ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಷ್ಯಾದ ಸೇನೆಯಲ್ಲಿ ಭಾರತೀಯರ ನೇಮಕಾತಿ ವಿಚಾರವು ಭಾರತ ಹಾಗೂ ರಷ್ಯಾದ ಬಾಂಧವ್ಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ರಷ್ಯಾ-ಉಕ್ರೇನ್ ಸಂಘರ್ಷದ ಬೆನ್ನಲ್ಲೇ ಈ ವಿಷಯ ಹೆಚ್ಚು ವಿವಾದಕ್ಕೀಡಾಗಿತ್ತು.
ಜುಲೈ ತಿಂಗಳಲ್ಲಿ ರಷ್ಯಾದ ಪ್ರವಾಸ ಕೈಗೊಂಡಿದ್ದ ಮೋದಿ, ರಷ್ಯಾದ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯರನ್ನು ತ್ವರಿತವಾಗಿ ಬಿಡುಗಡೆ ಮಾಡಲು ಕ್ರಮ ಕೈಕೊಳ್ಳುವಂತೆ ಪುಟಿನ್ ಅವರನ್ನು ಒತ್ತಾಯಿಸಿದ್ದರು.
'ರಷ್ಯಾ ಪ್ರವಾಸದ ವೇಳೆ ಪುಟಿನ್ ಜತೆ ಈ ವಿಷಯವನ್ನು ಪ್ರಧಾನಿ ಮೋದಿ ಪ್ರಸ್ತಾಪ ಮಾಡಿದ್ದರು. ಅದಾದ ನಂತರ 35 ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ. ಅದಕ್ಕೂ ಮೊದಲು 10 ಭಾರತೀಯರನ್ನು ಬಿಡುಗಡೆಗೊಳಿಸಲಾಗಿತ್ತು' ಎಂದು ರಣದೀರ್ ತಿಳಿಸಿದ್ದಾರೆ.
ಏಪ್ರಿಲ್‌ನಲ್ಲಿ ಸೇನೆಗೆ ಭಾರತೀಯರ ನೇಮಕಾತಿಯನ್ನು ರಷ್ಯಾ ರದ್ದುಗೊಳಿಸಿತ್ತು.