ಹೂಸ್ಟನ್: ಹಿಂಸಾಚಾರಪೀಡಿತ ಬಾಂಗ್ಲಾದೇಶದಲ್ಲಿ ಸಂಕಷ್ಟದಲ್ಲಿರುವ ಹಿಂದೂಗಳನ್ನು ರಕ್ಷಿಸುವಂತೆ ಒತ್ತಾಯಿಸಿ ಅಮೆರಿಕ ಹೂಸ್ಟನ್‌ನಲ್ಲಿ ಭಾರತೀಯರು ಪ್ರತಿಭಟನೆ ನಡೆಸಿದರು.
ಹೂಸ್ಟನ್‌ನ ಶುಗರ್ ಲ್ಯಾಂಡ್ ಸಿಟಿ ಹಾಲ್‌ನಲ್ಲಿ ಸೇರಿದ್ದ 300ಕ್ಕೂ ಅಧಿಕ ಭಾರತೀಯರು ಮತ್ತು ಬಾಂಗ್ಲಾ ಸಂಜಾತ ಹಿಂದೂಗಳು ಶಾಂತಿಯುತ ಪ್ರತಿಭಟನೆ ನಡೆಸಿದರು.
ಬಾಂಗ್ಲಾದೇಶದಲ್ಲಿ ವಿವಾದಿತ ಮೀಸಲಾತಿ ಯೋಜನೆ ವಿರೋಧಿಸಿ ಪ್ರತಿಭಟನೆ ಮತ್ತು ಶೇಖ್ ಹಸೀನಾ ರಾಜೀನಾಮೆ ಬಳಿಕ ಹೊಸ ಸರ್ಕಾರ ರಚನೆಯಾದರೂ ಹಿಂಸಾಚಾರ ನಿಂತಿಲ್ಲ. ಇಸ್ಲಾಂ ಪ್ರತ್ಯೇಕತಾವಾದಿಗಳು ಬಾಂಗ್ಲಾದ ಅಲ್ಪಸಂಖ್ಯಾತ ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ದುರ್ಬಲ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗೆ ಮತ್ತು ಅವರ ರಕ್ಷಣೆಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಬೈಡನ್ ಆಡಳಿತಕ್ಕೆ ಅವರು ಒತ್ತಾಯಿಸಿದರು. ಇತ್ತೀಚೆಗೆ ಹಿಂದೂಗಳ ಮೇಲಿನ ಹಿಂಸಾಚಾರ ಆ ದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಸ್ಥಾಪನೆಗೆ ದೊಡ್ಡ ಆತಂಕವಾಗಿದೆ ಎಂದೂ ಅವರು ಹೇಳಿದ್ದಾರೆ.
ಬಾಂಗ್ಲಾದ ಎಲ್ಲ ಧಾರ್ಮಿಕ ಅಲ್ಪಸಂಖ್ಯಾತರ ರಕ್ಷಣೆಗೆ ಅಮೆರಿಕ ಮುಂದಾಗಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಮೌನ ಮುರಿದು ಮಾನವೀಯತೆಯ ಕಣ್ಣು ತೆರೆದು ನೋಡುವಂತೆ ಬೈಡನ್ ಅವರನ್ನು ಒತ್ತಾಯಿಸಿದ್ದಾರೆ.
ಜಾಗೃತರಾಗಿರುವಂತೆ ಬಾಂಗ್ಲಾದ ಹಿಂದೂಗಳಿಗೆ ಕರೆ ನೀಡಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ಅಲ್ಪಸಂಖ್ಯಾತ ಸಮುದಾಯಗಳೆಲ್ಲ ಒಗ್ಗಟ್ಟು ಪ್ರದರ್ಶಿಸಿ, ಯಾವುದೇ ತುರ್ತು ಸಂದರ್ಭದಲ್ಲೂ ಸಾಮೂಹಿಕ ನಿರ್ಧಾರ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ.
ಮೈತ್ರಿ, ಅಮೆರಿಕದ ವಿಶ್ವ ಹಿಂದೂ ಪರಿಷತ್, ಹಿಂದೂಪ್ಯಾಕ್ಟ್, ಹೂಸ್ಟನ್ ದುರ್ಗಬಾರಿ ಸೊಸೈಟಿ, ಇಸ್ಕಾನ್, ಜಾಗತಿಕ ಕಾಶ್ಮೀರಿ ಪಂಡಿತರ ಸಂಘ ಮುಂತಾದ ಹೂಸ್ಟನ್‌ನ ಪ್ರಮುಖ ಹಿಂದೂ ಸಂಘಟನೆಗಳು ಈ ಪ್ರತಿಭಟನೆಯನ್ನು ಸಂಘಟಿಸಿದ್ದವು.
ಹಿಂದೂಗಳ ಮೇಲಿನ ದೌರ್ಜನ್ಯಗಳನ್ನು ತೋರಿಸುವ ಪ್ಲೇಕಾರ್ಡ್‌ಗಳನ್ನು ಹಿಡಿದಿದ್ದರು. ‘ಹಿಂದೂಗಳ ಹತ್ಯೆ ನಿಲ್ಲಿಸಿ’, ‘ಎದ್ದು ನಿಲ್ಲಿ, ಮಾತನಾಡಿ’. ‘ಹಿಂದೂ ರಕ್ಷಣೆ ಮಾಡಬೇಕು’, ’ನಾವು ಎಲ್ಲಿಯೂ ಓಡಿಹೋಗುವುದಿಲ್ಲ, ಎಲ್ಲಿಯೂ ಅಡಗಿಕೊಳ್ಳುವುದಿಲ್ಲ, ಹಿಂದೂಗಳ ಹತ್ಯೆ ನಿಲ್ಲಿಸಿ’ ಎಂಬಿತ್ಯಾದಿ ಘೋಷಣೆಗಳನ್ನು ಮೊಳಗಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.