ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಹಸ್ಯ ದಾಖಲೆ ಕಳೆದುಕೊಂಡಿದ್ದನ್ನು ಒಪ್ಪಿಕೊಂಡ ಇಮ್ರಾನ್‌ ಖಾನ್‌

Published 27 ಆಗಸ್ಟ್ 2023, 16:08 IST
Last Updated 27 ಆಗಸ್ಟ್ 2023, 16:08 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ರಾಜತಾಂತ್ರಿಕ ರಹಸ್ಯ ಸಂದೇಶದ ದಾಖಲೆಗಳನ್ನು ಕಳೆದುಕೊಂಡಿರುವುದಾಗಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. 

ವರ್ಗೀಕೃತ ದಾಖಲೆಗಳ ಅಕ್ರಮ ಬಳಕೆಗೆ ಸಂಬಂಧಿಸಿದಂತೆ ಅಧಿಕೃತ ರಹಸ್ಯ ಕಾಯ್ದೆಯಡಿ ದಾಖಲಾಗಿರುವ ಪ್ರಕರಣದಲ್ಲಿ ಪಾಕಿಸ್ತಾನದ ‘ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ’ಯ (ಎಫ್‌ಐಎ) ಭಯೋತ್ಪಾದನಾ ನಿಗ್ರಹ ದಳ (ಸಿಟಿಡಬ್ಲ್ಯು) ಇಮ್ರಾನ್‌ ಖಾನ್‌ ಅವರನ್ನು ಜೈಲಿನಲ್ಲಿ ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ಖಾನ್‌ ಈ ವಿಷಯ ತಿಳಿಸಿದ್ದಾರೆ.

ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ 70 ವರ್ಷದ ಖಾನ್, ಸದ್ಯ ಅಟಾಕ್‌ ಜೈಲಿನಲ್ಲಿ ಬಂಧಿಯಾಗಿದ್ದಾರೆ.

ಪ್ರಧಾನಿ ಹುದ್ದೆಯಿಂದ ತಮ್ಮನ್ನು ಕೆಳಗಿಸಲು ಅಮೆರಿಕ ಬೆಂಬಲಿತ ಕೂಟವೊಂದು ತಮ್ಮ ವಿರುದ್ಧ ಪಿತೂರಿ ನಡೆಸುತ್ತಿದೆ ಎಂದು ಇಮ್ರಾನ್‌ ಖಾನ್‌ ವರ್ಷದ ಹಿಂದೆ ಆರೋಪಿಸಿದ್ದರು. ಅದಕ್ಕೆ ಸಂಬಂಧಿಸಿದ ಪುರಾವೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದರು. ಅಂದು ಅವರು ಪ್ರದರ್ಶಿಸಿದ್ದ ದಾಖಲೆಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ರಾಜತಾಂತ್ರಿಕ ರಹಸ್ಯ ಸಂದೇಶವನ್ನು ಬಹಿರಂಗಗೊಳಿಸಿದ್ದಕ್ಕಾಗಿ ಅವರ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.  

ದಕ್ಷಿಣ ಮತ್ತು ಮಧ್ಯ ಏಷ್ಯಾಕ್ಕೆ ಸಂಬಂಧಿಸಿದ ವ್ಯವಹಾರಗಳ ವಿಭಾಗದ ಅಮೆರಿಕ ಸಹಾಯಕ ವಿದೇಶಾಂಗ ಕಾರ್ಯದರ್ಶಿ ಡೊನಾಲ್ಡ್ ಲು ಮತ್ತು ಅಮೆರಿಕದ ಇತರ ಅಧಿಕಾರಿಗಳು ಹಾಗೂ ಅಂದಿನ ಪಾಕಿಸ್ತಾನಿ ರಾಯಭಾರಿ ಅಸದ್ ಮಜೀದ್ ಖಾನ್ ನಡುವಿನ ಸಭೆಗೆ ಸಂಬಂಧಿಸಿದ ಮಾಹಿತಿ ಈ ರಹಸ್ಯ ದಾಖಲೆಗಳಲ್ಲಿ ಇತ್ತು ಎನ್ನಲಾಗಿದೆ. 

ಎಫ್‌ಐಎ ಉಪ ನಿರ್ದೇಶಕ ಅಯಾಜ್ ಖಾನ್ ನೇತೃತ್ವದ ಆರು ಸದಸ್ಯರ ಜಂಟಿ ತನಿಖಾ ತಂಡವು ಅಟಾಕ್ ಜೈಲಿನ ಉಪ ಅಧೀಕ್ಷಕರ ಕಚೇರಿಯಲ್ಲಿ ಖಾನ್ ಅವರನ್ನು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿತು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ರಹಸ್ಯ ಸಂದೇಶವನ್ನು ಕಳೆದುಕೊಂಡಿರುವುದಾಗಿಯೂ, ಅದನ್ನು ಎಲ್ಲಿ ಇರಿಸಲಾಗಿದೆಯೋ ಗೊತ್ತಿಲ್ಲ ಎಂಬುದಾಗಿಯೂ ತನಿಖಾ ತಂಡಕ್ಕೆ ಖಾನ್‌ ಹೇಳಿದ್ದಾರೆ ಎನ್ನಲಾಗಿದೆ. 

ಆದರೆ, ವಿದೇಶಿ ಪಿತೂರಿಗೆ ಸಂಬಂಧಿಸಿದಂತೆ ತಾವು ವರ್ಷದ ಹಿಂದೆ ಪ್ರದರ್ಶಿಸಿದ್ದ ದಾಖಲೆ ಅದಾಗಿರಲಿಲ್ಲ ಎಂದೂ ಖಾನ್ ಹೇಳಿದ್ದಾರೆ. ಅಂದು ಸಾರ್ವಜನಿಕವಾಗಿ ಪ್ರದರ್ಶಿಸಿದ್ದ ದಾಖಲೆಗಳು ಕ್ಯಾಬಿನೆಟ್‌ ಸಭೆಗೆ ಸಂಬಂಧಿಸಿದ್ದಾಗಿತ್ತು’ ಎಂದು ಖಾನ್ ಹೇಳಿರುವುದನ್ನು ಪತ್ರಿಕೆ ಉಲ್ಲೇಖಿಸಿದೆ.

ಇದೇ ಪ್ರಕರಣದಲ್ಲಿ ಪಾಕಿಸ್ತಾನ್‌ ತೆಹ್ರೀಕ್‌ ಎ ಇನ್ಸಾಫ್‌ (ಪಿಟಿಐ) ಪಕ್ಷದ ಉಪಾಧ್ಯಕ್ಷ ಮತ್ತು ಮಾಜಿ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ವಿರುದ್ಧವೂ ತನಿಖಾ ತಂಡ ಪ್ರಕರಣ ದಾಖಲಿಸಿದೆ. ಅವರನ್ನು ಆ.19ರಂದು ಬಂಧಿಸಲಾಗಿದೆ. 

ಮಾಜಿ ಪ್ರಧಾನಿ ಖಾನ್‌ ಅವರ ಪ್ರಧಾನ ಕಾರ್ಯದರ್ಶಿಯಾಗಿದ್ದ ಅಜಂ ಖಾನ್, ಮಾಜಿ ಯೋಜನಾ ಸಚಿವ ಅಸದ್ ಉಮರ್ ಮತ್ತು ಇತರ ಸಹಚರರ ಪಾತ್ರವನ್ನು ತನಿಖೆಯ ನಂತರ ನಿರ್ಧರಿಸಲಾಗುವುದು ಎಂದು ಎಫ್ಐರ್‌ನಲ್ಲಿ ಹೇಳಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT