ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿಗಳಾದ ನವಾಜ್ ಷರೀಫ್, ಶೆಹಬಾಜ್ ಷರೀಫ್ ಮತ್ತು ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಸೇರಿದಂತೆ ಕನಿಷ್ಠ 80 ಮಂದಿ ಗಣ್ಯಾತಿ ಗಣ್ಯರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳು ಮರು ತನಿಖೆಗೆ ಒಳಪಡಲಿವೆ ಎಂದು ಶುಕ್ರವಾರ ಮಾಧ್ಯಮವೊಂದು ವರದಿ ಮಾಡಿದೆ.
ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ನೇತೃತ್ವದ ಹಿಂದಿನ ಸರ್ಕಾರ ಭ್ರಷ್ಟಾಚಾರ ನಿಗ್ರಹ ಕಾನೂನುಗಳಿಗೆ ತಿದ್ದುಪಡಿ ತಂದು, ಹಲವು ಪ್ರಕರಣಗಳನ್ನು ಮುಚ್ಚಿ ಹಾಕಲಾಗಿತ್ತು. ಆ ಎಲ್ಲ ಪ್ರಕರಣಗಳು ಮರು ತನಿಖೆಗೆ ಒಳಪಡಲಿದ್ದು, ಶೀಘ್ರದಲ್ಲೇ ವಿಚಾರಣೆ ಆರಂಭವಾಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಭ್ರಷ್ಟಾಚಾರ ಕಾನೂನುಗಳ ತಿದ್ದುಪಡಿಯನ್ನು ಸೆಪ್ಟೆಂಬರ್ 15ರಂದು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಅನೂರ್ಜಿತಗೊಳಿಸಿತ್ತು. ಅಲ್ಲದೆ ಈಗಾಗಲೇ ಮುಕ್ತಾಯಗೊಂಡಿರುವ ಸರ್ಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧದ ಎಲ್ಲ ಪ್ರಕರಣಗಳನ್ನು ಮರು ತನಿಖೆಗೆ ಒಳಪಡಿಸುವಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ(ಎನ್ಎಬಿ) ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು.
ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದಾಗಿ ಉದ್ಯಮಿಗಳು ಮತ್ತು ಅಧಿಕಾರಿಗಳ ವಿರುದ್ಧದ ಸುಮಾರು 2,000 ಪ್ರಕರಣಗಳನ್ನು ಮತ್ತೆ ವಿಚಾರಣೆಗೊಳಪಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.