ಎನ್‌ಜಿಟಿ ಆದೇಶಕ್ಕೆ ಮುನ್ನವೇ ಒಪ್ಪಿಗೆ

7
256 ಯೋಜನೆಗಳಿಗೆ ಅನುಮೋದನೆ: ‘ಸುಪ್ರೀಂ’ಗೆ ‍‍ಪ್ರಮಾಣಪತ್ರ

ಎನ್‌ಜಿಟಿ ಆದೇಶಕ್ಕೆ ಮುನ್ನವೇ ಒಪ್ಪಿಗೆ

Published:
Updated:

ಬೆಂಗಳೂರು: ಕೆರೆ ಹಾಗೂ ರಾಜಕಾಲುವೆಗಳ ಮೀಸಲು ಪ್ರದೇಶಕ್ಕೆ ಸಂಬಂಧಿಸಿ 2016ರ ಮೇ 4ರಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶ ಹೊರಡಿಸುವುದಕ್ಕೆ ಮುನ್ನವೇ ಬಿಬಿಎಂಪಿ ಈ ಹಿಂದಿನ ಮೀಸಲು ನಿಯಮಗಳ ಪ್ರಕಾರ 256 ಕಟ್ಟಡ ನಿರ್ಮಾಣ ಯೋಜನೆಗಳಿಗೆ ಅನುಮೋದನೆ ನೀಡಿತ್ತು.

ಈ ಕುರಿತು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಸುಪ್ರಿಂ ಕೋರ್ಟ್‌ಗೆ ಮಂಗಳವಾರ ಪ್ರಮಾಣಪತ್ರ ಸಲ್ಲಿಸಿದ್ದಾರೆ.

‘2016ರ ಮೇ 4ಕ್ಕೆ ಮುನ್ನವೇ 256 ಕಟ್ಟಡ ಯೋಜನೆಗಳಿಗೆ ಪಾಲಿಕೆ ಅನುಮೋದನೆ ನೀಡಿತ್ತು. ಕೆರೆ ಹಾಗೂ ರಾಜಕಾಲುವೆಗಳ ಮೀಸಲು ಪ್ರದೇಶಕ್ಕೆ ಸಂಬಂಧಿಸಿದ ಆದೇಶವನ್ನು ಎನ್‌ಜಿಟಿ ಪೂರ್ವಾನ್ವಯಗೊಳಿಸಿದ್ದರಿಂದ ಈ ಕಟ್ಟಡಗಳು ಮೀಸಲು ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತಿದ್ದವು. ಹಾಗಾಗಿ ಈ ಕಟ್ಟಡಗಳ ನಿರ್ಮಾಣ ಕಾರ್ಯ ‍ಪೂರ್ಣಗೊಂಡ ಬಳಿಕವೂ ಅವುಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ ನೀಡಿಲ್ಲ. ಈ ಕಟ್ಟಡಗಳಲ್ಲಿ ಒಟ್ಟು 35,054 ಫ್ಲ್ಯಾಟ್‌ಗಳು ಅಥವಾ ಘಟಕಗಳು ಇದ್ದವು’ ಎಂದು ಅವರು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

‘ಪಾಲಿಕೆ ವ್ಯಾಪ್ತಿಯಲ್ಲಿರುವ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ರಾಜಕಾಲುವೆಗಳ ಒಟ್ಟು ಉದ್ದ 856.76 ಕಿ.ಮೀಗಳಷ್ಟಾಗುತ್ತದೆ. ಇವುಗಳಿಗೆ ಸಂಬಂಧಿಸಿದಂತೆ 21,400 ಎಕರೆಗಳಷ್ಟು ಮೀಸಲು ಪ್ರದೇಶವನ್ನು ಬಿಡಬೇಕಾಗುತ್ತದೆ. ಎನ್‌ಜಿಟಿ ಆದೇಶದ ಪ್ರಕಾರ ಸುಮಾರು 11 ಸಾವಿರ ಎಕರೆಗಳಷ್ಟು ಹೆಚ್ಚುವರಿ ಮೀಸಲು ಪ್ರದೇಶವನ್ನು ಕಾಯ್ದುಕೊಳ್ಳಬೇಕಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆ ಕೆರೆಗಳಿಗೆ 30 ಮೀಟರ್‌ ಮೀಸಲು ಪ್ರದೇಶವನ್ನು ನಿಗದಿಪಡಿಸಲಾಗಿತ್ತು. ಎನ್‌ಜಿಟಿ ಆದೇಶದ ಪ್ರಕಾರ 75 ಮೀ ಮೀಸಲು ಪ್ರದೇಶವನ್ನು ಕಾಯ್ದುಕೊಳ್ಳಬೇಕಿದೆ. ಪ್ರಾಥಮಿಕ ರಾಜಕಾಲುವೆಗೆ 50 ಮೀ, ದ್ವಿತೀಯ ಹಂತದ ರಾಜಕಾಲುವೆಗೆ 35 ಮೀ ಹಾಗೂ ಮೂರನೇ ಹಂತದ ರಾಜಕಾಲುವೆಗೆ 25 ಮೀ ಮೀಸಲು ಪ್ರದೇಶವನ್ನು ಕಾಯ್ದುಕೊಳ್ಳಬೇಕಿದೆ.

 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !