ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕೆಗೆ ಆಸ್ಪದವಾದ ಪ್ರಿಗೋಷಿನ್‌ ಸಾವು

ಅಪಘಾತದಲ್ಲಿ ತನ್ನ ಪಾತ್ರ ತಳ್ಳಿಹಾಕಿದ ರಷ್ಯಾ * ಇದ್ದರೆ ಆಶ್ಚರ್ಯವೇನೂ ಇಲ್ಲ –ಜೋ ಬೈಡನ್‌
Published 25 ಆಗಸ್ಟ್ 2023, 15:31 IST
Last Updated 25 ಆಗಸ್ಟ್ 2023, 15:31 IST
ಅಕ್ಷರ ಗಾತ್ರ

ಮಾಸ್ಕೊ: ರಷ್ಯಾದ ಖಾಸಗಿ ಸೇನಾ ಪಡೆ ‘ವ್ಯಾಗ್ನರ್‌’ ಗುಂಪಿನ ನಾಯಕ ಯೆವ್ಗೆನಿ ಪ್ರಿಗೋಷಿನ್‌ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಹಲವು ಶಂಕೆಗಳಿಗೆ ಆಸ್ಪದವಾಗಿದೆ. ಈ ಕೃತ್ಯದ ತನ್ನ ಪಾತ್ರವಿದೆ ಎಂಬ ವದಂತಿಯನ್ನು ರಷ್ಯಾ ಬಲವಾಗಿ ನಿರಾಕರಿಸಿದೆ.

ಆದರೆ, ಬುಧವಾರ ಸಂಭವಿಸಿದ್ದ ವಿಮಾನ ಅಪಘಾತಕ್ಕೆ ಕಾರಣವಾಗಿರುವ ಅಂಶಗಳ ಕುರಿತಂತೆ ತನಿಖೆಯು ಪ್ರಗತಿಯಲ್ಲಿದೆ ಎಂದೂ ರಷ್ಯಾ ಸರ್ಕಾರ ತಿಳಿಸಿದೆ. 

ಅಪಘಾತದ ಹಿಂದೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಪಾತ್ರವಿದೆ ಎಂಬ ಶಂಕೆಯು ವ್ಯಾಪಕವಾಗಿದೆ. ‘ಅದು ಅಪಘಾತವಲ್ಲ, ಹತ್ಯೆ’ ಎಂದೂ ವ್ಯಾಖ್ಯಾನಿಸಲಾಗುತ್ತಿದೆ.

ಆದರೆ, ರಷ್ಯಾದ ಆಡಳಿತ ಇದುವರೆಗೂ ಪ್ರಿಗೋಷಿನ್‌ ಅವರ ಸಾವನ್ನು ದೃಢಪಡಿಸಿಲ್ಲ. ‘ಪ್ರಿಗೋಷಿನ್ ಮೃತಪಟ್ಟಿರಬಹುದು ಎಂದು ಭಾವಿಸಲಾಗಿದೆ. ಆದರೆ, ಅವರು ವಿಶೇಷ ಭದ್ರತಾ ವ್ಯವಸ್ಥೆ ಹೊಂದಿದ್ದರು ಎಂಬುದನ್ನು ಗಮನಿಸಬೇಕು’ ಎಂದು ಪುಟಿನ್‌ ಅವರ ವಕ್ತಾರ ಡಿಮಿಟ್ರಿ ಪೆಸ್ಕೊವ್ ಪ್ರತಿಕ್ರಿಯಿಸಿದ್ದಾರೆ.

ಪ್ರಿಗೋಷಿನ್‌ ನೇತೃತ್ವದ ವ್ಯಾಗ್ನರ್‌ ಯೋಧರ ಹೋರಾಟವು ಉಕ್ರೇನ್‌, ಆಫ್ರಿಕಾ ಮತ್ತು ಸಿರಿಯಾದಲ್ಲಿ ತೀವ್ರ ಆತಂಕ ಮೂಡಿಸಿತ್ತು. ರಷ್ಯಾದ ನಾಯಕ ಪುಟಿನ್‌ ಅವರ 23 ವರ್ಷದ ಆಡಳಿತಕ್ಕೆ ಸವಾಲೊಡ್ಡುವಂತೆ, ಕಳೆದ ಜೂನ್ ತಿಂಗಳಲ್ಲಿ ವ್ಯಾಗ್ನರ್‌ ಗುಂಪು ಅಲ್ಪಾವಧಿಗೆ ದಂಗೆ ಎದ್ದಿತ್ತು.

ಅಮೆರಿಕದ ಗುಪ್ತದಳದ ಪ್ರಾಥಮಿಕ ಅಂದಾಜಿನ ಪ್ರಕಾರ, ಪ್ರಿಗೋಷಿನ್‌ ಅವರು ಪ್ರಯಾಣಿಸುತ್ತಿದ್ದ ವಿಮಾನವನ್ನು ಉದ್ದೇಶಪೂರ್ವಕ ಸ್ಫೋಟದಿಂದ ನೆಲಕ್ಕುರುಳಿಸಲಾಗಿದೆ. ‘ಬಹುಶಃ ಪ್ರಿಗೋಷಿನ್‌ ಅವರನ್ನೇ ಗುರಿಯಾಗಿಸಿ ಇದನ್ನು ನಡೆಸಲಾಗಿದೆ. ಟೀಕಾಕಾರರ ಸದ್ದಡಗಿಸುವ ಧೋರಣೆ ಕುರಿತಂತೆ ಪುಟಿನ್ ಅವರಿಗೆ ದೊಡ್ಡ ಇತಿಹಾಸವೇ ಇದೆ’ ಎಂದು ಗುಪ್ತದಳದ ಅಧಿಕಾರಿಯೊಬ್ಬರು ಹೇಳಿದರು.  

‘ಅಪಘಾತ ಹಾಗೂ ಪ್ರಿಗೋಷಿನ್‌ ದುರಂತ ಅಂತ್ಯ ಕುರಿತು ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ. ಆದರೆ, ಈ ಎಲ್ಲವೂ ಸುಳ್ಳು. ಆದರೆ, ವ್ಯಾಗ್ನರ್‌ ಗುಂಪಿನ ಭವಿಷ್ಯ  ಕುರಿತಂತೆ ನಾನು ಈ ಹಂತದಲ್ಲಿ ಏನನ್ನೂ ಹೇಳುವುದಿಲ್ಲ. ನನಗೆ ಗೊತ್ತಿಲ್ಲ’ ಎಂದು ಪೆಸ್ಕೊವ್ ಪ್ರತಿಕ್ರಿಯಿಸಿದರು.

ಪ್ರಿಗೋಷಿನ್‌ ಸಾವು ಕುರಿತು ಅಧಿಕೃತ ಮಾಹಿತಿ ಬಂದಿದೆಯೇ ಎಂಬ ಪ್ರಶ್ನೆಗೆ, ‘ಸದ್ಯಕ್ಕೆ ಅಗತ್ಯವಿರುವ ಎಲ್ಲ ಪ್ರಯೋಗಾಲಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಸ್ಪಷ್ಟತೆ ದೊರೆತಂತೇ ಅಧಿಕೃತವಾಗಿ ಮಾಹಿತಿ ಬಿಡುಗಡೆ ಮಾಡಲಾಗುತ್ತದೆ‘ ಎಂದು ತಿಳಿಸಿದರು.

ಈ ಮಧ್ಯೆ, ಬ್ರಿಟನ್‌ನ ರಕ್ಷಣಾ ಸಚಿವಾಲಯವು ಪ್ರಿಗೋಷಿನ್‌ ಅವರ ಸಾವಿನ ಹಿನ್ನೆಲೆಯಲ್ಲಿ ವ್ಯಾಗ್ನರ್ ಗುಂಪು ಅಸ್ತಿತ್ವ ಕಳೆದುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿದೆ. ‘ಪ್ರಿಗೋಷಿನ್ ಅವರ ಧೈರ್ಯ, ಕ್ರಿಯಾಶೀಲತೆ, ಗುರಿ ಸಾಧಿಸುವ ಛಲಕ್ಕೆ ಸರಿಸಾಟಿಯಾಗುವ ಉತ್ತರಾಧಿಕಾರಿ ಸಿಗುವುದು ಕಷ್ಟ’  ಹೇಳಿಕೆ ನೀಡಿದೆ.  

ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ರಷ್ಯಾದ ಪಡೆಯಲ್ಲಿ ವ್ಯಾಗ್ನರ್‌ ಗುಂಪಿನ ಪಾತ್ರ ಮಹತ್ವದ್ದಾಗಿತ್ತು. ಮುಖ್ಯವಾಗಿ ಬಖ್ಮಟ್‌ನಲ್ಲಿ ತಿಂಗಳು ಕಾಲ ನಡೆದ ಹೋರಾಟದಲ್ಲಿ ವ್ಯಾಗ್ನರ್‌ ಗುಂಪು ನಿರ್ಣಾಯಕ ಪಾತ್ರ ವಹಿಸಿತ್ತು. ಆಫ್ರಿಕಾ ಹಾಗೂ ಸಿರಿಯಾದಲ್ಲಿ ರಷ್ಯಾದ ಪ್ರಭಾವವನ್ನು ಪರಿಣಾಮಕಾರಿಯಾಗಿ ಬಿಂಬಿಸುವಲ್ಲೂ ನಿರ್ಣಾಯಕ ಪಾತ್ರ ವಹಿಸಿತ್ತು.

ಯೆವ್ಗೆನಿ ಪ್ರಿಗೋಷಿನ್‌
ಯೆವ್ಗೆನಿ ಪ್ರಿಗೋಷಿನ್‌

ವಾಸ್ತವ ಏನೆಂದು ನನಗೆ ತಿಳಿದಿಲ್ಲ. ಆದರೆ ಇದರ ಹಿಂದೆ ಪುಟಿನ್‌ ಅವರ ಪಾತ್ರ ಇರಬಹುದು ಎಂಬ ಅನುಮಾನವಿದೆ. ಇದ್ದರೆ ಅದು ನನಗೆ ಆಶ್ಚರ್ಯ ಮೂಡಿಸುವುದಿಲ್ಲ

-ಜೋ ಬೈಡನ್‌ ಅಮೆರಿಕ ಅಧ್ಯಕ್ಷ

ಉಕ್ರೇನ್‌ ವಿರುದ್ಧದ ಹೋರಾಟದಲ್ಲಿ ವ್ಯಾಗ್ನರ್‌ ಗುಂಪಿನ ಕೊಡುಗೆ ಗಣನೀಯವಾಗಿದೆ. ನಾವು ಅದನ್ನು ನೆನಪಿಡುತ್ತೇವೆ. ಅದನ್ನು ಎಂದಿಗೂ ಮರೆಯುವುದಿಲ್ಲ

-ವ್ಲಾಡಿಮಿರ್ ಪುಟಿನ್‌ ರಷ್ಯಾ ಅಧ್ಯಕ್ಷ

‘ಅಪಘಾತ: ಪ್ರಿಗೋಷಿನ್‌ ಸೇರಿ 10 ಸಾವು’

ಮಾಸ್ಕೊ: ಯೆವ್ಗೆನಿ ಪ್ರಿಗೋಷಿನ್‌ ಅವರು ಪ್ರಯಾಣಿಸುತ್ತಿದ್ದ ಜೆಟ್‌ ವಿಮಾನ ಕಳೆದ ಬುಧವಾರ ಮಾಸ್ಕೊ ನಗರದಿಂದ ಗಗನಕ್ಕೆ ಚಿಮ್ಮಿದ್ದ ಕೆಲಹೊತ್ತಿನಲ್ಲಿಯೇ ಅಪಘಾತಕ್ಕೆ ಗುರಿಯಾಗಿತ್ತು. ಪ್ರಿಗೋಷಿನ್‌ ಅವರಲ್ಲದೆ ವ್ಯಾಗ್ನರ್‌ ಗುಂಪಿನ ಆರು ಸದಸ್ಯರು ಮೂವರು ಸಿಬ್ಬಂದಿ ವಿಮಾನದಲ್ಲಿದ್ದರು ಎಂದು ರಷ್ಯಾದ ವಿಮಾನಯಾನ ಪ್ರಾಧಿಕಾರ ತಿಳಿಸಿದೆ. ‘ಅಪಘಾತ ಸ್ಥಳದಲ್ಲಿ 10 ಜನರ ಶವ ಪತ್ತೆಯಾಗಿವೆ. ಪ್ರಿಗೋಷಿನ್ ಅವರು ಮೃತಪಟ್ಟಿದ್ದಾರೆ’ ಎಂದು ವ್ಯಾಗ್ನರ್ ಗುಂಪಿನ ಮೂಲವನ್ನು ಉಲ್ಲೇಖಿಸಿ ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ. ಸಾವಿನ ಬಗ್ಗೆ ಅಧಿಕೃತವಾಗಿ ದೃಢಪಡಿಸಿಲ್ಲ. ವಿಮಾನ ಸೇಂಟ್‌ ಪೀಟರ್ಸ್‌ಬರ್ಗ್‌ಗೆ ತೆರಳುತ್ತಿತ್ತು ಎನ್ನಲಾಗಿದೆ. ರಷ್ಯಾದ ಮಾಧ್ಯಮಗಳು ಅಪಘಾತದ ಸುದ್ದಿಗೆ ಹೆಚ್ಚಿನ ಪ್ರಚಾರವನ್ನು ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT