ಅಂದದ ನಿಧಿ

ಭಾನುವಾರ, ಏಪ್ರಿಲ್ 21, 2019
26 °C

ಅಂದದ ನಿಧಿ

Published:
Updated:
Prajavani

ಫೋಟೊ ಶೇರಿಂಗ್‌ ತಾಣ ಇನ್‌ಸ್ಟಾಗ್ರಾಂನಲ್ಲಿ ಈ ಬೆಡಗಿನ ಸಾವಿರಾರು ಹಾಟ್‌ ಫೋಟೊಗಳಿವೆ. ದಿನನಿತ್ಯ ಕಮ್ಮಿ ಎಂದರೂ ಮೂರರಿಂದ ನಾಲ್ಕು ಫೋಟೊ ಹಂಚಿಕೊಳ್ಳದಿದ್ದರೆ ಆಕೆಗೆ ನೆಮ್ಮದಿ ಇಲ್ಲ. ದೇಹ ಪ್ರದರ್ಶನಕ್ಕೆ ಕಿಂಚಿತ್ತೂ ಮುಜುಗರಪಡದ ಹುಡುಗಿ. ಕಡೆದಿಟ್ಟ ಶಿಲ್ಪದಂತಹ ಮೈಮಾಟದ ಈ ಬೆಡಗಿ ನಿಧಿ ಅಗರ್‌ವಾಲ್‌. 

ಸದಾ ಸುದ್ದಿಯಲ್ಲಿರಬಯಸುವ ಮತ್ತು ಪ್ರಚಾರ ಗಿಟ್ಟಿಸಿಕೊಳ್ಳಲು ಬಯಸುವವರ ನೆಚ್ಚಿನ ತಾಣ ಇನ್‌ಸ್ಟಾಗ್ರಾಂ. ಸೆಲೆಬ್ರಿಟಿ ಸ್ಟೇಟಸ್‌, ಹೀರೊಯಿನ್‌ ಎಂಬ ಗೌರವ, ಹಾಟ್‌ ಬ್ಯೂಟಿ ಎಂಬ ಹೆಗ್ಗಳಿಕೆ ಇವೆಲ್ಲದರಿಂದ ನಿಧಿ ಇನ್ನಷ್ಟು ಬೀಗುತ್ತಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ ಸ್ವತಃ ಅವರೇ ಹೇಳಿಕೊಂಡಂತೆ ಅವರು ಪ್ರಚಾರಪ್ರಿಯೆ. ಹಾಗಾಗಿ, ಪ್ರಚಾರದಲ್ಲಿರಲು ಸಾಮಾಜಿಕ ಮಾಧ್ಯಮದಲ್ಲಿ ಕ್ರಿಯಾಶೀಲರಾಗಿರುತ್ತಾರಂತೆ!

ಹುಟ್ಟಿದ್ದು ಹೈದರಾಬಾದ್‌ನಲ್ಲಾದರೂ ಬೆಳೆದಿದ್ದು, ಓದಿದ್ದು ಬೆಂಗಳೂರಿನಲ್ಲಿ. ಇದೇ ಜನವರಿಯಲ್ಲಿ ಬಿಡುಗಡೆಯಾದ ತೆಲುಗಿನ ‘ಮಿ ಮಜ್ನು’ ಚಿತ್ರ ತೆರೆ ಕಂಡು ಉತ್ತಮ ವಿಮರ್ಶೆ ಮತ್ತು ಗಳಿಕೆ ಮಾಡಿದೆ. ಇದು ನಿಧಿಗೆ ಇನ್ನಷ್ಟು ಅವಕಾಶಗಳಿಗೆ ದಾರಿ ಮಾಡಿಕೊಟ್ಟಿದೆ.

ನಟಿಯಾಗುವುದು ಬಾಲ್ಯದಿಂದಲೇ ಕಂಡ ಕನಸು. ದಂತದ ಗೊಂಬೆಯಂತಿರುವ ಹುಡುಗಿಯನ್ನು ನೋಡಿದವರೆಲ್ಲಾ ‘ಒಳ್ಳೆ ಫಿಲ್ಮ್‌ ಹೀರೊಯಿನ್‌ ಥರಾ ಕಾಣಿಸ್ತೀಯ’ ಎಂದು ಹೊಗಳುತ್ತಿದ್ದುದು ಕನಸಿಗೆ ನೀರೆರೆದಂತೆ ಆಗುತ್ತಿತ್ತು. ಬ್ಯಾಲೆ, ಕಥಕ್‌ ಮತ್ತು ಬೆಲ್ಲಿ ಡ್ಯಾನ್ಸ್‌ನಲ್ಲಿ ಪಳಗಿದ್ದು ಹೀರೊಯಿನ್‌ ಆಗುವ ಆಸೆಯಿಂದಲೇ.

ಸರ್ವಾಂಗ ಸುಂದರಿಗೆ ಚಿತ್ರರಂಗದ ಬಾಗಿಲು ತೆರೆದದ್ದು 2017ರಲ್ಲಿ ‘ಮುನ್ನಾ ಮೈಕೆಲ್‌’ ಚಿತ್ರ. ಹಿಂದಿಯ ಮೂಲಕ ಚಿತ್ರರಂಗಕ್ಕೆ ಕಾಲಿಡುವ ಅದೃಷ್ಟ ನಿಧಿಗೆ ಸಿಕ್ಕಿದ್ದೇ ತಡ ಅವರ ಕನಸುಗಳು ಗರಿಗೆದರಿದವು. ಇತರ ಭಾಷೆಯ ನಿರ್ದೇಶಕರು ಮತ್ತು ನಿರ್ಮಾಪಕರೂ ನಿಧಿಯನ್ನು ಗಮನಿಸಿದರು. ಅಲ್ಲಿಂದಾಚೆ ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ವರ್ಷಕ್ಕೊಂದಾದರೂ ಚಿತ್ರಕ್ಕೆ ಸಹಿ ಹಾಕುತ್ತಲೇ ಬಂದಿದ್ದಾರೆ.

ಈ ವರ್ಷ ಅವರ ಕೈಯಲ್ಲಿ ಇನ್ನೂ ಎರಡು ಚಿತ್ರಗಳಿವೆ. ಹಿಂದಿಯ ಐಕ್ಕಾ ಚಿತ್ರ ಚಿತ್ರೀಕರಣಪೂರ್ವ ಕಾರ್ಯಗಳು ನಡೆದಿವೆ. ಇಸ್ಮಾರ್ಟ್‌ ಶಂಕರ ಚಿತ್ರೀಕರಣ ನಡೆದಿದ್ದರೆ ಹಿಂದಿಯದೇ ‘ಮಾಸ್ಕ್‌’ ಮುಂದಿನ ವರ್ಷ ತೆರೆ ಕಾಣಲಿದೆ.

ನಿಧಿ ಪ್ರಸ್ತುತ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಚಿತ್ರ ತೆಲುಗಿನ ‘ಇಸ್ಮಾರ್ಟ್‌ ಶಂಕರ್‌’. ಪುರಿ ಜಗನ್ನಾಥ್‌ ಅವರಂತಹ ತೆಲುಗಿನ ಸ್ಟಾರ್‌ ನಿರ್ದೇಶಕರ  ಈ ಚಿತ್ರದಲ್ಲಿ ನಿಧಿ ಜೊತೆಗೆ ಮತ್ತೊಬ್ಬ ಕನ್ನಡದ ನಟಿ ನಭಾ ನಟೇಶ್ ಕೂಡಾ ನಾಯಕಿ. ಬ್ರಹ್ಮಾನಂದಂ ಪ್ರಮುಖ ಪಾತ್ರದಲ್ಲಿರುವ ಚಿತ್ರವಿದು. ನಿಧಿಗೆ ಈ ಚಿತ್ರ ದೊಡ್ಡ ಬ್ರೇಕ್‌ ಕೊಡಲಿದೆ ಎಂಬುದು ಟಾಲಿವುಡ್‌ ಪಂಡಿತರ ಲೆಕ್ಕಾಚಾರ.

ಮೈಮಾಟದ್ದೇ ಮೋಡಿ

ನಿಧಿಯ ಮೈಮಾಟ ಸಹಜವಾಗಿ ಕಡೆದಿಟ್ಟ ಶಿಲ್ಪದಂತಿರುವುದು ಪ್ಲಸ್ ಪಾಯಿಂಟ್. ಜೊತೆಗೆ ಮೂರು ಬಗೆಯ ನೃತ್ಯ ಕೌಶಲವಿದೆ. ಇಷ್ಟಾದರೂ ಜಿಮ್‌ನಲ್ಲಿ ವ್ಯಾಯಾಮ ಮಾಡುವುದು, ದೇಹಾಕಾರವನ್ನು ಇನ್ನಷ್ಟು ಹುರಿಗೊಳಿಸುವುದು ನಿಧಿಗೆ ಇಷ್ಟ. ಹಾಗಾಗಿ ವಾರಕ್ಕೊಂದೆರಡು ಬಾರಿಯಾದರೂ ಜಿಮ್‌ನಲ್ಲಿ ಬೆವರಿಳಿಸುವುದು ಕಡ್ಡಾಯ. 

ಊಟ ಉಪಾಹಾರದ ವಿಷಯದಲ್ಲಿ ನಿಧಿ ಎಂದೂ ಹದ ತಪ್ಪಿದವರಲ್ಲ. ಅನವಶ್ಯ ಕೊಬ್ಬಿನಂಶ ಸೇರಿಕೊಳ್ಳದಂತೆ ಎಚ್ಚರವಹಿಸಿದರೆ ದೇಹವನ್ನು ಅನಗತ್ಯವಾಗಿ ದಂಡಿಸುವ ಅಗತ್ಯವಿಲ್ಲ ಎಂಬ ಜಾಣ ನಡೆ ಅವರದು. 

ನಿಧಿ, ಕನ್ನಡದ ಹುಡುಗಿಯಾದರೂ ಕನ್ನಡ ಚಿತ್ರರಂಗದಲ್ಲಿ ಬೆಳಗುವ ದಿನ ಬಂದಿಲ್ಲ. ಇನ್ನೊಂದು ತಮಾಷೆಯ ಸಂಗತಿ ಎಂದರೆ, ಈ ಬೆಡಗಿ ತಾನು ಹೈದರಾಬಾದಿ ಎನ್ನುತ್ತಾರೆಯೇ ವಿನಾ ಬೆಂಗಳೂರಿಗಳು ಎಂದು ಹೇಳಿಕೊಳ್ಳುವುದಿಲ್ಲ!

ಬೆಂಗಳೂರಿನಲ್ಲಿ ಹೈಸ್ಕೂಲ್‌ ವಿದ್ಯಾರ್ಥಿನಿಯಾಗಿದ್ದಾಗ ಐಶ್ವರ್ಯಾ ರೈ ಬಚ್ಚನ್‌ ಚಿತ್ರವಿರುವ ಹೋರ್ಡಿಂಗ್‌ ಕಣ್ಣಿಗೆ ಬಿದ್ದರೆ ಪಾಠ ಪ್ರವಚನದತ್ತ ಮನಸ್ಸೇ ಹೊರಳುತ್ತಿರಲಿಲ್ಲವಂತೆ. ಬಾಲ್ಯದಿಂದಲೂ ಐಶೂ ಅಭಿಮಾನಿಯಾಗಿರುವ ನಿಧಿಗೆ ಬೆಂಗಳೂರಿನವರೇ ಆದ ದೀಪಿಕಾ ಪಡುಕೋಣೆ ಅಂದರೆ ಒಂದು ತೂಕ ಹೆಚ್ಚೇ ಆಕರ್ಷಣೆಯಂತೆ! ಅವರಂತೆ ಚಿತ್ರರಂಗದಲ್ಲಿ ಬಾಳಿ ಬೆಳಗುತ್ತಾರೋ ಎಂಬುದಕ್ಕೆ ಮಾತ್ರ ಕಾಲವೇ ಉತ್ತರಿಸಬೇಕು.

‘ನೋ ಡೇಟಿಂಗ್‌ ಪ್ಲೀಸ್‌...’

ಬೆಂಗಳೂರು ಬ್ಯೂಟಿ ನಿಧಿ ಅಗರ್‌ವಾಲ್‌ ಈಗ ಹಿಂದಿ ಮತ್ತು ತೆಲುಗು ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿ. ಆದರೆ ಮೊದಲ ಚಿತ್ರದ ನಿರ್ದೇಶಕ ಸಬ್ಬೀರ್‌ ಖಾನ್‌ ನಿಧಿಯ ಕಾಲ್‌ಶೀಟ್‌ ಪಡೆಯುತ್ತಲೇ ಒಂದು ಕಂಡಿಷನ್‌ ಹಾಕಿದ್ದರು. ಅದೇನು ಗೊತ್ತಾ? ’ಈ ಚಿತ್ರದ ಚಿತ್ರೀಕರಣ ಮುಗಿಯುವವರೆಗೂ ಡೇಟಿಂಗ್‌ಗೆ ಅವಕಾಶವಿಲ್ಲ‘ ಎಂದು!

ಈ ಷರತ್ತನ್ನು ನಿಧಿ ಪಾಸಿಟಿವ್‌ ಆಗಿಯೇ ತಗೊಂಡಿದ್ದರೆನ್ನಿ. ಆದರೆ ಖಾನ್‌ ಷರತ್ತು ನಿಧಿಯತ್ತ ಎಲ್ಲರೂ ಪ್ರಶ್ನಾರ್ಥಕವಾಗಿ ನೋಡುವಂತೆ ಮಾಡಿದ್ದಂತೂ ನಿಜ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !