ದುಬೈ (ಎಪಿ/ ಎಎಫ್ಪಿ): ಇರಾನ್ನ ರಾಜಧಾನಿ ಟೆಹರಾನ್ನಲ್ಲಿ ಶುಕ್ರವಾರ ‘ಖದ್ಸ್ ದಿನ’ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಸಾವಿರಾರು ಮಂದಿ ಸೇರಿದ್ದ ಸ್ಥಳದಲ್ಲಿ ಭಾರಿ ಸ್ಫೋಟ ಸಂಭವಿಸಿದೆ.

ಸಾವು–ನೋವಿನ ಬಗ್ಗೆ ತಕ್ಷಣಕ್ಕೆ ಮಾಹಿತಿ ಲಭ್ಯವಾಗಿಲ್ಲ. ಈ ಪ್ರದೇಶದಲ್ಲಿ ದಾಳಿ ನಡೆಯಲಿದೆ ಎಂದು ಇಸ್ರೇಲ್ ಸೇನೆ ಎಚ್ಚರಿಕೆ ನೀಡಿತ್ತು ಎಂದು ಸರ್ಕಾರಿ ಸ್ವಾಮ್ಯದ ಸುದ್ದಿವಾಹಿನಿ ವರದಿ ಮಾಡಿದೆ.

ಇಂಕ್ವೆಲಾಬ್ ಸ್ಟ್ರೀಟ್ನಲ್ಲಿ ಟೆಹರಾನ್ ವಿಶ್ವವಿದ್ಯಾಲಯದ ಬಳಿಯ ಫಿರ್ದೋಸಿ ಚೌಕದಲ್ಲಿ ಸ್ಫೋಟ ಸಂಭವಿಸಿದೆ. ಈ ಸ್ಥಳವು ‘ಖುದ್ಸ್’ ಅಥವಾ ‘ಜೆರುಸಲೇಂ’ ದಿನದ ಅಂಗವಾಗಿ ನಡೆದ ರ್ಯಾಲಿಯ ಕೇಂದ್ರ ಸ್ಥಾನ ಆಗಿತ್ತು.

ದಿನದ ಬೆಳವಣಿಗೆ..

ಉತ್ತರ ಇರಾಕ್ನ ಕುರ್ದಿಸ್ತಾನ ಪ್ರದೇಶದ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ಫ್ರಾನ್ಸ್ನ ಒಬ್ಬ ಯೋಧ ಮೃತಪಟ್ಟಿದ್ದಾರೆ. ಇಸ್ಲಾಮಿಕ್ ಸ್ಟೇಟ್ ವಿರುದ್ಧದ ಹೋರಾಟದಲ್ಲಿ ಇರಾಕ್ ಪಡೆಗಳಿಗೆ ಬೆಂಬಲ ನೀಡಲು ಫ್ರಾನ್ಸ್ನ ಪಡೆಗಳನ್ನು ಇಲ್ಲಿ ನಿಯೋಜಿಸಲಾಗಿದೆ.

ಸಂಘರ್ಷ ಆರಂಭವಾದಾಗಿನಿಂದ ಇರಾನ್ನ 6 ಸಾವಿರಕ್ಕೂ ಅಧಿಕ ಗುರಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಸೇನೆ ತಿಳಿಸಿದೆ.

ಟರ್ಕಿ ವಾಯು ಪ್ರದೇಶದೊಳಕ್ಕೆ ಇರಾನ್ ಹಾರಿಸಿದ ಕ್ಷಿಪಣಿಯನ್ನು ನ್ಯಾಟೊ ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ ಎಂದು ಟರ್ಕಿ ರಕ್ಷಣಾ ಸಚಿವಾಲಯ ಹೇಳಿದೆ

ಇಸ್ರೇಲ್ ಮತ್ತು ಅಮೆರಿಕ ಪಡೆಗಳು ರ್ಯಾಲಿ ಆರಂಭಕ್ಕೆ ಮುನ್ನ ಟೆಹರಾನ್ನಾದ್ಯಂತ ತೀವ್ರ ವೈಮಾನಿಕ ದಾಳಿ ನಡೆಸಿದ್ದವು. ಈ ದಾಳಿಯ ಹೊರತಾಗಿಯೂ ಸಾವಿರಾರು ಮಂದಿ ಬೀದಿಗಿಳಿದು, ‘ಇಸ್ರೇಲ್ಗೆ ಸಾವಾಗಲಿ’, ‘ಅಮೆರಿಕಕ್ಕೆ ಸಾವಾಗಲಿ’ ಎಂದು ಘೋಷಣೆ ಕೂಗಿದರು.

‘ಖುದ್ಸ್’ ರ್ಯಾಲಿ ನಡೆಯುತ್ತಿದ್ದ ಸಂದರ್ಭದಲ್ಲಿ ಯಾವ ತಾಣವನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂಬ ಬಗ್ಗೆ ಇಸ್ರೇಲ್ ಸೇನೆ ಯಾವುದೇ ಹೇಳಿಕೆ ನೀಡಿಲ್ಲ. ಪ್ರತಿ ವರ್ಷ ನಡೆಯುವ ರ್ಯಾಲಿಯಲ್ಲಿ ಇರಾನ್ನ ಪ್ರಮುಖ ನಾಯಕರು ಪಾಲ್ಗೊಳ್ಳುವರು.

ಇರಾನ್ನ ನ್ಯಾಯಾಂಗದ ಮುಖ್ಯಸ್ಥ ಗುಲಾಂಹೊಸೇನ್ ಮೊಹ್ಸೆನಿ ಅವರು ರ್ಯಾಲಿಯ ತಾಣದಲ್ಲಿ ಸರ್ಕಾರಿ ಸುದ್ದಿವಾಹಿನಿ ಜತೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದೆ. ತಕ್ಷಣವೇ ಅಲ್ಲಿದ್ದ ಅಂಗರಕ್ಷಕರು ಅವರನ್ನು ಸುತ್ತುವರಿದರು. ಈ ವೇಳೆ ತಮ್ಮ ಮುಷ್ಟಿಯನ್ನು ಎತ್ತಿ ತೋರಿಸಿದ ಅವರು, ‘ಕ್ಷಿಪಣಿಗಳ ಮಳೆ ಸುರಿದರೂ ನಾವು ಹಿಂದೆ ಸರಿಯುವುದಿಲ್ಲ’ ಎಂದು ಹೇಳಿದರು.

ರ್ಯಾಲಿಯಲ್ಲಿದ್ದ ಹಿರಿಯ ಭದ್ರತಾ ಅಧಿಕಾರಿ ಅಲಿ ಲಾರೀಜಾನಿ, ಇಸ್ರೇಲ್ ನಡೆಸಿದ ದಾಳಿ ‘ಅದರ ಹತಾಶೆಯ ಸಂಕೇತ’ ಎಂದರು.

‘ಖುದ್ಸ್ ದಿನ’ವು ರಂಜಾನ್ ತಿಂಗಳ ಕೊನೆಯ ಶುಕ್ರವಾರದಂದು ನಡೆಯುವ ಕಾರ್ಯಕ್ರಮವಾಗಿದೆ. ಪ್ಯಾಲೆಸ್ಟೀನಿಯರಿಗೆ ಬೆಂಬಲ ಸೂಚಿಸಿ, ಇಸ್ರೇಲ್ ವಿರುದ್ಧ ನಡೆಯುವ ರ್ಯಾಲಿಯಲ್ಲಿ ಸಾವಿರಾರು ಮಂದಿ ಪಾಲ್ಗೊಳ್ಳುವರು.

‘ಕ್ಷಿಪಣಿ ಲಾಂಚರ್ಗಳು, ರಕ್ಷಣಾ ವ್ಯವಸ್ಥೆಗಳು ಮತ್ತು ಶಸ್ತ್ರಾಸ್ತ್ರ ತಯಾರಿಕಾ ಕೇಂದ್ರಗಳು ಸೇರಿದಂತೆ ತನ್ನ ವಾಯುಪಡೆಯು ಕಳೆದ 24 ಗಂಟೆಗಳಲ್ಲಿ ಇರಾನ್ನಲ್ಲಿ 200ಕ್ಕೂ ಹೆಚ್ಚು ಗುರಿಗಳನ್ನು ನಾಶಪಡಿಸಿದೆ’ ಎಂದು ಇಸ್ರೇಲ್ ಹೇಳಿದೆ.

ಇಸ್ರೇಲ್ನಲ್ಲಿ 60 ಮಂದಿಗೆ ಗಾಯ: ಹಿಜ್ಬುಲ್ಲಾ ಬಂಡುಕೋರರು ನಡೆಸಿದ ರಾಕೆಟ್ ದಾಳಿಯಲ್ಲಿ ಉತ್ತರ ಇಸ್ರೇಲ್ನಲ್ಲಿ ಸುಮಾರು 60 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ದಕ್ಷಿಣ ಲೆಬನಾನ್ನಲ್ಲಿರುವ ಇಸ್ರೇಲ್ ಪಡೆಗಳು ಮತ್ತು ಉತ್ತರ ಇಸ್ರೇಲ್ನ ಪಟ್ಟಣಗಳನ್ನು ಗುರಿಯಾಗಿಸಿ ದಾಳಿ ನಡೆದಿದೆ.

ಇಸ್ರೇಲ್ ಸೇನೆಯ ದಾಳಿಯಲ್ಲಿ ಬೈರೂತ್ನ ನೈರುತ್ಯ ಭಾಗದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಇನ್ನೊಂದು ದಾಳಿಯಲ್ಲಿ ಅಪಾರ್ಟ್ಮೆಂಟ್ವೊಂದಕ್ಕೆ ಹಾನಿಯಾಗಿದೆ ಎಂದು ಲೆಬನಾನ್ನ ಆರೋಗ್ಯ ಸಚಿವಾಲಯ ತಿಳಿಸಿದೆ.

ಸಂಘರ್ಷ ಆರಂಭವಾದ ಬಳಿಕ ಲೆಬನಾನ್ನಲ್ಲಿ 600ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಇಲಾಖೆ ತಿಳಿಸಿದೆ. ಸುಮಾರು 8 ಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ಮಾಹಿತಿ ನೀಡಿದೆ.

ಅಮೆರಿಕ ವಿಮಾನ ಪತನ; ಆರು ಸಾವು

ವಾಷಿಂಗ್ಟನ್: ಅಮೆರಿಕ ಸೇನೆಯ ಇಂಧನ ತುಂಬಿಸುವ ‘ಕೆಸಿ–135’ ವಿಮಾನ ಇರಾಕ್ನ ಪಶ್ಚಿಮ ಭಾಗದಲ್ಲಿ ಗುರುವಾರ ಪತನಗೊಂಡಿದ್ದು ಎಲ್ಲ ಆರು ಸಿಬ್ಬಂದಿ ಮೃತಪಟ್ಟಿದ್ದಾರೆ. ‘ವಿಮಾನದಲ್ಲಿದ್ದ ಆರೂ ಸಿಬ್ಬಂದಿ ಮೃತಪಟ್ಟಿದ್ದಾರೆ. ದುರ್ಘಟನೆಗೆ ಕಾರಣ ಪತ್ತೆಹಚ್ಚಲು ತನಿಖೆ ಪ್ರಗತಿಯಲ್ಲಿದೆ.

ಶತ್ರುಗಳು ನಡೆಸಿದ ದಾಳಿಯಿಂದ ಅಥವಾ ಫ್ರೆಂಡ್ಲಿ ಫೈರ್ನಿಂದ ವಿಮಾನ ಪತನಗೊಂಡಿಲ್ಲ’ ಎಂದು ಅಮೆರಿಕ ಸೇನೆಯ ಸೆಂಟ್ರಲ್ ಕಮಾಂಡ್ ಶುಕ್ರವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ‘ಎರಡು ವಿಮಾನಗಳನ್ನು ಒಳಗೊಂಡ ಈ ಘಟನೆಯಲ್ಲಿ ಒಂದು ವಿಮಾನ ಪತನಗೊಂಡಿದೆ. ಇನ್ನೊಂದು ವಿಮಾನ ಸುರಕ್ಷಿತವಾಗಿ ಕೆಳಗೆ ಇಳಿದಿದೆ’ ಎಂದು ಹೇಳಿದೆ. ‘ವಿಮಾನವನ್ನು ನಾವೇ ಹೊಡೆದುರುಳಿಸಿದ್ದೇವೆ’ ಎಂದು ಇರಾಕ್ನಲ್ಲಿರುವ ಇರಾನ್ ಬೆಂಬಲಿತ ‘ದಿ ಇಸ್ಲಾಮಿಕ್ ರೆಸಿಸ್ಟೆನ್ಸ್’ ಸಂಘಟನೆ ತಿಳಿಸಿದೆ.

‘ಕೆಸಿ–135 ಸ್ಟ್ರಾಟೋಟ್ಯಾಂಕರ್’ ವಿಮಾನವನ್ನು ಅಮೆರಿಕ ಸೇನೆಯು ಇತರ ವಿಮಾನಗಳಿಗೆ ಆಗಸದಲ್ಲೇ ಇಂಧನ ತುಂಬಿಸಲು ಬಳಸುತ್ತದೆ. ಆ ಮೂಲಕ ಯುದ್ಧ ವಿಮಾನಗಳಿಗೆ ಹೆಚ್ಚು ದೂರ ಸಂಚರಿಸಲು ಮತ್ತು ಲ್ಯಾಂಡಿಂಗ್ ಇಲ್ಲದೆಯೇ ತುಂಬಾ ಸಮಯ ಕಾರ್ಯಾಚರಣೆ ನಡೆಸಲು ಅನುವು ಮಾಡಿಕೊಡುತ್ತದೆ. ಪತನಗೊಂಡ ನಾಲ್ಕನೇ ವಿಮಾನ: ಇರಾನ್ ವಿರುದ್ಧದ ಯುದ್ಧ ಆರಂಭವಾದ ಬಳಿಕ ಅಮೆರಿಕವು ಕಳೆದುಕೊಂಡ ನಾಲ್ಕನೇ ವಿಮಾನ ಇದಾಗಿದೆ. ಇದಕ್ಕೂ ಮುನ್ನ ಕುವೈತ್ ಸೇನೆಯು ಇರಾನ್ನ ವಿಮಾನವೆಂದು ತಪ್ಪಾಗಿ ಭಾವಿಸಿ ಅಮೆರಿಕದ ಮೂರು ಎಫ್–15ಇ ವಿಮಾನಗಳನ್ನು ಹೊಡೆದುರುಳಿಸಿತ್ತು.

‘ನಾಯಕರ ಹತ್ಯೆ; ಗೌರವದ ಸಂಗತಿ’

ವಾಷಿಂಗ್ಟನ್: ಇರಾನ್ನ ನಾಯಕತ್ವವನ್ನು ನಾಶ ಮಾಡಿರುವುದು ತಮಗೆ ಗೌರವ ತರುವ ವಿಷಯ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ‘ಅವರು (ಇರಾನ್ ನಾಯಕತ್ವ) ಕಳೆದ 47 ವರ್ಷಗಳಿಂದ ಪ್ರಪಂಚದಾದ್ಯಂತ ಅಮಾಯಕರನ್ನು ಕೊಲ್ಲುತ್ತಿದ್ದಾರೆ. ಈಗ ನಾನು ಅಮೆರಿಕದ 47ನೇ ಅಧ್ಯಕ್ಷನಾಗಿದ್ದುಕೊಂಡು ಆ ನಾಯಕರನ್ನು ಕೊಲ್ಲುತ್ತಿದ್ದೇನೆ. ಹಾಗೆ ಮಾಡುವುದು ಬಲು ದೊಡ್ಡ ಗೌರವದ ಸಂಗತಿ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಮೊಜ್ತಬಾ ಗಾಯಗೊಂಡಿದ್ದಾರೆ...

ತಮ್ಮನ್ನು ತಾವು ಪರಮೋಚ್ಚ ನಾಯಕ ಎಂದು ಕರೆಸಿಕೊಳ್ಳುವ ವ್ಯಕ್ತಿ ಗಾಯಗೊಂಡಿದ್ದು ಅಂಗವಿಕಲರಾಗಿರುವ ಸಾಧ್ಯತೆಯಿದೆ. ಅವರು ನಿನ್ನೆ ದುರ್ಬಲ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಧ್ವನಿ ಅಥವಾ ವಿಡಿಯೊ ಇರಲಿಲ್ಲ. ಅದು ಲಿಖಿತ ಹೇಳಿಕೆಯಾಗಿತ್ತು. ಇರಾನ್ನಲ್ಲಿ ಸಾಕಷ್ಟು ಕ್ಯಾಮೆರಾಗಳು ಮತ್ತು ವಾಯ್ಸ್ ರೆಕಾರ್ಡರ್ಗಳು ಲಭ್ಯವಿರುವಾಗ ಲಿಖಿತ ಹೇಳಿಕೆ ನೀಡಿದ್ದು ಏಕೆ? ಅದು ಏಕೆ ಎಂಬುದು ನಿಮಗೆ ತಿಳಿದಿದೆ ಎಂದು ಭಾವಿಸುತ್ತೇನೆ. ಅವರ ತಂದೆಯ ಹತ್ಯೆಯಾಗಿದೆ. ಅವರು ಹೆದರಿದ್ದು ಅಡಗಿಕೊಂಡಿದ್ದಾರೆ

–ಪೀಟ್ ಹೆಗ್ಸೆತ್ ಅಮೆರಿಕದ ರಕ್ಷಣಾ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.