ಸಿಂಗಪುರ: ಸಿಂಗಪುರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸಿಂಗಪುರ ಪ್ರಧಾನಿ ಲಾರೆನ್ಸ್ ವಾಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಉಭಯ ದೇಶಗಳ ನಾಯಕರು ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಸೆಮಿಕಂಡಕ್ಟರ್, ಡಿಜಿಟಲ್ ತಂತ್ರಜ್ಞಾನ, ಕೌಶಲ್ಯ ಅಭಿವೃದ್ಧಿ ಮತ್ತು ಆರೋಗ್ಯ ರಕ್ಷಣೆಯಲ್ಲಿ ಸಹಕಾರದ ಒಪ್ಪಂದಗಳು ಪ್ರಮುಖವಾದವು.
ಇದೇ ಸಂದರ್ಭದಲ್ಲಿ ಉಭಯ ದೇಶಗಳ ಸಾಂಸ್ಕೃತಿಕ ಬಾಂಧವ್ಯ ಇನ್ನಷ್ಟು ವೃದ್ಧಿಯಾಗಬೇಕೆಂದು ಸಿಂಗಪುರದಲ್ಲಿ ಮೊದಲ ‘ತಿರುವಳ್ಳರ್ ಸಾಂಸ್ಕೃತಿಕ ಕೇಂದ್ರ’ ತೆರೆಯುವುದಾಗಿ ಮೋದಿ ಘೋಷಿಸಿದ್ದಾರೆ.
ಸಿಂಗಪುರಕ್ಕೆ ಆಹ್ವಾನಿಸಿದ್ದಕ್ಕೆ ಲಾರೆನ್ಸ್ ಅವರಿಗೆ ಧನ್ಯವಾದ ಹೇಳಿದ ಮೋದಿ, ಲಾರೆನ್ಸ್ ಅವರನ್ನೂ ಭಾರತಕ್ಕೆ ಆಹ್ವಾನಿಸಿದ್ದಾರೆ. ಲಾರೆನ್ಸ್ ಅವರೂ ಮೋದಿ ಆಹ್ವಾನವನ್ನು ಸ್ವೀಕರಿಸಿದ್ದಾರೆ.
ಮೋದಿ ಶ್ಲಾಘಿಸಿದ ನಿರ್ಮಲಾ
ಸಿಂಗಪುರದಲ್ಲಿ ತಿರುವಳ್ಳರ್ ಸಾಂಸ್ಕೃತಿಕ ಕೇಂದ್ರ ಸ್ಥಾಪಿಸುವ ಮೋದಿ ಅವರ ನಿರ್ಧಾರವನ್ನು ಶ್ಲಾಘಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಧಾನಿಗೆ ಧನ್ಯವಾದ ತಿಳಿಸಿದ್ದಾರೆ. ಇದರಿಂದಾಗಿ ಸಿಂಗಪುರದಲ್ಲಿಯೂ ತಮಿಳು ಭಾಷೆ, ನಾಗರಿಕತೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸಲು ಸಹಕಾರಿಯಾಗಿದೆ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವುದಾಗಿ ಎಎನ್‌ಐ ವರದಿ ತಿಳಿಸಿದೆ.