ಬೀಜಿಂಗ್/ನವದೆಹಲಿ: ಭಾರತದ ಅರುಣಾಚಲ ಪ್ರದೇಶ ಸೇರಿದಂತೆ ಕೆಲ ಭೂಭಾಗಗಳನ್ನು ತನ್ನದೆಂದು ಪ್ರತಿಪಾದಿಸುತ್ತಿರುವ ಚೀನಾ, ವಿವಾದಿತ ಪ್ರದೇಶಗಳನ್ನು ಒಳಗೊಂಡ ‘ಶಿಷ್ಟ ಭೂಪಟ’ದ ಈ ವರ್ಷದ ಆವೃತ್ತಿಯನ್ನು ಬಿಡುಗಡೆ ಮಾಡಿದೆ.
ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್ ಪ್ರದೇಶ, ತೈವಾನ್ ಹಾಗೂ ವಿವಾದಿತ ದಕ್ಷಿಣ ಚೀನಾ ಸಮುದ್ರದ ಬೃಹತ್ ಭಾಗ ತನಗೆ ಸೇರಿದ ಪ್ರದೇಶಗಳು ಎಂದು ಹೇಳಿಕೊಂಡಿರುವ ಚೀನಾ, ಈ ಪ್ರದೇಶಗಳನ್ನು ತನ್ನ ಹೊಸ ‘ಭೂಪಟ’ದಲ್ಲಿ ತೋರಿಸಿದೆ.
ಅರುಣಾಚಲ ಪ್ರದೇಶವನ್ನು ಚೀನಾ ‘ದಕ್ಷಿಣ ಟಿಬೆಟ್’ ಎಂದು ಕರೆಯುತ್ತಿದೆ. ಅಕ್ಸಾಯ್ ಚಿನ್ ಪ್ರದೇಶವನ್ನು ಅದು 1962ರ ಯುದ್ಧದ ವೇಳೆ ಆಕ್ರಮಿಸಿಕೊಂಡಿದೆ.
ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್ ತನ್ನದೆಂದು ತೋರಿಸಿ ಚೀನಾ ಬಿಡುಗಡೆ ಮಾಡಿರುವ ‘ಶಿಷ್ಟ ಭೂಪಟ’ವನ್ನು ಭಾರತ ತಿರಸ್ಕರಿಸಿದೆ.
‘ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದ್ದು, ಯಾವಾಗಲೂ ಹಾಗೆಯೇ ಇರಲಿದೆ’ ಎಂದು ಭಾರತ ಪುನರುಚ್ಚರಿಸಿದೆ.
‘ನೈಸರ್ಗಿಕ ಸಂಪನ್ಮೂಲ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಈ ಪ್ರಮಾಣಬದ್ಧ ಭೂಪಟವನ್ನು ಪ್ರಕಟಿಸಲಾಗಿದೆ’ ಎಂದು ಸರ್ಕಾರ ಒಡೆತನದ ಪತ್ರಿಕೆ ‘ಗ್ಲೊಬಲ್ ಟೈಮ್ಸ್’, ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ತಿಳಿಸಿದೆ.
‘ಚೀನಾ ಮತ್ತು ವಿಶ್ವದ ವಿವಿಧ ರಾಷ್ಟ್ರಗಳು ಗಡಿಗಳನ್ನು ಗುರುತಿಸಲು ಅನುಸರಿಸುವ ವಿಧಾನದ ಆಧಾರದ ಮೇಲೆ ಈ ಭೂಪಟವನ್ನು ರಚಿಸಲಾಗಿದೆ’ ಎಂದು ‘ಗ್ಲೊಬಲ್ ಟೈಮ್ಸ್’ ಹೇಳಿದೆ.
ದಕ್ಷಿಣ ಚೀನಾ ಸಮುದ್ರದ ಬೃಹತ್ ಭಾಗದ ಮೇಲೆ ಹಕ್ಕುಸ್ಥಾಪಿಸಲು ಯತ್ನಿಸುತ್ತಿರುವ ಚೀನಾ ನಡೆಯನ್ನು ಫಿಲಿಪ್ಪೀನ್ಸ್, ಮಲೇಷ್ಯಾ, ಬ್ರೂನಿ ಹಾಗೂ ತೈವಾನ್ ವಿರೋಧಿಸುತ್ತಲೇ ಇವೆ.
ಅಸಂಬದ್ಧ ಹಕ್ಕುಸ್ಥಾಪನೆಗೆ ಅರ್ಥ ಇಲ್ಲ: ಜೈಶಂಕರ್ ‘ಇತರ ರಾಷ್ಟ್ರಗಳ ಪ್ರದೇಶಗಳನ್ನು ತನ್ನದೆಂದು ಹೇಳಿಕೊಂಡು ಇಂತಹ ಭೂಪಟವನ್ನು ಬಿಡುಗಡೆ ಮಾಡುವುದು ಚೀನಾದ ಹಳೆಯ ಚಾಳಿ’ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ. ಎನ್‌ಡಿಟಿವಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಈ ವಿದ್ಯಮಾನ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು ‘ಇತರ ದೇಶಗಳ ಭೂಭಾಗಗಳನ್ನು ತನ್ನ ಭೂಪಟದಲ್ಲಿ ಅಳವಡಿಸಿ ಬಿಡುಗಡೆ ಮಾಡುವ ಚೀನಾದ ಇಂತಹ ನಡೆಗೆ ಯಾವ ಅರ್ಥವೂ ಇಲ್ಲ’ ಎಂದಿದ್ದಾರೆ. ‘ನಮ್ಮ ಗಡಿಗಳ ಬಗ್ಗೆ ಸರ್ಕಾರಕ್ಕೆ ಸ್ಪಷ್ಟತೆ ಇದೆ. ಅಸಂಬದ್ಧ ಹಕ್ಕುಸ್ಥಾಪನೆ ಮಾಡುವುದರಿಂದ ಇತರ ದೇಶಗಳ ಭೂಭಾಗಗಳು ನಿಮ್ಮದಾಗುವುದಿಲ್ಲ’ ಎಂದೂ ಹೇಳಿದ್ದಾರೆ. ‘ವಾಸ್ತವ ನಿಯಂತ್ರಣ ರೇಖೆಗುಂಟ (ಎಲ್‌ಎಸಿ) ಕೆಲ ಗಡಿಠಾಣೆಗಳಿಂದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಕುರಿತ ಮಾತುಕತೆಗೂ ಚೀನಾ ಬಿಡುಗಡೆ ಮಾಡಿರುವ ಹೊಸ ಭೂಪಟಕ್ಕೂ ಯಾವುದೇ ಸಂಬಂಧ ಇಲ್ಲ’ ಎಂದೂ ಜೈಶಂಕರ್ ಹೇಳಿದ್ದಾರೆ. ಸೆಪ್ಟೆಂಬರ್‌ನಲ್ಲಿ ದೆಹಲಿಯಲ್ಲಿ ಜಿ–20 ಶೃಂಗಸಭೆ ನಡೆಯಲಿದೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಬ್ರಿಕ್ಸ್ ಶೃಂಗದ ಸಂದರ್ಭದಲ್ಲಿ ಅಧ್ಯಕ್ಷ ಷಿ ಜಿನ್‌ಪಿಂಗ್ ಜೊತೆ ಮಾತುಕತೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಎಲ್‌ಎಸಿಯಿಂದ ಯೋಧರನ್ನು ಸಂಪೂರ್ಣವಾಗಿ ಹಿಂಪಡೆಯುವುದು ಸೇರಿದಂತೆ ಇತ್ಯರ್ಥಗೊಳ್ಳದ ಇತರ ವಿಷಯಗಳ ಕುರಿತು ಭಾರತದ ಕಳವಳ ವ್ಯಕ್ತಪಡಿಸಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಚೀನಾ ‘ಶಿಷ್ಟ ಭೂಪಟ’ ಬಿಡುಗಡೆ ಮಾಡಿರುವುದು ಗಮನಾರ್ಹ. ಈ ಹಿಂದೆಯೂ ಅರುಣಾಚಲ ಪ್ರದೇಶದ ಕೆಲ ಸ್ಥಳಗಳ ಹೆಸರುಗಳನ್ನು ಬದಲಿಸಲು ಚೀನಾ ಪ್ರಯತ್ನಿಸಿತ್ತು. ಅರುಣಾಚಲ ಪ್ರದೇಶ ಹೆಸರನ್ನು ‘ಝಾಂಗ್‌ನಾನ್’ ಎಂಬುದಾಗಿ ಹಾಗೂ ರಾಜ್ಯದ 11 ಸ್ಥಳಗಳ ಹೆಸರುಗಳನ್ನು ಬದಲಿಸಲು ಕಳೆದ ಏಪ್ರಿಲ್‌ನಲ್ಲಿ ಚೀನಾ ಮುಂದಾಗಿದ್ದನ್ನು ಭಾರತ ತಿರಸ್ಕರಿಸಿತ್ತು. 2018 ಹಾಗೂ 2021ರಲ್ಲಿಯೂ ಇಂಥದೇ ಪ್ರಯತ್ನಕ್ಕೆ ಕೈಹಾಕಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.