ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರಾಧಿ ಎಂದು ಸಾಬೀತಾದರೂ ಅಧ್ಯಕ್ಷೀಯ ಚುನಾವಣಾ ಪ್ರಚಾರ ನಿಲ್ಲಿಸುವುದಿಲ್ಲ: ಟ್ರಂಪ್

Published 28 ಜುಲೈ 2023, 16:02 IST
Last Updated 28 ಜುಲೈ 2023, 16:02 IST
ಅಕ್ಷರ ಗಾತ್ರ

ವಾಷಿಂಗ್ಟನ್: ಗೋಪ್ಯ ವರ್ಗೀಕೃತ ದಾಖಲೆಗಳ ವಿಚಾರದಲ್ಲಿ ತಾವು ಯಾವುದೇ ತಪ್ಪೆಸಗಿಲ್ಲ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಧಿಕಾರ ಕಳೆದುಕೊಂಡ ಬಳಿಕವೂ ತಮ್ಮೊಂದಿಗೆ ವರ್ಗೀಕೃತ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದ ಪ್ರಕರಣದಲ್ಲಿ ತಮ್ಮ ವಿರುದ್ಧ ಫೆಡರಲ್ ತನಿಖಾಧಿಕಾರಿಗಳು ಎರಡನೇ ಬಾರಿಗೆ ಆರೋಪ ಹೊರಿಸಿದ ಒಂದು ದಿನದ ಬಳಿಕ ಪ್ರತಿಕ್ರಿಯಿಸಿರುವ ಅವರು, ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ.

2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದಿಂದ ಮುಂಚೂಣಿ ಅಭ್ಯರ್ಥಿಯಾಗಿರುವ ಟ್ರಂಪ್, ಪ್ರಕರಣ ಕುರಿತಂತೆ ರೇಡಿಯೋ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ‘ಭದ್ರತಾ ಟೇಪ್‌ಗಳನ್ನು ನಾವು ಅವರಿಗೆ ಯಾವಾಗಲೊ ಹಸ್ತಾಂತರಿಸಿದ್ದೇವೆ. ಅವರು ಏನು ಹೇಳುತ್ತಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲ’ ಎಂದು ನುಡಿದಿದ್ದಾರೆ.

ಗುರುವಾರ ಟ್ರಂಪ್ ವಿರುದ್ಧ ಅಮೆರಿಕದ ವಿಶೇಷ ಅಭಿಯೋಜಕ ಜಾಕ್ ಸ್ಮಿತ್ ಅವರು, ಹೊಸದಾಗಿ ಮೂರು ಆರೋಪಗಳನ್ನು ಹೊರಿಸಿದ್ದು, ಟ್ರಂಪ್ ಮೇಲಿನ ಒಟ್ಟು ಆರೋಪಗಳ ಸಂಖ್ಯೆ 40ಕ್ಕೆ ಏರಿದೆ. ಟ್ರಂಪ್ ಅವರ ಫ್ಲಾರಿಡಾದ ಮಾರ್‌ ಎ ಲಾಗೊ ರೆಸಾರ್ಟ್‌ನ ನೌಕರನ ವಿರುದ್ಧವೂ ದಾಖಲೆ ಬಚ್ಚಿಡಲು ಟ್ರಂಪ್‌ಗೆ ಸಹಕರಿಸಿದ ಆರೋಪ ಹೊರಿಸಲಾಗಿದೆ.

‘ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ನೌಕರರನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಅಧಿಕಾರಿಗಳ ಬೆದರಿಕೆಗೆ ಹೆದರಿ ಅವರು ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ’ ಎಂದು ಟ್ರಂಪ್ ಹೇಳಿದ್ದಾರೆ.

ಅಲ್ಲದೆ, ತಮ್ಮ ವಿರುದ್ಧದ ವಿವಿಧ ಆರೋಪಗಳಲ್ಲಿ ಅಪರಾಧಿ ಎಂದು ಸಾಬೀತಾದರೂ ಅಥವಾ ಶಿಕ್ಷೆಯಾದರೂ ಸಹ 2024ರ ಅಧ್ಯಕ್ಷೀಯ ಚುನಾವಣೆಯ ಪ್ರಚಾರವನ್ನು ನಿಲ್ಲಿಸುವುದಿಲ್ಲ ಎಂದು ಟ್ರಂಪ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT