ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಮಾಹಿತಿ ಸಂಗ್ರಹಕ್ಕೆ ಭಾರತದ ಸಿಸಿಟಿವಿ ಬಳಸುತ್ತಿದೆ : ಪ್ರಧಾನಿಗೆ ಪತ್ರ

Last Updated 6 ಮಾರ್ಚ್ 2023, 2:33 IST
ಅಕ್ಷರ ಗಾತ್ರ

ನವದೆಹಲಿ: ಚೀನಾದ ಹ್ಯಾಕರ್‌ಗಳು ಭಾರತದಲ್ಲಿ ಅಳವಡಿಸಿರುವ ತನ್ನ ಕ್ಲೋಸ್ ಸರ್ಕ್ಯೂಟ್ ಟೆಲಿವಿಷನ್‌ಗಳಿಂದಲೇ(ಸಿಸಿಟಿವಿ) ಭಾರತದ ಕುರಿತು ಮಾಹಿತಿ ಪಡೆಯುವ ಅಪಾಯವಿದ್ದು, ಸರ್ಕಾರಿ ಕಚೇರಿಗಳಲ್ಲಿ ಚೀನಾದ ‌ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ನಿಷೇಧಿಸಿ ನಿರ್ದೇಶನ ನೀಡುವಂತೆ ಅರುಣಾಚಲ ಪ್ರದೇಶದ ಕಾಂಗ್ರೆಸ್ ಶಾಸಕರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಇಲ್ಲಿನ ಪಾಸಿಘಾಟ್ ಪಶ್ಚಿಮದ ಶಾಸಕ ಮತ್ತು ಮಾಜಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ನಿನೊಂಗ್ ಎರಿಂಗ್ ‘ಭಾರತದಲ್ಲಿ ಬಳಸುತ್ತಿರುವ ಚೀನಾ ನಿರ್ಮಿತ ಸಿಸಿಟಿವಿಗಳನ್ನು ಬೀಜಿಂಗ್‌ ತನ್ನ ಕಣ್ಣು ಮತ್ತು ಕಿವಿಗಳಾಗಿ ಬಳಸಬಹುದು’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇಂಟರ್ನೆಟ್ ಪ್ರೋಟೋಕಾಲ್ (ಐಪಿ) ಕ್ಯಾಮೆರಾಗಳು ಮತ್ತು ಇಂಟರ್ನೆಟ್-ಚಾಲಿತ ಡಿಜಿಟಲ್ ವೀಡಿಯೊ ರೆಕಾರ್ಡಿಂಗ್ (ಡಿವಿಆರ್‌) ಸಾಧನಗಳನ್ನು ಚೀನಾ ಮಾಹಿತಿ ಸಂಗ್ರಹದ ಸಾಧನವಾಗಿ ಬಳಸುತ್ತಿದ್ದು, ಮನೆಗಳಲ್ಲಿ ಅದನ್ನು ಬಳಕೆ ಮಾಡದಂತೆ ಜಾಗೃತಿ ಮೂಡಿಸುವ ಅಭಿಯಾನವನ್ನು ಎರಿಂಗ್‌ ಆಯೋಜಿಸಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದು ಚೀನಾ ಸಿಸಿಟಿವಿ ಮಾಹಿತಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕುರಿತು ವರದಿ ಮಾಡಿತ್ತು. ಆ ವರದಿ ಉಲ್ಲೇಖಿಸಿ ಪತ್ರ ಬರೆದಿರುವ ಎರಿಂಗ್‌, ಚೀನಾದ ಈ ಹೊಸ ಬೆದರಿಕೆಯನ್ನು ಎದುರಿಸಲು ನಮ್ಮಲ್ಲಿ ಅಸ್ತಿತ್ವದಲ್ಲಿರುವ ಕಾನೂನುಗಳು ಮತ್ತು ಅರಿವು ಅಸಮರ್ಪಕವಾಗಿವೆ. ಹೀಗಾಗಿ ದೇಶದ ರಾಷ್ಟ್ರೀಯ ಭದ್ರತೆಗೆ ಗಂಭೀರ ಬೆದರಿಕೆಯಿದೆ ಎಂದು ಹೇಳಿದ್ದಾರೆ.

‘ಚೀನಾ ದೇಶದ ಗಡಿ ಭಾಗ ಮಾತ್ರವಲ್ಲದೆ ಭಾರತದ ಐಟಿ ಮೂಲಸೌಕರ್ಯದ ಮೇಲೆ ದಾಳಿ ಮಾಡುತ್ತಿದೆ. ಈ ಚೀನೀ ಬೆದರಿಕೆಯನ್ನು ತಡೆಯಲು ಭಾರತವು ನಿರ್ಣಾಯಕ ಕ್ರಮ ತೆಗೆದುಕೊಳ್ಳಬೇಕು’ ಎಂದು ನಿನಾಂಗ್ ಎರಿಂಗ್ ಪತ್ರದಲ್ಲಿ ಪ್ರಧಾನಿ ಮೋದಿಗೆ ಒತ್ತಾಯಿಸಿದ್ದಾರೆ.

ಚೀನಾದ ಹ್ಯಾಕರ್‌ಗಳಿಂದ ಭಾರತೀಯ ಸಂಸ್ಥೆಗಳ ಮೇಲೆ ‘ನಿಯಮಿತ ದಾಳಿ’ಯನ್ನು ವಿವರಿಸಿರುವ ಕಾಂಗ್ರೆಸ್ ಶಾಸಕರು, ಚೀನೀ ಹ್ಯಾಕರ್‌ಗಳಿಂದ ಸೈಬರ್-ಬೇಹುಗಾರಿಕೆ ಅಭಿಯಾನವನ್ನು ಸಮರ್ಥಿಸಿಕೊಂಡಿರುವ ಯುಎಸ್ ಮೂಲದ ಬೆದರಿಕೆ ಗುಪ್ತಚರ ಸಂಸ್ಥೆಯ ವರದಿಯನ್ನು ಉಲ್ಲೇಖಿಸಿದ್ದಾರೆ.

ಹ್ಯಾಕರ್‌ಗಳು ಭಾರತ-ಚೀನಾ ವಿವಾದಿತ ಗಡಿ ಬಳಿಯ ಲಡಾಖ್‌ನಲ್ಲಿರುವ ವಿದ್ಯುತ್ ಪ್ರಸರಣ ಮತ್ತು ಗ್ರಿಡ್‌ ನಿಯಂತ್ರಣದ ಕನಿಷ್ಠ ಏಳು ‘ಲೋಡ್ ಡಿಸ್ಪ್ಯಾಚ್’ ಕೇಂದ್ರಗಳನ್ನು ಟಾರ್ಗೆಟ್‌ ಮಾಡಿದ್ದಾರೆ ಎಂದು ಜೂನ್ 2022 ರಲ್ಲಿ ಪ್ರಕಟವಾದ ಗುಪ್ತಚರ ಸಂಸ್ಥೆ ಫ್ಯೂಚರ್ ಇಂಕ್ ವರದಿ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT