ಟಲ್ಕರೆಮ್ (ವೆಸ್ಟ್‌ಬ್ಯಾಂಕ್): ವೆಸ್ಟ್‌ಬ್ಯಾಂಕ್‌ನಲ್ಲಿ ಗುರುವಾರ ನಡೆಸಿದ ಭೀಕರ ದಾಳಿಯಲ್ಲಿ ಉಗ್ರ ಸಂಘಟನೆ ಇಸ್ಲಾಮಿಕ್ ಜಿಹಾದ್‌ನ ಸ್ಥಳೀಯ ಕಮಾಂಡರ್ ಸೇರಿದಂತೆ ಐವರು ಬಂಡುಕೋರರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.
ಇಸ್ಲಾಮಿಕ್ ಜಿಹಾದ್ ಸಂಘಟನೆಯ ಕಮಾಂಡರ್ ಮೊಹಮ್ಮದ್ ಜಬೇರ್ ಅಲಿಯಾಸ್ ಅಬು ಶುಜಾ ಎಂಬಾತನನ್ನು ಹತ್ಯೆ ಮಾಡಲಾಗಿದೆ. ಗುಂಡಿನ ಚಕಮಕಿ ವೇಳೆ, ಇಸ್ರೇಲ್ ಗಡಿ ಪೊಲೀಸ್‌ನ ಯೋಧರೊಬ್ಬರು ಗಾಯಗೊಂಡಿದ್ದಾರೆ.
ಸ್ಥಳೀಯ ಮಸೀದಿಯಲ್ಲಿ ಅಬು ಶುಜಾ ಸೇರಿದಂತೆ ಐವರು ಉಗ್ರರು ಅಡಗಿದ್ದಾಗ ದಾಳಿ ನಡೆಸಿ, ಎಲ್ಲರನ್ನು ಹತ್ಯೆ ಮಾಡಲಾಯಿತು. ಅಬು ಶುಜಾ, ಇಸ್ರೇಲ್ ಮೇಲೆ ಹಲವು ಬಾರಿ ದಾಳಿ ಮಾಡಿದ್ದ. ಜೂನ್‌ನಲ್ಲಿ ಭೀಕರ ಗುಂಡಿನ ದಾಳಿ ನಡೆಸಿದ್ದ ಆತ, ಮತ್ತಷ್ಟು ದಾಳಿಗೆ ಯೋಜಿಸಿದ್ದ ಎಂದು ಸೇನೆ ತಿಳಿಸಿದೆ.
ಕಳೆದ ಮಂಗಳವಾರದಿಂದ ವೆಸ್ಟ್ ಬ್ಯಾಂಕ್‌ನ ಉತ್ತರ ಭಾಗದಲ್ಲಿ ದಾಳಿ ಆರಂಭಿಸಿರುವ ಇಸ್ರೇಲ್, ಈವರೆಗೆ 16 ಉಗ್ರರನ್ನು ಹೊಡೆದುರುಳಿಸಿದೆ. ಉಗ್ರ ಸಂಘಟನೆ ತನ್ನ ಮೇಲೆ ದಾಳಿ ನಡೆಸುವುದನ್ನು ತಡೆಯುವುದಕ್ಕಾಗಿ ಇಸ್ರೇಲ್ ಈ ಕ್ರಮ ಕೈಗೊಂಡಿದೆ ಎನ್ನಲಾಗುತ್ತಿದೆ.
ಕಳೆದ ವರ್ಷ ಇಸ್ರೇಲ್ ಸೇನೆ ನಡೆಸಿದ್ದ ಕಾರ್ಯಾಚರಣೆ ವೇಳೆ ಅಬು ಶುಜಾ ಮೃತಪಟ್ಟಿದ್ದ ಎಂದೇ ಹೇಳಲಾಗಿತ್ತು. ಆದರೆ, ಇಸ್ರೇಲ್ ದಾಳಿಯಲ್ಲಿ ಮೃತಪಟ್ಟ ಕೆಲ ಉಗ್ರರ ಅಂತ್ಯಕ್ರಿಯೆ ವೇಳೆ ದಿಢೀರ್ ಪ್ರತ್ಯಕ್ಷನಾಗುವ ಮೂಲಕ ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದ ಅಬು ಶುಜಾ, ಅಂದಿನಿಂದ ಪ್ಯಾಲೆಸ್ಟೀನಿಯರ ಪಾಲಿಗೆ ಹೀರೊ ಎನಿಸಿದ್ದ ಎಂದು ಮೂಲಗಳು ಹೇಳಿವೆ.