ಮ್ಯಾನ್ಮಾರ್: ಟೈಫೂನ್ ಯಾಗಿ ಚಂಡಮಾರುತದ ಅಬ್ಬರದಿಂದ ಮ್ಯಾನ್ಮಾರ್ ದೇಶದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಒಂದೇ ವಾರದಲ್ಲಿ ಕನಿಷ್ಠ 226 ಜನ ಮೃತಪಟ್ಟಿದ್ದಾರೆ ಎಂದು ರಾಜ್ಯ ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.
ಈಗಾಗಲೇ 2021ರ ಫೆಬ್ರುವರಿಯಿಂದ ಆರಂಭವಾದ ಮ್ಯಾನ್ಮಾರ್ ದಂಗೆಯಿಂದಾಗಿ ಲಕ್ಷಾಂತರ ಜನರು ಮಾನವೀಯ ನೆರವಿಗಾಗಿ ಕಾಯುತ್ತಿದ್ದಾರೆ. ಈ ನಡುವೆ ಉಂಟಾದ ಪ್ರವಾಹ ಸ್ಥಿತಿ ಮತ್ತಷ್ಟು ಜನರನ್ನು ಸಂಕಷ್ಟಕ್ಕೀಡು ಮಾಡಿದೆ.
ರಾಜಧಾನಿ ಯಾಂಗೋನ್, ಶಾನ್ ರಾಜ್ಯದಲ್ಲಿ ಪ್ರವಾಹದಿಂದ ಹೆಚ್ಚು ಹಾನಿಯಾಗಿದೆ. ಮಂಡಾಲೆ ಪ್ರದೇಶವೊಂದರಲ್ಲೇ 40 ಸಾವಿರ ಎಕರೆಯಷ್ಟು ಕೃಷಿ ಭೂಮಿ ಜಲಾವೃತಗೊಂಡಿದ್ದು, 26 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.
9 ರಾಜ್ಯಗಳಲ್ಲಿ ಈಗಾಗಲೇ 388 ನಿರಾಶ್ರಿತರ ಶಿಬಿರಗಳನ್ನು ತೆರೆಯಲಾಗಿದ್ದು, ಹಲವು ಹಿತೈಷಿಗಳು ಕುಡಿಯುವ ನೀರು, ಆಹಾರ, ಬಟ್ಟೆಯ ನೆರವನ್ನು ಒದಗಿಸಿದ್ದಾರೆ ಎಂದು ಮ್ಯಾನ್ಮಾರ್ ಮಿಲಿಟರಿ ಸರ್ಕಾರದ ಮಾಧ್ಯಮ ‘ಗ್ಲೋಬಲ್ ನ್ಯೂ ಲೈಟ್ ಆಫ್ ಮ್ಯಾನ್ಮಾರ್’ ವರದಿ ಮಾಡಿದೆ.