ಹೆದ್ದಾರಿ 209ರ ವಿಸ್ತರಣೆ ಕಾಮಗಾರಿ ಕಳಪೆ: ಆರೋಪ

7

ಹೆದ್ದಾರಿ 209ರ ವಿಸ್ತರಣೆ ಕಾಮಗಾರಿ ಕಳಪೆ: ಆರೋಪ

Published:
Updated:
Deccan Herald

ಯಳಂದೂರು: ರಾಷ್ಟ್ರೀಯ ಹೆದ್ದಾರಿ 209ರ ರಸ್ತೆ ವಿಸ್ತರಣೆ ಕಾಮಗಾರಿ ಕಳಪೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಈಗಿರುವ ಹೆದ್ದಾರಿಯನ್ನು ಅಗಲ ಮಾಡಿ ವಾಹನ ಸಂಚಾರವನ್ನು ಸುಗಮಗೊಳಿಸಲು ಹೆದ್ದಾರಿ ಕಾಮಗಾರಿ ಆರಂಭಿಸಲಾಗಿದೆ. ಅಗಲೀಕರಣದ ನೆಪದಲ್ಲಿ ಜೆಸಿಬಿ ಯಂತ್ರದ ಮೂಲಕ ಅಗೆದ ಮಣ್ಣನ್ನು ರಸ್ತೆ ಬದಿಗೆ ಸುರಿಯಲಾಗಿದೆ. ಹೊಸ ರಸ್ತೆಗೆ ಗ್ರಾವೆಲ್ ಹಾಕಬೇಕೆಂಬ ನಿಯಮವಿದೆ. ಆದರೆ ಅಗೆದಿರುವ ಮಣ್ಣನ್ನೇ ರಸ್ತೆಗೆ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಕಾಮಗಾರಿಯ ಗುಣಮಟ್ಟ ಕಳಪೆಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. 

ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ 209‌ ನಿರ್ಮಾಣದ ಹೊಣೆ ಹೊತ್ತಿರುವ ಎಂಜಿನಿಯರ್‌ ಅವರನ್ನು ಕೇಳಿದರೆ, ಅದು ತಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಮಾಹಿತಿ ನೀಡುತ್ತಾರೆ ಎಂದು ಆಲ್ಕೆರೆ ಅಗ್ರಹಾರ ಗ್ರಾಮದ ರಂಗಸ್ವಾಮಿ ದೂರಿದ್ದಾರೆ.

ಕಳಪೆ ಮಣ್ಣನ್ನೇ ಬಳಸಲಾಗುತ್ತಿದೆ: ಬೆಂಗಳೂರಿನಿಂದ ದಿಂಡಿಗಲ್‌ಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 209 ರಸ್ತೆಯ ಅಭಿವೃದ್ಧಿ ಯೋಜನೆಗೆ ₹1,009 ಕೋಟಿ ಬಿಡುಗಡೆ ಮಾಡಲಾಗಿದೆ.

‘ಈ ಕಾಮಗಾರಿಗೆ ತಾಲ್ಲೂಕಿನ ಮದ್ದೂರು ಗ್ರಾಮದ ಬಳಿ ನಡೆಯುತ್ತಿರುವ ರಸ್ತೆ ವಿಸ್ತರಣೆಗಾಗಿ ತೋಡಲಾಗಿದ್ದ ಮಣ್ಣನ್ನೇ ಬಳಸಲಾಗುತ್ತಿದೆ. ಹೆದ್ದಾರಿ ನಿರ್ಮಾಣದ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಇದಕ್ಕೆ, ಸಂಬಂಧಪಟ್ಟ ಗುತ್ತಿಗೆದಾರ ತನಗೆ ಇಷ್ಟ ಬಂದಂತೆ ಕೆಲಸ ಮಾಡುತ್ತಿದ್ದಾರೆ. ಕೆಲವು ಕಡೆ ಈಗಾಗಲೇ ಹಾಕಿರುವ ಟಾರು ಕಿತ್ತು ಬಂದಿದೆ. ಕೆಲಸ ನಡೆಯುವ ಸ್ಥಳದಲ್ಲಿ ಸಂಬಂಧಪಟ್ಟ ಎಂಜಿನಿಯರ್‌ಗಳು ಇರುವುದೇ ಇಲ್ಲ’ ಎಂದು ಗ್ರಾಮದ ಸೋಮಶೇಖರ್, ಮಹಾದೇವಪ್ಪ ಅವರು ಆಪಾದಿಸಿದ್ದಾರೆ. 

ಸೂಚನಾ ಫಲಕಗಳೇ ಇಲ್ಲ: ಈ ಹೆದ್ದಾರಿಯು ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಹಾದು ಹೋಗಿವೆ. ಇಲ್ಲಿ ದಿನಿನಿತ್ಯ ಸಾವಿರಾರು ರಾಜ್ಯ, ಅಂತರರಾಜ್ಯ ವಾಹನಗಳು ಓಡಾಡುತ್ತವೆ. ಸದಾ ದಟ್ಟಣೆ ಹೆಚ್ಚಾಗಿರುತ್ತದೆ. ಆದರೆ ಕಾಮಗಾರಿ ಆರಂಭಗೊಂಡು ಒಂದು ಬದಿಯಲ್ಲಿ ಮಣ್ಣನ್ನು ತೋಡಿ ಹಳ್ಳ ಮಾಡಿದ್ದರೂ ಯಾವುದೇ ಸೂಚನಾ ಫಲಕಗಳನ್ನು ಹಾಕಿಲ್ಲ.

ರಾತ್ರಿ ವೇಳೆ ಸಂಚರಿಸುವ ಅನೇಕರು ಇಲ್ಲಿ ಬಿದ್ದು ಗಾಯಗೊಂಡಿರುವ ಉದಾಹರಣೆಗಳಿದ್ದು, ತಕ್ಷಣವೇ ಸೂಚನಾ ಫಲಕ ಅಳವಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !