ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಮಲಾ ಉಮೇದುವಾರಿಕೆಯಿಂದ ಪ್ರಚಂಡ ಶಕ್ತಿ: ಡೆಮಾಕ್ರಟಿಕ್‌ ಮುಖಂಡ

Published : 19 ಆಗಸ್ಟ್ 2024, 14:23 IST
Last Updated : 19 ಆಗಸ್ಟ್ 2024, 14:23 IST
ಫಾಲೋ ಮಾಡಿ
Comments

ಶಿಕಾಗೊ‌: ‘ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಭಾರತ ಮೂಲದ ಕಮಲಾ ಹ್ಯಾರಿಸ್‌ ಅವರು ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಪ್ರಚಂಡ ಬಲ ತಂದುಕೊಟ್ಟಿದ್ದಾರೆ. ಟ್ರಂಪ್ ಅವರನ್ನು ಮಣಿಸಲು ಶಿಕಾಗೊ‌ದಲ್ಲಿ ನಡೆಯುವ ಪಕ್ಷದ ಸಮಾವೇಶವನ್ನು ಸಮರ್ಥವಾಗಿ ಬಳಸಿಕೊಳ್ಳಲಾಗುವುದು’ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ನಾಲ್ಕು ವರ್ಷ‌ಗ‌ಳಿಗೊಮ್ಮೆ ನಡೆಯುವ ಪಕ್ಷದ ರಾಷ್ಟ್ರೀಯ ಸಮಾವೇಶವು ಸೋಮವಾರ ಆರಂಭಗೊಂಡಿದ್ದು, ಇಲಿನಾಯ್ಸ್‌ನ ಲೇಕ್‌ ಮಿಶಿಗನ್‌ನಲ್ಲಿ ಆಯೋಜಿತವಾಗಿದೆ. ಡೆಮಾಕ್ರಟಿಕ್‌ ಪ‍ಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿರವ ಕಮಲಾ ಹ್ಯಾರಿಸ್‌, ಉಪಾಧ್ಯಕ್ಷ ಅಭ್ಯರ್ಥಿ ಟಿಮ್ ವಾಲ್ಜ್‌ ಅವರ ಸಂಭ್ರಮಾಚರಣೆಯೂ ಮಂಗಳವಾರ ನಡೆಯಲಿದೆ.

ನವೆಂಬರ್‌ 5ರಂದು ನಡೆಯುವ ಅಮೆರಿಕ ಅಧ್ಯಕ್ಷ ಸ್ಥಾನದ ಚುನಾವಣೆಗೆ 59 ವರ್ಷದ ಕಮಲಾ ಹ್ಯಾರಿಸ್‌ ಅವರು ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ನಾಮನಿರ್ದೇಶನವನ್ನು ಅಂಗೀಕರಿಸಲಿದ್ದು, ಬಳಿಕ ಗುರುವಾರ ಔಪಚಾರಿಕ ಭಾಷಣ ಮಾಡಲಿದ್ದಾರೆ.

‘ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರು ಪಕ್ಷದ ಅಭ್ಯರ್ಥಿಯಾಗಿ ಮುಂದಿನ ಅಧ್ಯಕ್ಷ ಚುನಾವಣೆಗೆ ದೊಡ್ಡ ಪ್ರಮಾಣದಲ್ಲಿ ಶಕ್ತಿ, ಉತ್ಸಾಹ ತುಂಬಿದ್ದಾರೆ. ವಿವಿಧ ಹಿನ್ನೆಲೆಯ ಯುವ ಸಮುದಾಯವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಡೆಮಾಕ್ರಟಿಕ್‌ ರಾಷ್ಟ್ರೀಯ ಸಮಿತಿಯ ಮುಖ್ಯಸ್ಥ ಜೆಮಿ ಹ್ಯಾರಿಸನ್‌ ಅವರು ತಿಳಿಸಿದ್ದಾರೆ.

‘ಹ್ಯಾರಿಸ್‌ ಅವರು ಪ್ರಚ‌ಂಡ ಶಕ್ತಿಯಾಗಿದ್ದಾರೆ. ನಾನು ನೋಡಿದ ಅದ್ಭುತ ಚುನಾವಣಾ ಅಭಿಯಾನ ಇದಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಅವರು ಭರವಸೆ ಮೂಡಿಸಿದ್ದು, ಸಂತಸವನ್ನು ಹೆಚ್ಚಿಸಿದ್ದಾರೆ. ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸಿ, ವಿಭಜಿಸಿ ಮಾತನಾಡುತ್ತಿರುವ ಡೊನಾಲ್ಡ್‌ ಟ್ರಂಪ್‌ ಮುಂದೆ ಇಂತಹ ಪ್ರಚಾರ ಅಭಿಯಾನವು ಈಗ ಅತ್ಯಗತ್ಯವಾಗಿದೆ’ ಎಂದು ಪ್ರತಿಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT