ಲಂಡನ್: ‘ಜಿ20 ಗುಂಪಿನ ಅಧ್ಯಕ್ಷತೆ ವಹಿಸಿರುವ ಭಾರತವು ಜಾಗತಿಕ ಮಟ್ಟದಲ್ಲಿ ದಕ್ಷಿಣ ರಾಷ್ಟ್ರಗಳಿಗೆ ಧ್ವನಿ ನೀಡಲು ಸಹಾಯಕವಾಗಿದೆ’ ಎಂದು ಬ್ರಿಟನ್‌ನಲ್ಲಿರುವ ಭಾರತೀಯ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಹೇಳಿದ್ದಾರೆ.
ಲಂಡನ್‌ನಲ್ಲಿ ಮಂಗಳವಾರ ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ನೀಡಿದ ಸಂದರ್ಶನವೊಂದರಲ್ಲಿ ಅವರು, ಭಾರತದ ಪ್ರತಿ ಭಾಗದಲ್ಲೂ ಜಿ20 ಸಭೆಗಳನ್ನು ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮವನ್ನು ಪ್ರಶಂಸಿಸಿದ್ದಾರೆ.
‘ಜಾಗತಿಕ ಮಟ್ಟದಲ್ಲಿ ಎಲ್ಲಾ ದೇಶಗಳನ್ನು ಒಳಗೊಳ್ಳಲು ಹಾಗೂ ಉತ್ತಮ ಅವಕಾಶಗಳನ್ನು ಸೃಷ್ಟಿಸಲು ಜಿ20 ಪ್ರಧಾನ ವೇದಿಕೆಯಾಗಿದೆ. ಅದು ಡಿಜಿಟಲ್ ಅಭಿವೃದ್ಧಿಯ ಕಾರ್ಯಸೂಚಿಯಾಗಿರಲೀ ಅಥವಾ ಬಡತನ ನಿವಾರಣೆಯ ವಿಷಯವೇ ಇರಲಿ... ಎಲ್ಲ ವಿಚಾರದಲ್ಲೂ ಭಾರತವು ಕಾರ್ಯತತ್ಪರವಾಗಿದೆ. ‘ವಸುದೈವ ಕುಟುಂಬಕಂ’ ಅಂದರೆ ಇಡೀ ವಿಶ್ವವೇ ಒಂದು ಕುಟುಂಬ ಎಂಬ ಪರಿಭಾಷೆಯಲ್ಲಿ ಜಿ20 ಕಾರ್ಯಸೂಚಿಯನ್ನು ಒಳಗೊಂಡು ಮುನ್ನಡೆಸುವ ಗುರಿಯನ್ನು ಪ್ರಧಾನಿ ಮೋದಿ ಅವರು ಹೊಂದಿದ್ದಾರೆ’ ಎಂದೂ ಅವರು ಹೇಳಿದ್ದಾರೆ.
ಸೆ. 9 ಮತ್ತು 10ರಂದು ನವದೆಹಲಿಯಲ್ಲಿ ಜಿ20 ವಿಶ್ವನಾಯಕರ ಶೃಂಗಸಭೆಯು ನಡೆಯಲಿದೆ. ಭಾರತದಲ್ಲಿ ನಡೆಯಲಿರುವ ವಿಶ್ವ ನಾಯಕರ ಅತಿದೊಡ್ಡ ಸಭೆ ಇದಾಗಿದೆ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.