ಲಾಹೋರ್: ದೇಶಕ್ಕೆ ಭೇಟಿ ನೀಡುವ ಭಾರತೀಯ ಸಿಖ್ಖರಿಗೆ ಭಾರತದ ಕರೆನ್ಸಿ ಬದಲಿಗೆ ಅಮೆರಿಕದ ಡಾಲರ್ ಬಳಸುವಂತೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಕಾರವು ಸೋಮವಾರ ಸಲಹೆ ನೀಡಿದೆ.
‘ಪಾಕಿಸ್ತಾನದಲ್ಲಿರುವ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಭಾರತೀಯ ಸಿಖ್ಖರಿಗೆ ಪ್ರಸ್ತುತ ವಿನಿಮಯ ದರಕ್ಕಿಂತ ಕಡಿಮೆ ಕರೆನ್ಸಿ ನೀಡುವ ಮೂಲಕ ಶೋಷಣೆ ಮಾಡಲಾಗುತ್ತಿದೆ ಎಂದು ನಮಗೆ ಹಲವು ದೂರುಗಳು ಬಂದಿವೆ’ ಎಂದು ಪಂಜಾಬ್‌ನ ಮೊದಲ ಸಿಖ್ ಮಂತ್ರಿ ರಮೇಶ್ ಸಿಂಗ್ ಅರೋರಾ ಹೇಳಿದರು.
ಅರೋರಾ ಅವರು ‘ಪಾಕಿಸ್ತಾನದ ಸಿಖ್ ಗುರುದ್ವಾರ ಪ್ರಬಂಧಕ ಕಮಿಟಿ’ಯ ಅಧ್ಯಕ್ಷರೂ ಆಗಿದ್ದು, ಪಾಕಿಸ್ತಾನಕ್ಕೆ ಭೇಟಿ ನೀಡುವ ಭಾರತೀಯ ಸಿಖ್ಖರು ಸೌಲಭ್ಯಗಳಿಗಾಗಿ ಯಾವುದೇ ಹೆಚ್ಚುವರಿ ಹಣವನ್ನು ನೀಡುವ ಅಗತ್ಯವಿಲ್ಲ ಎಂದು ತಿಳಿಸಿದರು.
‘ಗುರುನಾನಕ್ 555ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ನವೆಂಬರ್ 14ರಂದು ಹೆಚ್ಚಿನ ಸಂಖ್ಯೆಯ ಭಾರತೀಯರು ಪಾಕಿಸ್ತಾನಕ್ಕೆ ಆಗಮಿಸಲಿದ್ದಾರೆ’ ಎಂದು ಅವರು ಹೇಳಿದರು.