ಪಿಟಿಐ
ಸಿಂಗಪುರ: ಭಾರತ ಮೂಲದ ಥರ್ಮನ್ ಷಣ್ಮುಗರತ್ನಂ ಅವರು ಸಿಂಗಪುರ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಚೀನಾ ಮೂಲದ ಇತರ ಇಬ್ಬರು ಸ್ಪರ್ಧೆಯಲ್ಲಿದ್ದಾರೆ.
66 ವರ್ಷದ ಥರ್ಮನ್, ಸಿಂಗಪುರದ ಹೂಡಿಕೆ ಸಂಸ್ಥೆಯೊಂದರ ಮಾಜಿ ಮುಖ್ಯಸ್ಥರಾದ 77 ವರ್ಷದ ಎನ್ ಕೊಕ್ ಸೊಂಗ್ ಮತ್ತು ವಿಮಾ ಸಂಸ್ಥೆಯೊಂದರ ಮಾಜಿ ಮುಖ್ಯಸ್ಥ, 75 ವರ್ಷದ ತನ್ ಕಿನ್ ಲಿಯಾನ್ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿದ್ದಾರೆ.
ಸಿಂಗಪುರದ 9ನೇ ಅಧ್ಯಕ್ಷರ ಆಯ್ಕೆಗೆ ನಡೆಯುವ ಚುನಾವಣೆಯ ಪ್ರಚಾರ ಶುರುವಾಗಿದ್ದು, ಆಗಸ್ಟ್ 30ರಂದು ಅಂತ್ಯವಾಗಲಿದೆ. ಮತದಾನ ಸೆಪ್ಟೆಂಬರ್ 1ರಂದು ನಡೆಯಲಿದೆ. ಹಾಲಿ ಅಧ್ಯಕ್ಷ ಹಲಿಮಾ ಯಾಕೂಬ್ ಅವರ 6 ವರ್ಷದ ಅವಧಿ ಸೆ. 13ಕ್ಕೆ ಅಂತ್ಯವಾಗಲಿದೆ.
ಸ್ಪರ್ಧೆಯ ಘೋಷಣೆ ಬಳಿಕ ಮಾತನಾಡಿದ, ಆಡಳಿತಾರೂಢ ಪೀಪಲ್ಸ್ ಆ್ಯಕ್ಷನ್ ಪಾರ್ಟಿಯ ಮಾಜಿ ಸಚಿವರೂ ಆದ ಥರ್ಮನ್ ಅವರು, ‘ಗೌರವ ಮತ್ತು ಘನತೆಯ ಹೋರಾಟವನ್ನು ನಾನು ಎದುರು ನೋಡುತ್ತಿದ್ದೇನೆ’ ಎಂದರು.
‘ಗೌರವ ಮತ್ತು ಘನತೆಯ ಪ್ರಚಾರಕ್ಕೆ ಒತ್ತು ನೀಡೋಣ. ಪ್ರಚಾರವು ಸಿಂಗಪುರದ ನಿವಾಸಿಗಳನ್ನು ಒಗ್ಗೂಡಿಸಬೇಕೇ ಹೊರತು ಬೇರ್ಪಡಿಸುವಂತೆ ಇರಬಾರದು. ನ್ಯಾಯಯುತ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಾಣಕ್ಕೆ ನನ್ನ ಬದುಕು ಮುಡುಪಾಗಿದೆ’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.