ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಂಗ್ಲಾದಲ್ಲಿ ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸಲು ಬದ್ಧ: ಯೂನಸ್

Published 17 ಆಗಸ್ಟ್ 2024, 10:52 IST
Last Updated 17 ಆಗಸ್ಟ್ 2024, 10:52 IST
ಅಕ್ಷರ ಗಾತ್ರ

ಢಾಕಾ: 'ಬಾಂಗ್ಲಾದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಬೇಕಾದ ವಾತಾವರಣ ಸೃಷ್ಟಿಸಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದು ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್‌ ಯೂನಸ್‌ ಹೇಳಿದ್ದಾರೆ. 

ಭಾರತವು ವರ್ಚುವಲ್‌ ರೂಪದಲ್ಲಿ ಆಯೋಜಿಸಿದ್ದ ‘ವಾಯ್ಸ್‌ ಆಫ್‌ ಗ್ಲೋಬಲ್‌ ಸೌತ್‌’ ಶೃಂಗಸಭೆಯಲ್ಲಿ ಮಾತನಾಡಿದ ಅವರು, ‘ಸಮಗ್ರ ಮತ್ತು ಬಹುತ್ವದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಖಾತರಿಪಡಿಸಿಕೊಳ್ಳಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು’ ಎಂದು ಅಂತರರಾಷ್ಟ್ರೀಯ ಸಮುದಾಯಕ್ಕೆ ಭರವಸೆ ನೀಡಿದರು. 

‘ಜನಸಾಮಾನ್ಯರನ್ನೂ ಒಳಗೊಂಡಂತೆ ನಮ್ಮ ಧೈರ್ಯಶಾಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಸಾಮೂಹಿಕ ಹೋರಾಟದ ಮೂಲಕ ಆಗಸ್ಟ್ 5ರಂದು ಬಾಂಗ್ಲಾದೇಶವು ‘ಎರಡನೇ ಕ್ರಾಂತಿ’ಗೆ ಸಾಕ್ಷಿಯಾಗಿದೆ. ನಮ್ಮ ಚುನಾವಣಾ ವ್ಯವಸ್ಥೆ, ನ್ಯಾಯಾಂಗ, ಸ್ಥಳೀಯ ಸರ್ಕಾರ, ಮಾಧ್ಯಮ, ಆರ್ಥಿಕತೆ ಮತ್ತು ಶಿಕ್ಷಣದಲ್ಲಿ ಪ್ರಮುಖ ಸುಧಾರಣೆಗಳನ್ನು ಕೈಗೊಳ್ಳುವುದು ನಮ್ಮ ಕೆಲಸವಾಗಿದೆ’ ಎಂದರು. 

‘ಎಲ್ಲಾ ಜನರಿಗೆ, ವಿಶೇಷವಾಗಿ ಮಹಿಳೆಯರು ಮತ್ತು ಯುವಕರಿಗೆ ಹಣಕಾಸಿನ ಸೇವೆಗಳನ್ನು ಒದಗಿಸಬೇಕು. ಸಂಪತ್ತು ಎಲ್ಲರಿಗೂ ಹಂಚಿಕೆಯಾಗುವಂತೆ ಮಾಡಲು ಹಣಕಾಸು ವ್ಯವಸ್ಥೆಯನ್ನು ಮರುವಿನ್ಯಾಸಗೊಳಿಸಬೇಕು’ ಎಂದು ತಿಳಿಸಿದರು.

ಢಾಕಾಕ್ಕೆ ಬನ್ನಿ: ‘ಶೀಘ್ರದಲ್ಲೇ ಢಾಕಾಕ್ಕೆ ಭೇಟಿ ನೀಡುವಂತೆ ನಾನು ನಿಮ್ಮನ್ನು ಆಹ್ವಾನಿಸುತ್ತಿದ್ದೇನೆ. ಇಲ್ಲದಿದ್ದರೆ ಮುಖ್ಯವಾದ ಅಂಶವೊಂದನ್ನು ನೀವು ಮಿಸ್‌ ಮಾಡಿಕೊಳ್ಳುವಿರಿ’ ಎಂದು ಯೂನಸ್‌, ಸಭೆಯಲ್ಲಿ ಭಾಗವಹಿಸಿದ್ದ ನಾಯಕರಿಗೆ ಕರೆ ನೀಡಿದರು. 

‘ಢಾಕಾದ ಬಹುಭಾಗವು ಪ್ರಪಂಚದ ಗೀಚುಬರಹದ ರಾಜಧಾನಿಯಾಗಿ ಮಾರ್ಪಟ್ಟಿದೆ. 12–13 ವರ್ಷದ ಮಕ್ಕಳು, ವಿದ್ಯಾರ್ಥಿಗಳು ಢಾಕಾ ನಗರದ ಗೋಡೆಗಳ ಮೇಲೆ ‘ಬಾಂಗ್ಲಾದಲ್ಲಿ ನಡೆದ ಕ್ರಾಂತಿಯ ಬಗ್ಗೆ ಬರೆದು, ಚಿತ್ರಗಳನ್ನು ಬಿಡಿಸುತ್ತಿದ್ದಾರೆ. ಅವರಿಗೆ ಯಾರೂ ಮಾರ್ಗದರ್ಶನ ನೀಡಿಲ್ಲ. ಇದು ಅವರ ಭಾವನೆಗಳ ಹೊರಹರಿವು’ ಎಂದರು.

‘7 ದಶಕದ ನಂತರ ಎರಡನೇ ಕ್ರಾಂತಿ’

1952ರಲ್ಲಿ ‘ಬಂಗಾಳಿ ಭಾಷಾ ಚಳುವಳಿ’ಯಲ್ಲಿ ಮಾತೃಭಾಷೆಗಾಗಿ ಬಾಂಗ್ಲಾದ ವಿದ್ಯಾರ್ಥಿಗಳು ತಮ್ಮ ಪ್ರಾಣತ್ಯಾಗ ಮಾಡಿದರು. ಸುಮಾರು 7 ದಶಕಗಳ ನಂತರ ನಮ್ಮ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಎರಡನೇ ಕ್ರಾಂತಿಯು ಪ್ರಜಾಪ್ರಭುತ್ವ ಮಾನವ ಹಕ್ಕುಗಳು ಸಮಾನತೆ ಘನತೆ ಮತ್ತು ಸಂಪತ್ತಿನ ಹಂಚಿಕೆಗಾಗಿ ಧ್ವನಿ ಎತ್ತಿದೆ ಎಂದು ಯೂನಸ್ ಬಣ್ಣಿಸಿದರು.  ಈ ಕ್ರಾಂತಿಯಲ್ಲಿ ಭಾಗವಹಿಸಲು ಮತ್ತು ಹೋರಾಟಗಾರರ ಕನಸುಗಳನ್ನು ನನಸಾಗಿಸಲು ಸಹಾಯ ಮಾಡಿದ ಅತ್ಯಂತ ಹಿರಿಯ ಯುವಕ ಎಂಬ ಹೆಮ್ಮೆ ನನಗಿದೆ. ಆ ಯುವಕರಿಗೆ ನಿಮ್ಮೆಲ್ಲರ ಬೆಂಬಲ ಬೇಕಿದೆ ಎಂದು ಕೋರಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT