ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಡಾನ್‌ನಿಂದ ಮತ್ತೆ 229 ಭಾರತೀಯರ ಸ್ಥಳಾಂತರ

Published 30 ಏಪ್ರಿಲ್ 2023, 10:57 IST
Last Updated 30 ಏಪ್ರಿಲ್ 2023, 10:57 IST
ಅಕ್ಷರ ಗಾತ್ರ
‘ಆಪರೇಷನ್‌ ಕಾವೇರಿ’ ಯೋಜನೆಯಡಿ ಸಂಘರ್ಷ ಪೀಡಿತ, ಸುಡಾನ್‌ ರಾಜಧಾನಿ ಖಾರ್ಟೂಮ್‌ ಇನ್ನಿತರ ಸ್ಥಳಗಳಿಂದ ಜನ ರನ್ನು ಬಸ್‌ಗಳಲ್ಲಿ ಸುಡಾನ್‌ನ ಬಂದರಿಗೆ ಕರತಂದು, ಬಳಿಕ ಅಲ್ಲಿಂದ ಜೆದ್ದಾಗೆ ವಾಯಪಡೆ ವಿಮಾನದಲ್ಲಿ ಕಳುಹಿಸಲಾಗುತ್ತಿದೆ. ಜೆದ್ದಾದಿಂದ ಭಾರತದ ವಿವಿಧ ನಗರಗಳಿಗೆ ವಾಯುಪಡೆ ವಿಮಾನ ಅಥವಾ ವಾಣಿಜ್ಯ ವಿಮಾನಗಳಲ್ಲಿ ತೆರಳುತ್ತಿದ್ದಾರೆ. ಜೆದ್ದಾ ಮತ್ತು ಸುಡಾನ್‌ನ ಬಂದರಿನಲ್ಲಿ ಭಾರತ ಪ್ರತ್ಯೇಕವಾಗಿ ಕಂಟ್ರೋಲ್ ರೂಂ ಸ್ಥಾಪಿಸಿದ್ದು, ಖಾರ್ಟೂಮ್‌ನಲ್ಲಿರುವ ರಾಯಭಾರ ಕಚೇರಿಯು ಜನರ ಸ್ಥಳಾಂತರಕ್ಕಾಗಿ ಅಗತ್ಯ ಸಹಕಾರವನ್ನು ನೀಡುತ್ತಿದೆ.

ನವದೆಹಲಿ: ಸಂಘರ್ಷ ಪೀಡಿತ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ವಾಪಸು ಕರೆತರುವ ಉದ್ದೇಶದ ‘ಆಪರೇಷನ್ ಕಾವೇರಿ’ ಕಾರ್ಯಕ್ರಮದಡಿ ಭಾರತವು, ಭಾನುವಾರ ಮತ್ತೆ 229 ಜನರನ್ನು ಕರೆತಂದಿತು.

‘229 ಜನರ ತಂಡ ಸುರಕ್ಷಿತವಾಗಿ ಬೆಂಗಳೂರಿಗೆ ಬಂದಿಳಿಯಿತು’ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಅವರು ಭಾನುವಾರ ಟ್ವೀಟ್ ಮಾಡಿದ್ದಾರೆ. ಶನಿವಾರ 365 ಜನರನ್ನು, ಶುಕ್ರವಾರ 754 ಜನರನ್ನು ವಾಪಸು ಕರೆತರಲಾಗಿತ್ತು.

ಇದರೊಂದಿಗೆ ಸುಡಾನ್‌ನಿಂದ ಇದುವರೆಗೂ 1,954 ಭಾರತೀಯರನ್ನು ವಾಪಸು ಕರೆತಂದಂತಾಗಿದೆ. ಜನರ ಸುರಕ್ಷಿತ ಸ್ಥಳಾಂತರಕ್ಕೆ ನೆರವಾಗಲು ಭಾರತವು ಸೌದಿ ಅರೇಬಿಯಾದ ಜಿದ್ದಾ ನಗರದಲ್ಲಿ ಸ್ಥಳಾಂತರ ಶಿಬಿರವನ್ನು ಸ್ಥಾಪಿಸಿದೆ.

‘ಆಪರೇಷನ್‌ ಕಾವೇರಿ’ ಯೋಜನೆಯಡಿ ಸಂಘರ್ಷ ಪೀಡಿತ, ಸುಡಾನ್‌ ರಾಜಧಾನಿ ಖಾರ್ಟೂಮ್‌ ಇನ್ನಿತರ ಸ್ಥಳಗಳಿಂದ ಜನರನ್ನು ಬಸ್‌ಗಳಲ್ಲಿ ಸುಡಾನ್‌ನ ಬಂದರಿಗೆ ಕರೆತಂದು, ಬಳಿಕ ಅಲ್ಲಿಂದ ಜಿದ್ದಾಗೆ ವಾಯಪಡೆ ವಿಮಾನದಲ್ಲಿ ಕಳುಹಿಸಲಾಗುತ್ತಿದೆ. ಜಿದ್ದಾದಿಂದ ಭಾರತದ ವಿವಿಧ ನಗರಗಳಿಗೆ ವಾಯುಪಡೆ ವಿಮಾನ ಅಥವಾ ವಾಣಿಜ್ಯ ವಿಮಾನಗಳಲ್ಲಿ ಜನರು ತೆರಳುತ್ತಿದ್ದಾರೆ.

ಜಿದ್ದಾ ಮತ್ತು ಸುಡಾನ್‌ನ ಬಂದರಿನಲ್ಲಿ ಭಾರತ ಪ್ರತ್ಯೇಕವಾಗಿ ಕಂಟ್ರೋಲ್ ರೂಂ ಸ್ಥಾಪಿಸಿದ್ದು, ಖಾರ್ಟೂಮ್‌ನಲ್ಲಿರುವ ರಾಯಭಾರ ಕಚೇರಿಯು ಜನರ ಸ್ಥಳಾಂತರಕ್ಕಾಗಿ ಅಗತ್ಯ ಸಹಕಾರವನ್ನು ನೀಡುತ್ತಿದೆ.

ನೆಲಮಹಡಿಯಲ್ಲಿ ಆಶ್ರಯ, ಆತಂಕ ದುಃಸ್ವಪ್ನ ನೆನೆದ ಹಿಮಾಚಲ ನಿವಾಸಿ 

ಹಮೀರ್‌ಪುರ್, ಹಿಮಾಚಲ ಪ್ರದೇಶ : ‘ನಿರಂತರವಾಗಿ ಬಾಂಬ್ ದಾಳಿ, ಗುಂಡಿನ ಶಬ್ದಗಳು ಕೇಳಿಬರುತ್ತಿದ್ದವು. ನಾವು ಏಳು ಮಂದಿ ಕಟ್ಟಡ ನೆಲಮಹಡಿಯ ಕೊಠಡಿಯಲ್ಲಿ ಅವಿತಿದ್ದೆವು. ಭಯ ಆವರಿಸಿತ್ತು’ ಎಂದು ಸ್ಥಳೀಯ ನಿವಾಸಿ ದೀಪಕ್‌ ಅಗ್ನಿಹೋತ್ರಿ ಸುಡಾನ್‌ನ ದಿನಗಳನ್ನು ಸ್ಮರಿಸಿದರು.

ಆಪರೇಷನ್‌ ಕಾವೇರಿ ಅಂಗವಾಗಿ ಇಲ್ಲಿಗೆ ಬಂದಿಳಿದ 26 ವರ್ಷದ ದೀಪಕ್, ‘ಭಾರತ ರಾಯಭಾರಿ ಕಚೇರಿ ಜೊತೆಗೆ ಸಂಪರ್ಕದಲ್ಲಿದ್ದೆವು. ಒಮ್ಮೆ ಹೊರತೆರಳಲು ಅನುಮೋದನೆ ಸಿಕ್ಕಿದಂತೆ, ದೋಣಿಯಲ್ಲಿ ಜಿದ್ದಾಗೆ ತಲುಪಿದೆವು’ ಎಂದರು. ಇವರು ಸುಡಾನ್‌ನ ಐ.ಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು.

ಸಂಘರ್ಷ ಆರಂಭವಾದ ಮೊದಲಿಗೆ ನಾವು ನಮ್ಮ ವಸತಿ ಸಂಕೀರ್ಣದಲ್ಲಿಯೇ ಇದ್ದೆವು. ಪರಿಸ್ಥಿತಿ ಗಂಭೀರವಾದಂತೆ ಲಭ್ಯವಿದ್ದ ಅಗತ್ಯ ವಸ್ತುಗಳೊಂದಿಗೆ ನೆಲಮಹಡಿಯ ಕೊಠಡಿ ಸೇರಿಕೊಂಡೆವು. ಒಂದು ಹಂತದಲ್ಲಿ ನೀರು, ಅಡುಗೆ ಅನಿಲ, ಆಹಾರದ ಕೊರತೆಯಾಗಿ ಬದುಕುವುದೇ ಕಷ್ಟವಾಗಿತ್ತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT