ವಾಷಿಂಗ್ಟನ್: ಉತ್ತರ ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ನಿರ್ಮಾಣವಾಗುತ್ತಿರುವ ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 19 ಅಡಿ ಎತ್ತರದ ಪ್ರತಿಮೆಯನ್ನು ಇದೇ 14ರಂದು ಲೋಕಾರ್ಪಣೆಗೊಳಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಇದು ಭಾರತದ ಹೊರಗೆ ನಿರ್ಮಿಸಿರುವ ಅತಿ ಎತ್ತರದ ಪ್ರತಿಮೆಯಾಗಿದೆ.
ಅಂಬೇಡ್ಕರ್ ಇಂಟರ್‌ನ್ಯಾಷನಲ್ ಸೆಂಟರ್‌ನ(ಎಐಸಿ) ಭಾಗವಾಗಿರುವ ಮತ್ತು ಸಮಾನತೆಯ ಪ್ರತಿಮೆ ಎಂದು ಹೆಸರಿಸಲಾಗಿರುವ 19 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆಯನ್ನು ಮೇರಿಲ್ಯಾಂಡ್‌ನ ಆ್ಯಕೊಕೀಕ್ ನಗರದ 13 ಎಕರೆಯಲ್ಲಿ ನಿರ್ಮಿಸಲಾಗಿದೆ. ಈ ನಗರವು ವಾಷಿಂಗ್ಟನ್‌ನ ದಕ್ಷಿಣ ಭಾಗದಿಂದ 35 ಕಿ.ಮೀ ದೂರದಲ್ಲಿದೆ.
ಅಕ್ಟೋಬರ್ 14ರಂದು ಅಂಬೇಡ್ಕರ್ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಚಳವಳಿಯ ಪ್ರತಿನಿಧಿಗಳು ಮತ್ತು ಅಂಬೇಡ್ಕರ್ ಅವರ ಅನುಯಾಯಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಎಐಸಿ ತಿಳಿಸಿದೆ.
ಈ ಸ್ಮಾರಕವು ಬಾಬಾ ಸಾಹೇಬ್ ಅವರ ಸಂದೇಶಗಳು ಮತ್ತು ಉಪದೇಶಗಳನ್ನು ಸಾರಲಿದೆ. ಜತೆಗೆ ಮಾನವ ಹಕ್ಕುಗಳು ಹಾಗೂ ಸಮಾನತೆಯ ಪ್ರತಿಬಿಂಬವಾಗಿರಲಿದೆ ಎಂದು ಎಐಸಿ ತಿಳಿಸಿದೆ.
ಗುಜರಾತ್‌ನಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆ ನಿರ್ಮಾಣ ಮಾಡಿದ್ದ ಕಲಾವಿದ ಮತ್ತು ಶಿಲ್ಪಿ ರಾಮ್ ಸುತಾರ್ ಅವರೇ ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣದ ಉಸ್ತುವಾರಿ ವಹಿಸಿದ್ದಾರೆ.