ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈವಾನ್‌ ಗಡಿ ಬಳಿ ಚೀನಾ ಯುದ್ಧ ವಿಮಾನಗಳ ಹಾರಾಟ

ತೈವಾನ್‌ ಅಧ್ಯಕ್ಷೆ– ಅಮೆರಿಕ ಸ್ಪೀಕರ್ ಭೇಟಿಗೆ ಪ್ರತೀಕಾರ
Last Updated 8 ಏಪ್ರಿಲ್ 2023, 12:32 IST
ಅಕ್ಷರ ಗಾತ್ರ

ಬೀಜಿಂಗ್‌: ತೈವಾನ್‌ ಅಧ್ಯಕ್ಷೆ ಸಾಯ್‌ ಇಂಗ್‌ ವೆನ್‌ ಅವರು ಅಮೆರಿಕ ಸಂಸತ್‌ ಸ್ಪೀಕರ್‌ ಕೆವಿನ್‌ ಮೆಕಾರ್ಥಿ ಅವರೊಂದಿಗೆ ಸಭೆ ನಡೆಸಿದ್ದಕ್ಕೆ ಪ್ರತೀಕಾರವಾಗಿ ಚೀನಾ ಶನಿವಾರ ಯುದ್ಧನೌಕೆಗಳು ಮತ್ತು ಯುದ್ಧವಿಮಾನಗಳನ್ನು ದೇಶದತ್ತ ಕಳುಹಿಸಿದೆ ಎಂದು ತೈವಾನ್‌ ಸರ್ಕಾರ ಶನಿವಾರ ಆರೋಪಿಸಿದೆ.

ತೈವಾನ್‌ಗೆ ಎಚ್ಚರಿಕೆ ನೀಡುವ ಸಲುವಾಗಿ ಮೂರು ದಿನಗಳ ಸೇನಾ ತಾಲೀಮು ಆರಂಭಿಸಿರುವುದಾಗಿ ಚೀನಾ ಸೇನೆ ಘೋಷಿಸಿದೆ. ಆದರೆ, ಹಿಂದಿನಂತೆಯೇ ಸಮುದ್ರದಲ್ಲಿ ಕ್ಷಿಪಣಿ ಪ್ರಯೋಗ ನಡೆಸಲಾಗುತ್ತದೆಯೇ ಎಂಬ ಬಗ್ಗೆ ಪೀಪಲ್ಸ್‌ ಲಿಬರೇಷನ್‌ ಆರ್ಮಿ (ಪಿಎಲ್‌ಎ) ಯಾವುದೇ ಮಾಹಿತಿ ನೀಡಿಲ್ಲ.

ಸೇನಾ ತಾಲೀಮು ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆ ರಕ್ಷಿಸಲು ಅಗತ್ಯವಾದ ಕ್ರಮವಾಗಿದೆ ಎಂದು ಪಿಎಲ್‌ಎ ಹೇಳಿದೆ.

ಚೀನಾದ 8 ಯುದ್ಧನೌಕೆಗಳು ಮತ್ತು 48 ಯುದ್ಧ ವಿಮಾನಗಳು ತೈವಾನ್ ಸಮೀಪ ಕಂಡು ಬಂದಿವೆ. ಈ ಪೈಕಿ ಚೆಂಗ್ಡು ಜೆ–10, ಶೆನ್‌ಯಾಂಗ್‌ ಜೆ–11 ಮತ್ತು ಶೆನ್‌ಯಾಂಗ್‌ ಜೆ–16 ವಿಮಾನಗಳೂ ಸೇರಿವೆ ಎಂದು ತೈವಾನ್‌ ರಕ್ಷಣಾ ಸಚಿವಾಲಯ ಹೇಳಿದೆ.

‘ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳು ಸಕ್ರಿಯವಾಗಿವೆ. ಚೀನಾ ಯುದ್ಧವಿಮಾನಗಳು ಮತ್ತು ಯುದ್ಧ ನೌಕೆಗಳ ಚಲನವಲನಗಳನ್ನು ಗಮನಿಸಲು ಗಸ್ತು‌ ಕಳುಹಿಸಲಾಗಿದೆ. ದೇಶದ ಭದ್ರತೆ ಮತ್ತು ಸ್ಥಿರತೆಗೆ ಧಕ್ಕೆ ತರುವ ಚೀನಾದ ಯತ್ನವನ್ನು ಖಂಡಿಸುತ್ತೇವೆ’ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಅಮೆರಿಕ ಮತ್ತು ತೈವಾನ್‌ ನಾಯಕರ ನಡುವೆ ಸಭೆ ನಡೆದರೆ ‘ದಿಟ್ಟ ಪ್ರತ್ಯುತ್ತರ’ ನೀಡುವುದಾಗಿ ಚೀನಾ ಪದೇ ಪದೇ ಎಚ್ಚರಿಕೆ ನೀಡಿತ್ತು. ಆದಾಗ್ಯು ಗುರುವಾರ ಉಭಯ ದೇಶಗಳ ನಾಯಕರ ನಡುವೆ ಸಭೆ ನಡೆದಿತ್ತು. ನಂತರ ಚೀನಾ, ಅಮೆರಿಕದ ಕೆಲ ಸಂಸ್ಥೆಗಳಿಗೆ ಶುಕ್ರವಾರ ನಿಷೇಧ ಹೇರಿತ್ತು.

1949ರ ನಾಗರಿಕ ಯುದ್ಧದ ನಂತರ ಚೀನಾ ಮತ್ತು ತೈವಾನ್‌ ಪ್ರತ್ಯೇಕವಾಗಿವೆ. ದ್ವೀಪ ರಾಷ್ಟ್ರ ತೈವಾನ್‌ನಲ್ಲಿ ಸ್ವತಂತ್ರ ಆಡಳಿತ ಇದ್ದರೂ ಅದು ಈವರೆಗೆ ಸ್ವತಂತ್ರ ರಾಷ್ಟ್ರ ಎಂದು ಘೋಷಿಸಿಕೊಂಡಿಲ್ಲ. ತೈವಾನ್‌ ದ್ವೀಪವು ತನಗೆ ಸೇರಿದ್ದು ಎಂದು ಚೀನಾ ಹೇಳಿಕೊಳ್ಳುತ್ತಿದೆ. ತೈವಾನ್‌ ಸ್ವತಂತ್ರವನ್ನು ಬಯಸುವ ಪ್ರಜೆಗಳು ವಿದೇಶಿ ಅಧಿಕಾರಿಗಳನ್ನು ಭೇಟಿಯಾಗುವುದು ಯುದ್ಧಕ್ಕೆ ದಾರಿ ಮಾಡಿಕೊಡಲಿದೆ ಎಂದು ಎಚ್ಚರಿಕೆ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT