ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌: ರಾಜನಾಗಿ 3ನೇ ಚಾರ್ಲ್ಸ್‌ ಪಟ್ಟಾಧಿಕಾರ

Published 6 ಮೇ 2023, 16:15 IST
Last Updated 6 ಮೇ 2023, 16:15 IST
ಅಕ್ಷರ ಗಾತ್ರ

ಲಂಡನ್: ವೆಸ್ಟ್‌ಮಿನ್‌‌ಸ್ಟರ್ ಅಬೆಯಲ್ಲಿ ಶನಿವಾರ ಸಂಪ್ರದಾಯಬದ್ಧವಾಗಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಬ್ರಿಟನ್‌ನ 40ನೇ ರಾಜನಾಗಿ 3ನೇ ಚಾರ್ಲ್ಸ್‌ ಪಟ್ಟಾಧಿಕಾರಕ್ಕೇರಿದರು.

74 ವರ್ಷದ ನೂತನ ರಾಜನ ಕಿರೀಟ ಧಾರಣೆಯ ಸಂಭ್ರಮವನ್ನು ಬ್ರಿಟನ್‌ ಸೇರಿದಂತೆ ವಿದೇಶಗಳಿಂದ ಆಗಮಿಸಿದ್ದ 2,200ಕ್ಕೂ ಹೆಚ್ಚು ಗಣ್ಯರು ಕಣ್ತುಂಬಿಕೊಂಡರು.

ಬ್ರಿಟನ್‌ ರಾಜ ಅಥವಾ ರಾಣಿಯ ಹಿರಿಯ ಪುತ್ರ ಅಥವಾ ಪುತ್ರಿ ಉತ್ತರಾಧಿಕಾರಿಯಾಗಿ ಆಯ್ಕೆಯಾಗುತ್ತಾರೆ. ಇದು ಪರಂಪರಾಗತವಾಗಿ ನಡೆದುಕೊಂಡು ಬಂದಿರುವ ಪದ್ಧತಿ. ಹಾಗಾಗಿ, ರಾಣಿ 2ನೇ ಎಲಿಜಬೆತ್ ಅವರ ಹಿರಿಯ ಪುತ್ರ ಚಾರ್ಲ್ಸ್ ಈಗ ರಾಜನಾಗಿ ಪಟ್ಟಾಧಿಕಾರಕ್ಕೇರಿದ್ದಾರೆ.

2ನೇ ಎಲಿಜಬೆತ್‌ 1953ರಲ್ಲಿ ಬ್ರಿಟನ್‌ ರಾಣಿಯಾಗಿ ಕಿರೀಟ ಧರಿಸಿದ್ದರು. 70 ವರ್ಷಗಳ ಬಳಿಕ ವೆಸ್ಟ್‌ಮಿನ್‌ಸ್ಟರ್‌ ಅಬೆಯಲ್ಲಿ ಚಾರ್ಲ್ಸ್‌ ಪಟ್ಟಾಧಿಕಾರ ಸಮಾರಂಭ ನಡೆಯಿತು.  

ಇದಕ್ಕೂ ಮೊದಲು ಚಾರ್ಲ್ಸ್‌ ಮತ್ತು ಅವರ ಪತ್ನಿ ಕ್ಯಾಮಿಲ್ಲಾ ಅವರು ಬಕಿಂಗ್‌ಹ್ಯಾಮ್‌ ಅರಮನೆಯಿಂದ 2.2 ಕಿ.ಮೀ ದೂರದ ಅಬೆಗೆ ಸಾರೋಟಿನಲ್ಲಿ ಆಗಮಿಸಿದರು. ಪಶ್ಚಿಮ ದ್ವಾರದ ಮೂಲಕ ಚಾರ್ಲ್ಸ್‌, ಅಬೆಯನ್ನು ಪ್ರವೇಶಿಸಿದರು. ಅವರ ಹಿಂದೆಯೇ ಕ್ಯಾಮಿಲ್ಲಾ ಹೆಜ್ಜೆ ಹಾಕಿದರು. 

ಕ್ಯಾಂಟರ್‌ಬರಿ ಚರ್ಚ್‌ನ ಆರ್ಚ್‌ ಬಿಷಪ್‌ ಜಸ್ಟಿನ್‌ ವೆಲ್ಬಿ ಸಾಂಪ್ರದಾಯಿಕ ವಿಧಿವಿಧಾನದ ಅನ್ವಯ ಚಾರ್ಲ್ಸ್‌ಗೆ ಪವಿತ್ರ ತೈಲದ ಪೋಕ್ಷಣೆ ಮಾಡಿ ರಾಜವಂಶದ ದ್ಯೋತಕಗಳಾದ ಮಂಡಲ ಮತ್ತು ರಾಜದಂಡ ನೀಡಿದರು. ನಂತರ ವಜ್ರ ಖಚಿತ ಅಲಂಕೃತವಾದ ಸೇಂಟ್ ಎಡ್ವರ್ಡ್ ಅವರ ಕಿರೀಟವನ್ನು ರಾಜನಿಗೆ ಧಾರಣೆ ಮಾಡಿ ಪ್ರತಿಜ್ಞಾ ವಿಧಿ ಬೋಧಿಸಿದರು.

‘ಬ್ರಿಟನ್‌ ಜನರಿಗೆ ನ್ಯಾಯ ಒದಗಿಸುತ್ತೇನೆ. ಅವರ ನಂಬಿಕೆ ಮತ್ತು ವಿಶ್ವಾಸ ಉಳಿಸಲು ಸದಾ ಸಿದ್ಧನಿದ್ದೇನೆ’ ಎಂದು ಬೈಬಲ್‌ ಮೇಲೆ ಕೈಇಟ್ಟು ಚಾರ್ಲ್ಸ್‌ ಪ್ರತಿಜ್ಞೆ ಸ್ವೀಕರಿಸಿದರು. ಬಳಿಕ ಬೈಬಲ್‌ ಪುಸ್ತಕಕ್ಕೆ ಮುತ್ತಿಟ್ಟರು.

‌‌‌ವಿವಿಧ ಕ್ಷೇತ್ರದ ಪ್ರಮುಖರು ಈ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾದರು. ಭಾರತದ ಪ್ರತಿನಿಧಿಯಾಗಿ ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌ ಹಾಗೂ ಅವರ ಪತ್ನಿ ಡಾ.ಸುದೇಸ ಧನಕರ್ ಸೇರಿದಂತೆ ಕಾಮನ್‌ವೆಲ್ತ್‌ ರಾಷ್ಟ್ರಗಳ ಪ್ರತಿನಿಧಿಗಳು, ಹಿಂದೂ, ಸಿಖ್‌, ಮುಸ್ಲಿಂ, ಬುದ್ಧಿಸ್ಟ್‌, ಯಹೂದಿ ಸಮುದಾಯದ ಧಾರ್ಮಿಕ ನಾಯಕರು ಪಾಲ್ಗೊಂಡಿದ್ದರು. 

ಪ್ರಧಾನಿ ರಿಷಿ ಸುನಕ್‌ ಅವರು ಆರ್ಚ್‌ ಬಿಷಪ್‌ ಸೂಚಿಸಿದ ಬೈಬಲ್‌ನ ವಾಕ್ಯಗಳನ್ನು ಓದಿಸಿದರು. ಭಾರತ ಮೂಲದ ಹಿಂದೂ ವ್ಯಕ್ತಿಯೊಬ್ಬರು ಬ್ರಿಟನ್ ರಾಜನ ಪಟ್ಟಾಧಿಕಾರ ಕಾರ್ಯಕ್ರಮದಲ್ಲಿ ಈ ಕರ್ತವ್ಯ ನಿಭಾಯಿಸಿದ್ದು ವಿಶೇಷವಾಗಿತ್ತು. ಈ ಅಪೂರ್ವ ಕ್ಷಣಕ್ಕೆ ಅವರ ಪತ್ನಿ ಅಕ್ಷತಾ ಮೂರ್ತಿ ಸಾಕ್ಷಿಯಾದರು.

‘ಚಾರ್ಲ್ಸ್‌ ಮತ್ತು ಕ್ಯಾಮಿಲ್ಲಾ ದೇಶದ ಹೆಮ್ಮೆಯ ಪ್ರತೀಕವಾಗಿದ್ದಾರೆ. ರಾಜಪ್ರಭುತ್ವವನ್ನು ಗೌರವಿಸುವುದು ಕಾಮನ್‌ವೆಲ್ತ್ ರಾಷ್ಟ್ರಗಳು ಸೇರಿದಂತೆ ಬ್ರಿಟನ್‌ ಪ್ರಜೆಗಳ ಆದ್ಯ ಕರ್ತವ್ಯ. ಇಂತಹ ವೈಭವಯುತ ಮೆರವಣಿಗೆ, ಸಮಾರಂಭವನ್ನು ಬೇರೆ ಯಾವುದೇ ದೇಶದಲ್ಲೂ ಕಾಣಲು ಸಾಧ್ಯವಿಲ್ಲ’ ಎಂದು ರಿಷಿ ಸುನಕ್‌ ಹೇಳಿದರು. 

‘70 ವರ್ಷದ ಬಳಿಕ ಬ್ರಿಟನ್‌ನಲ್ಲಿ ರಾಜನ ಪಟ್ಟಾಧಿಕಾರ ಸಮಾರಂಭ ನಡೆಯುತ್ತಿದೆ. ಇದು ಚರಿತ್ರೆ, ಸಂಸ್ಕೃತಿ ಹಾಗೂ ಸಂಪ್ರದಾಯ ಬೆರತ ಹೆಮ್ಮೆಯ ಕ್ಷಣ’ ಎಂದು ಪ್ರತಿಕ್ರಿಯಿಸಿದರು.

ಸುಮಾರು ಎರಡು ಗಂಟೆಗಳ ಕಾಲ ಸಮಾರಂಭ ನಡೆಯಿತು. ಅಬೆಯಲ್ಲಿ ಗಂಟೆಯ ಸದ್ದು ಮೊಳಗಿದ ಬಳಿಕ ಮುಕ್ತಾಯಗೊಂಡಿತು. ಬಳಿಕ ಚಾರ್ಲ್ಸ್‌ ದಂಪತಿ ಬಕಿಂಗ್‌ಹ್ಯಾಮ್‌ ಅರಮನೆಗೆ ಸಾರೋಟಿನಲ್ಲಿ ತೆರಳಿದರು.

ಬಕಿಂಗ್‌ಹ್ಯಾಮ್‌ ಅರಮನೆಯಿಂದ ವೆಸ್ಟ್‌ಮಿನ್‌ಸ್ಟರ್‌ ಹಬೆಗೆ ಸಾರೋಟಿನಲ್ಲಿ ತೆರಳುತ್ತಿರುವ 3ನೇ ಚಾರ್ಲ್ಸ್‌ ಮತ್ತು ಅವರ ಪತ್ನಿ ಕ್ಯಾಮಿಲ್ಲಾ
ಬಕಿಂಗ್‌ಹ್ಯಾಮ್‌ ಅರಮನೆಯಿಂದ ವೆಸ್ಟ್‌ಮಿನ್‌ಸ್ಟರ್‌ ಹಬೆಗೆ ಸಾರೋಟಿನಲ್ಲಿ ತೆರಳುತ್ತಿರುವ 3ನೇ ಚಾರ್ಲ್ಸ್‌ ಮತ್ತು ಅವರ ಪತ್ನಿ ಕ್ಯಾಮಿಲ್ಲಾ
ಬಕಿಂಗ್‌ಹ್ಯಾಮ್‌ ಅರಮನೆಯ ಬಾಲ್ಕನಿಯಲ್ಲಿ ನಿಂತು ರಾಯಲ್‌ ಏರ್‌ ಪೋರ್ಸ್‌ನ ಪ್ರದರ್ಶನ ವೀಕ್ಷಿಸಿಸುತ್ತಿರುವ 3ನೇ ಚಾರ್ಲ್ಸ್‌ ಮತ್ತು ಅವರ ಪತ್ನಿ ಕ್ಯಾಮಿಲ್ಲಾ
ಬಕಿಂಗ್‌ಹ್ಯಾಮ್‌ ಅರಮನೆಯ ಬಾಲ್ಕನಿಯಲ್ಲಿ ನಿಂತು ರಾಯಲ್‌ ಏರ್‌ ಪೋರ್ಸ್‌ನ ಪ್ರದರ್ಶನ ವೀಕ್ಷಿಸಿಸುತ್ತಿರುವ 3ನೇ ಚಾರ್ಲ್ಸ್‌ ಮತ್ತು ಅವರ ಪತ್ನಿ ಕ್ಯಾಮಿಲ್ಲಾ

ಪುತ್ರ ಹ್ಯಾರಿ ಭಾಗಿ ಚಾರ್ಲ್ಸ್‌ ಅವರ ಕಿರಿಯ ಪುತ್ರ ಹಾಗೂ ರಾಜಕುಮಾರ ಹ್ಯಾರಿ ಅಪ್ಪನ ಪಟ್ಟಾಧಿಕಾರ ಸಮಾರಂಭವನ್ನು ಕಣ್ತುಂಬಿಕೊಂಡರು. ರಾಜ ಮನೆತನದವರಿಗೆ ಮೀಸಲಾಗಿದ್ದ ಆಸನದಲ್ಲಿ ಅವರು ಆಸೀನರಾಗಿದ್ದರು. ಹ್ಯಾರಿ ಅವರ ಪತ್ನಿ ಮೇಘನ್ ತಮ್ಮ ಇಬ್ಬರು ಮಕ್ಕಳಾದ ಲಿಲಿಬೆಟ್ ಮತ್ತು ಅರ್ಚಿ ಜೊತೆಗೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿದ್ದು ಸಮಾರಂಭಕ್ಕೆ ಗೈರುಹಾಜರಾಗಿದ್ದರು.

ಚಾರ್ಲ್ಸ್‌ಗೆ ಭಾರತ ಅಚ್ಚುಮೆಚ್ಚು

ಲಂಡನ್‌(ಪಿಟಿಐ): ಚಾರ್ಲ್ಸ್‌ಗೆ ಭಾರತವೆಂದರೆ ಅಚ್ಚುಮೆಚ್ಚು. 2007ರಲ್ಲಿ ಅವರು ಬ್ರಿಟಿಷ್‌ ಏಷಿಯನ್‌ ಟ್ರಸ್ಟ್‌ ಸ್ಥಾಪಿಸಿದ್ದಾರೆ. ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿನ ಬಡತನದ ನಿರ್ಮೂಲನೆಗೆ ಇದು ಶ್ರಮಿಸುತ್ತಿದೆ. ಇದಕ್ಕೆ ನೆರವು ಕೋರಿ ಹಲವು ಬಾರಿ ಅವರು ಭಾರತಕ್ಕೂ ಭೇಟಿ ನೀಡಿದ್ದಾರೆ.

‘ಚಾರ್ಲ್ಸ್‌ ಅವರು ವೇಲ್ಸ್‌ನ ರಾಜಕುಮಾರನಾಗಿದ್ದ ದಿನದಿಂದಲೂ ಅವರೊಂದಿಗೆ ನನಗೆ ಒಡನಾಟವಿದೆ. ಹಲವು ಬಾರಿ ಅವರೊಂದಿಗೆ ಚರ್ಚೆ ಮಾಡಿದ್ದೇನೆ. ಇತರರ ನಂಬಿಕೆಗಳನ್ನು ಗೌರವಿಸುವ ಅವರ ನಿಲುವಿನಲ್ಲಿ ಇಂದಿಗೂ ಯಾವುದೇ ಬದಲಾವಣೆಯಾಗಿಲ್ಲ’ ಎಂದು ಸಿಖ್‌ ಧರ್ಮದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದ ಲಾರ್ಡ್‌ ಇಂದ್ರಜಿತ್ ಸಿಂಗ್ ಹೇಳಿದರು.

‘ಅವರದು ಬಹುಸಂಸ್ಕೃತಿಯನ್ನು ಮೇಳೈಸಿದ ವ್ಯಕ್ತಿತ್ವ. ಇದು ಭಾರತದೊಂದಿಗೆ ಅವರ ಬೆಸುಗೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಭಾರತದ ಯೋಗ ಮತ್ತು ಆಯುರ್ವೇದ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇದೆ’ ಎಂದು ಹೇಳಿದರು.

ಚಾರ್ಲ್ಸ್‌ ನಮ್ಮ ರಾಜನಲ್ಲ!

ಲಂಡನ್‌ (ಎಎಫ್‌ಪಿ): ಪಟ್ಟಾಧಿಕಾರದ ಮೆರವಣಿಗೆಗೆ ಅಡ್ಡಿಪಡಿಸಲು ಮುಂದಾಗಿದ್ದ ಬ್ರಿಟನ್‌ ಅರಸೊತ್ತಿಗೆ ವಿರೋಧಿಸುವ ರಿಪಬ್ಲಿಕ್‌ ಸಂಘಟನೆಯ ಸದಸ್ಯರನ್ನು ಪೊಲೀಸರು ಮುಂಜಾಗ್ರತೆಯಾಗಿ ಬಂಧಿಸಿದ ಕ್ರಮವನ್ನು ಬ್ರಿಟನ್‌ ಮಾನವ ಹಕ್ಕುಗಳ ಘಟಕ ಖಂಡಿಸಿದೆ. ಸಂಘಟನೆಯ ಸದಸ್ಯರು ಟಫಾಲ್ಗರ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಜಮಾವಣೆಗೊಂಡು ‘ಚಾರ್ಲ್ಸ್‌ ನಮ್ಮ ರಾಜನಲ್ಲ’ ಎಂದು ಘೋಷಣೆ ಕೂಗಿದರು. ಈ ವೇಳೆ ಅಲ್ಲಿಗೆ ಆಗಮಿಸಿದ ಲಂಡನ್‌ ಮೆಟ್ರೊಪಾಲಿಟನ್‌ ಪೊಲೀಸರು ಪ್ರತಿಭಟನಕಾರರನ್ನು ಬಂಧಿಸಿ ಭಿತ್ತಿಪತ್ರಗಳನ್ನು ವಶಪಡಿಸಿಕೊಂಡರು. 

‘ನಾಗರಿಕರಿಗೆ ತೊಂದರೆ ಕೊಡುತ್ತಿರುವುದರಿಂದ ಬಂಧಿಸಲಾಗಿದೆ’ ಎಂದು ಪೊಲೀಸರು ಸಮಜಾಯಿಷಿ ನೀಡಲು ಮುಂದಾದರು. ಇದಕ್ಕೆ ಪ್ರತಿಭಟನಕಾರರು ಆಕ್ಷೇಪ ವ್ಯಕ್ತ‍ಪಡಿಸಿದರು. ‘ಜನರಿಂದ ಆಯ್ಕೆಯಾದವರಷ್ಟೇ ರಾಜನಾಗಬೇಕು. ಅರಸೊತ್ತಿಗೆಯ ರಾಜ ನಮಗೆ ಬೇಡ. ನಾವು ಮೆರವಣಿಗೆಗೆ ಅಡ್ಡಿಪಡಿಸುವ ಉದ್ದೇಶ ಹೊಂದಿರಲಿಲ್ಲ. ಆದರೂ ನಮ್ಮ ವಿರುದ್ಧ ಪೊಲೀಸರು ಕ್ರಮಕೈಗೊಂಡಿದ್ದಾರೆ’ ಎಂದು ಸಂಘಟನೆಯ ಮುಖ್ಯಸ್ಥ ಗ್ರಾಹಂ ಸ್ಮಿತ್‌  ದೂರಿದರು. ‘ಇಂತಹ ಘಟನೆಯನ್ನು ಮಾಸ್ಕೊದಲ್ಲಿ ಮಾತ್ರ ಕಾಣಬಹುದು. ಲಂಡನ್‌ನಲ್ಲಿ ಇದಕ್ಕೆ ಅವಕಾಶ ಇಲ್ಲ’ ಎಂದು ಮಾನವ ಹಕ್ಕುಗಳ ಘಟಕದ ನಿರ್ದೇಶಕ ಯಾಸ್ಮಿನ್‌ ಅಹ್ಮದ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT