ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಹಜ ಸ್ಥಿತಿಯಲ್ಲಿ ಭಾರತ–ಚೀನಾ ಸಂಬಂಧ: ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್‌

Published 27 ಸೆಪ್ಟೆಂಬರ್ 2023, 16:36 IST
Last Updated 27 ಸೆಪ್ಟೆಂಬರ್ 2023, 16:36 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ : ‘2020ರ ಗಾಲ್ವಾನ್ ಘರ್ಷಣೆಯ ನಂತರ ಭಾರತ ಮತ್ತು ಚೀನಾ ನಡುವಿನ ಸಂಬಂಧ ಅಸಹಜ ಸ್ಥಿತಿಯಲ್ಲಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ.  

ನ್ಯೂಯಾರ್ಕ್‌ನಲ್ಲಿ ಬುಧವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ವಿಶ್ವದ ಎರಡು ಅತಿ ದೊಡ್ಡ ರಾಷ್ಟ್ರಗಳ ನಡುವೆ ಉದ್ಭವಿಸುವ ಉದ್ವಿಗ್ನತೆಯು ಜಗತ್ತಿನ ಎಲ್ಲ ರಾಷ್ಟ್ರಗಳ ಮೇಲೆಯೂ ಪರಿಣಾಮ ಬೀರುತ್ತದೆ’ ಎಂದು ಹೇಳಿದ್ದಾರೆ.

‘ಚೀನಾದೊಂದಿಗೆ ವ್ಯವಹರಿಸುವುದು ಸುಲಭವಲ್ಲ. ಅದು ತನ್ನ ನಡೆ ಬಗ್ಗೆ ಏನೂ ಹೇಳುವುದಿಲ್ಲ, ಏಕೆ ಹಾಗೆ ನಡೆದುಕೊಳ್ಳುತ್ತದೆ ಎಂಬ ಬಗ್ಗೆಯೂ ತಿಳಿಸುವುದಿಲ್ಲ. ಚೀನಾದ ನಡೆಯ ಬಗ್ಗೆ ನೀವು ಊಹಿಸಬೇಕಷ್ಟೆ. ಆದರೆ, ಕೊನೆಗೆ ದ್ವಂದ್ವವೇ ಕಂಡುಬರುತ್ತದೆ‘ ಎಂದು ಜೈಶಂಕರ್‌ ವಿಶ್ಲೇಷಿಸಿದ್ದಾರೆ.

‘ಒಪ್ಪಂದಗಳನ್ನು ಉಲ್ಲಂಘಿ‌ಸಿರುವ ದೇಶದೊಂದಿಗೆ ಸಹಜವಾದ ಬಾಂಧವ್ಯ ಹೊಂದುವುದು ಕಷ್ಟ. ಹೀಗಾಗಿಯೇ ಕಳೆದ ಮೂರು ವರ್ಷಗಳ ವಿದ್ಯಮಾನಗಳನ್ನು ಗಮನಿಸಿದರೆ, ಭಾರತ ಮತ್ತು ಚೀನಾ ಸಂಬಂಧ ಅಸಹಜ ಸ್ಥಿತಿಯಲ್ಲಿರುವುದು ಗೊತ್ತಾಗುತ್ತದೆ‘ ಎಂದು ಹೇಳಿದ್ದಾರೆ. 

'ಉಭಯ ದೇಶಗಳ ನಡುವಿನ ಸಂಪರ್ಕದಲ್ಲಿ ಒಡಕು ಉಂಟಾಗಿದೆ. ಎರಡೂ ದೇಶಗಳ ನಡುವೆ ಮಿಲಿಟರಿ ಮಟ್ಟದಲ್ಲಿ ಸಂಘರ್ಷವನ್ನು ಕಾಣಬಹುದು. ಈ ಎಲ್ಲ ಕಾರಣಗಳಿಂದಾಗಿ ಭಾರತದಲ್ಲಿ ಚೀನಾ ಕುರಿತಂತೆ ಗ್ರಹಿಕೆಯೇ ಬದಲಾಗಿದೆ‘ ಎಂದು ವಿವರಿಸಿದ್ದಾರೆ.

‘ಚೀನಾ ಮತ್ತು ಭಾರತ ನಡುವೆ ತತ್‌ಕ್ಷಣದ ಹಾಗೂ ಮಧ್ಯಮಾವಧಿಯ ಸಮಸ್ಯೆಗಳಿವೆ. ಬಹುಶಃ, ಈ ಸಮಸ್ಯೆ ಮಧ್ಯಮಾವಧಿಗಿಂತ ದೀರ್ಘಾವಧಿಯಾಗುವ ಸಾಧ್ಯತೆಯೇ ಹೆಚ್ಚು’ ಎಂದು ಹೇಳಿದ್ದಾರೆ.

ಭಾರತ ಮತ್ತು ಚೀನಾ ನಡುವಿನ ಸಂಬಂಧಗಳ ಕುರಿತ ಐತಿಹಾಸಿಕ ಘಟನಾವಳಿಗಳನ್ನು ಉಲ್ಲೇಖಿಸಿದ ಜೈಶಂಕರ್‌ ಅವರು, ಉಭಯ ದೇಶಗಳ ನಡುವಿನ ಬಾಂಧವ್ಯ ಸುಗಮವಾಗಿ‌ ಇರಲೇ ಇಲ್ಲ ಎಂದು ವಿವರಿಸಿದ್ದಾರೆ.

‘1962ರಲ್ಲಿ ಯುದ್ಧ ನಡೆಯಿತು. ನಂತರವೂ ಮಿಲಿಟರಿಗೆ ಸಂಬಂಧಿಸಿದಂತೆ ಘಟನಾವಳಿಗಳು ನಡೆದಿವೆ. 1975ರ ನಂತರ, ಗಡಿಯಲ್ಲಿ ಸಾವು– ನೋವುಗಳು ಸಂಭವಿಸಲಿಲ್ಲ. ಬಹುಶಃ ಅದೇ ಕೊನೆಯೂ ಇರಬಹುದು. ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ 1988ರಲ್ಲಿ ಚೀನಾಕ್ಕೆ ಭೇಟಿ ನೀಡಿದ್ದರು. ಆಗ, ಚೀನಾದೊಂದಿಗಿನ ಸಂಬಂಧವನ್ನು ಮತ್ತಷ್ಟು ಸಹಜ ಸ್ಥಿತಿಯತ್ತ ಭಾರತ ತಂದಿತ್ತು. ವಿವಾದಿತ ಗಡಿಯಲ್ಲಿ ಸ್ಥಿರತೆ ಸ್ಥಾಪಿಸುವ ಉದ್ದೇಶದಿಂದ ಚೀನಾದೊಂದಿಗೆ ಭಾರತವು 1993 ಮತ್ತು 1996ರಲ್ಲಿ ಒಪ್ಪಂದ ಮಾಡಿಕೊಂಡಿದ್ದು, ಇಂದಿಗೂ ಮಾತುಕತೆ ನಡೆಯುತ್ತಿವೆ’ ಎಂದು ಹೇಳಿದ್ದಾರೆ.

‘ಒಪ್ಪಂದದ ಪ್ರಕಾರ, ಭಾರತ ಅಥವಾ ಚೀನಾ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ಸೇನೆಯನ್ನು ನಿಯೋಜಿಸಬಾರದು. ಒಂದು ವೇಳೆ, ಗಡಿ ಪ್ರದೇಶದ ಬಳಿ ನಿಗದಿಪಡಿಸಿದ ಸಂಖ್ಯೆಗಿಂತಲೂ ಹೆಚ್ಚು ಯೋಧರನ್ನು ನಿಯೋಜಿಸಿದರೆ ಪರಸ್ಪರ ಮಾಹಿತಿ ನೀಡಬೇಕು ಎಂದು ಒಪ್ಪಂದದಲ್ಲಿ ಉಲ್ಲೇಖಿಸಲಾಗಿತ್ತು‘ ಎಂದು ವಿವರಿಸಿದ್ದಾರೆ.

‘ಭಾರತ-ರಷ್ಯಾ ಸಂಬಂಧ ಅತ್ಯಂತ ಸ್ಥಿರವಾಗಿದೆ. ನಮ್ಮ ನಡುವಿನ ಸಂಬಂಧ ಉತ್ತಮವಾಗಿರುವಂತೆ ನೋಡಿಕೊಳ್ಳಲು ಹೆಚ್ಚು ಎಚ್ಚರ ವಹಿಸುತ್ತೇವೆ ಎಂದು ಎಸ್ ಜೈಶಂಕರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT