ವಾಷಿಂಗ್ಟನ್: ‘ಹಮಾಸ್‌ನೊಂದಿಗಿನ ಸಂಘರ್ಷ ಮುಗಿದ ನಂತರ ಗಾಜಾವನ್ನು ಇಸ್ರೇಲ್ ಮತ್ತೆ ಸ್ವಾಧೀನಕ್ಕೆ ಪಡೆಯಬಾರದು’ ಎಂದು ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಇಸ್ರೇಲ್‌ಗೆ ಅಂತಹ ಯಾವುದೇ ಉದ್ದೇಶವಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಪಾನ್‌ನಲ್ಲಿ ನಡೆದ ವಿದೇಶಾಂಗ ಸಚಿವರ ಸಭೆ ಬಳಿಕ ಮಾತನಾಡಿದ ಬ್ಲಿಂಕೆನ್, ‘ಯಾವುದೇ ಕಾರಣಕ್ಕೂ ಗಾಜಾದಿಂದ ಪ್ಯಾಲೆಸ್ಟೀನಿಯರನ್ನು ಬಲವಂತವಾಗಿ ಹೊರಹಾಕಬಾರದು. ಸಂಘರ್ಷ ಮುಗಿದ ಬಳಿಕ ಗಾಜಾವನ್ನು ಮತ್ತೆ ಸ್ವಾಧೀನಪಡಿಸಿಕೊಳ್ಳಲು ಇಸ್ರೇಲ್ ಮುಂದಾಗಬಾರದು’ ಎಂದು ಹೇಳಿದ್ದರು.
ಬ್ಲಿಂಕೆನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಇಸ್ರೇಲ್ ಸೇನೆಯ ಹಿರಿಯ ಅಧಿಕಾರಿಯೊಬ್ಬರು, ‘ಹಮಾಸ್ ಬಂಡುಕೋರರ ವಿರುದ್ಧ ಹೋರಾಟವನ್ನು ಮುಂದುವರಿಸಿದ್ದೇವೆ. ಗಾಜಾದ ಕರಾವಳಿ ಭಾಗದಲ್ಲಿ ದಾಳಿ ನಡೆಸಲಾಗುತ್ತಿದೆ. ಗಾಜಾವನ್ನು ಮತ್ತೆ ಸ್ವಾಧೀನ ಪಡಿಸಿಕೊಳ್ಳುವ ಅಥವಾ ದೀರ್ಘಕಾಲದವರೆಗೆ ನಿಯಂತ್ರಣದಲ್ಲಿಡುವ ಯಾವುದೇ ಉದ್ದೇಶವೂ ಇಸ್ರೇಲ್‌ಗೆ ಇಲ್ಲ’ ಎಂದರು.
‘ಇಲ್ಲಿಯವರೆಗೆ ಹಮಾಸ್ ಬಂಡುಕೋರರ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ ನಾವು ಯಶಸ್ವಿಯಾಗಿದ್ದೇವೆ. ಈ ಪರಿಸ್ಥಿತಿ ಶಾಶ್ವತವಲ್ಲ’ ಎಂದು ಹೇಳಿದರು.