ಢಾಕಾ (ಪಿಟಿಐ): ‘ಪದಚ್ಯುತ ಪ್ರಧಾನಿ ಶೇಕ್ ಹಸೀನಾ ಅವರನ್ನು ಭಾರತದಿಂದ ವಾಪಸ್ ಕರೆಯಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯ ಸರ್ಕಾರದ ಪರ ವಕೀಲ ಮೊಹಮ್ಮದ್ ತಾಜುಲ್ ಇಸ್ಲಾಂ ಭಾನುವಾರ ತಿಳಿಸಿದರು.
ವಿದ್ಯಾರ್ಥಿಗಳು ನೇತೃತ್ವ ವಹಿಸಿದ್ದ ಚಳವಳಿಯ ಸಂದರ್ಭದಲ್ಲಿ ಸಾಮೂಹಿಕ ಹತ್ಯೆ ನಡೆಸಿದ ಆರೋಪ ಸಂಬಂಧದ ವಿಚಾರಣೆಗಾಗಿ ಅವರನ್ನು ವಾಪಸ್ ಕರೆಯಿಸಿಕೊಳ್ಳುವುದು ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
‘ಹಸೀನಾ ಸೇರಿ ಸಾಮೂಹಿಕ ಹತ್ಯೆಯಲ್ಲಿ ಪಾತ್ರವಹಿಸಿ ದೇಶದಿಂದ ಓಡಿ ಹೋಗಿರುವ ಎಲ್ಲರನ್ನೂ ವಾಪಸು ಕರೆಸಿಕೊಳ್ಳುವ ಕುರಿತು ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಲಾಗುವುದು. ಈ ಬಗ್ಗೆ ಸರ್ಕಾರದೊಂದಿಗೂ ಚರ್ಚಿಸಲಾಗುವುದು’ ಎಂದರು.
‘ವಿದ್ಯಾರ್ಥಿಗಳ ಸರ್ಕಾರಿ ವಿರೋಧಿ ಚಳವಳಿಯಲ್ಲಿ ಸುಮಾರು 1,000 ಜನರು ಮೃತಪಟ್ಟು ನೂರಾರು ಮಂದಿ ಗಾಯಗೊಂಡಿದ್ದರು’ ಎಂದು ಮಧ್ಯಂತ ಸರ್ಕಾರ ಆರೋಪಿಸಿದೆ.