ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ:ತಮಿಳರಿಗೆ ಅಧಿಕಾರ ನೀಡುವ 13ನೇ ತಿದ್ದುಪಡಿ ಅನುಷ್ಠಾನಕ್ಕೆ ಭಾರತ ಒತ್ತಾಯ

Last Updated 20 ಜನವರಿ 2023, 11:35 IST
ಅಕ್ಷರ ಗಾತ್ರ

ಕೊಲಂಬೊ: ‘ಶ್ರೀಲಂಕಾದಲ್ಲಿನ ತಮಿಳು ಭಾಷಿಕರಿಗೂ ಅಧಿಕಾರ ನೀಡುವ, ಸಂವಿಧಾನದ 13ನೇ ತಿದ್ದುಪಡಿಯನ್ನು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳಿಸಲಾಗುತ್ತದೆ ಎಂಬ ವಿಶ್ವಾಸವನ್ನು ಭಾರತ ಹೊಂದಿದೆ’ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಶುಕ್ರವಾರ ಹೇಳಿದರು.

‘ಈ ಕ್ರಮವು ದೇಶದಲ್ಲಿನ ಅಲ್ಪಸಂಖ್ಯಾತ ತಮಿಳು ಜನರೊಂದಿಗಿನ ಸಾಮರಸ್ಯವನ್ನು ಬಲಪಡಿಸುತ್ತದೆ’ ಎಂದೂ ಅವರು ಹೇಳಿದ್ದಾರೆ.

ಶ್ರೀಲಂಕಾ ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ ಹಾಗೂ ವಿದೇಶಾಂಗ ಸಚಿವ ಅಲಿ ಸಬ್ರಿ ಅವರೊಂದಿಗೆ ಮಾತುಕತೆ ಬಳಿಕ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಜೈಶಂಕರ್‌ ಅವರು ಎರಡು ದಿನಗಳ ಶ್ರೀಲಂಕಾ ಪ್ರವಾಸದಲ್ಲಿದ್ದಾರೆ.

‘ದ್ವೀಪರಾಷ್ಟ್ರದಲ್ಲಿ ರಾಜಕೀಯ ಹಾಗೂ ಆರ್ಥಿಕ ಸ್ಥಿರತೆ ನೆಲೆಗೊಳ್ಳಬೇಕು. ಈ ನಿಟ್ಟಿನಲ್ಲಿನ ಪ್ರಯತ್ನಗಳಿಗೆ ಭಾರತ ಸದಾ ಬೆಂಬಲ ನೀಡುತ್ತದೆ. ಈ ಉದ್ದೇಶ ಈಡೇರಿಕೆಗಾಗಿ ಶೀಘ್ರವೇ ಪ್ರಾಂತೀಯ ಚುನಾವಣೆಗಳು ನಡೆಯಬೇಕು ಎಂಬ ಭಾರತದ ನಿಲುವನ್ನು ಅಧ್ಯಕ್ಷ ವಿಕ್ರಮಸಿಂಘೆ ಅವರೊಂದಿಗೆ ಹಂಚಿಕೊಳ್ಳಲಾಯಿತು’ ಎಂದು ಅವರು ಹೇಳಿದ್ದಾರೆ.

ದೇಶದ ಉತ್ತರ ಹಾಗೂ ಪೂರ್ವ ಭಾಗದಲ್ಲಿ ತಮಿಳು ಭಾಷಿಕರು ಅಧಿಕ ಸಂಖ್ಯೆಯಲ್ಲಿದ್ದಾರೆ. ಆದರೆ, ಅವರಿಗೆ ರಾಜಕೀಯ ಪ್ರಾತಿನಿಧ್ಯ ನೀಡಿಲ್ಲ ಎಂಬ ದೂರುಗಳಿದ್ದವು. ಇದು ಸಂಘರ್ಷಕ್ಕೂ ಕಾರಣವಾಗಿತ್ತು. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ, ಉಭಯ ದೇಶಗಳು 1987ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದವು.

ಈ ಒಪ್ಪಂದದ ಆಶಯದಂತೆ, ಶ್ರೀಲಂಕಾ ಸಂವಿಧಾನಕ್ಕೆ 13ನೇ ತಿದ್ದುಪಡಿ ತರಲಾಯಿತು. ಈ ತಿದ್ದುಪಡಿಯ 13ಎ ವಿಧಿಯು, ಎಲ್ಲ ಸಮುದಾಯಗಳು ಒಗ್ಗಟ್ಟಿನಿಂದ ಬಾಳಬೇಕು ಎಂದು ಪ್ರತಿಪಾದಿಸುವ ಜೊತೆಗೆ, ತಮಿಳು ಸಮುದಾಯಕ್ಕೆ ಅಧಿಕಾರವನ್ನೂ ನೀಡುತ್ತದೆ.

‘ಹೂಡಿಕೆಗೆ ಪ್ರೋತ್ಸಾಹ’: ಶ್ರೀಲಂಕಾ ಆರ್ಥಿಕತೆಯ ಪುನಶ್ಚೇತನಕ್ಕಾಗಿ ದೇಶದಲ್ಲಿ ಅಧಿಕ ಪ್ರಮಾಣದ ಹೂಡಿಕೆಗೆ ಭಾರತ ಉತ್ತೇಜನ ನೀಡುತ್ತದೆ ಎಂದು ಜೈಶಂಕರ್‌ ಹೇಳಿದರು.

‘ದೇಶವು ಆರ್ಥಿಕ ಸಂಕಷ್ಟದಿಂದ ಹೊರಬರಲು ಹಣಕಾಸು ನೆರವು ನೀಡುವ ಸಂಸ್ಥೆಗಳು ತ್ವರಿತವಾಗಿ ನೆರವಿನ ಹಸ್ತ ಚಾಚಬೇಕು ಎಂಬುದು ಭಾರತ ಒತ್ತಾಯವಾಗಿದೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT