ಭಾರತಕ್ಕೆ ನೇಪಾಳ ರಾಯಭಾರಿಯಾಗಿ ನೀಲಾಂಬರ್‌ ಆಚಾರ್ಯ ನೇಮಕ

7

ಭಾರತಕ್ಕೆ ನೇಪಾಳ ರಾಯಭಾರಿಯಾಗಿ ನೀಲಾಂಬರ್‌ ಆಚಾರ್ಯ ನೇಮಕ

Published:
Updated:
Prajavani

ಕಠ್ಮಂಡು: ಭಾರತಕ್ಕೆ ನೇಪಾಳ ರಾಯಭಾರಿಯನ್ನಾಗಿ ಮಾಜಿ ಕಾನೂನು ಸಚಿವ ನೀಲಾಂಬರ್‌ ಆಚಾರ್ಯ ಅವರನ್ನು ನೇಮಿಸಲಾಗಿದೆ.

ಈ ಹಿಂದಿನ ರಾಯಭಾರಿಯಾಗಿದ್ದ ದೀಪ್‌ ಕುಮಾರ್‌ ಉಪಾಧ್ಯಾಯ ಅವರು 2017ರ ಅಕ್ಟೋಬರ್‌ ತಿಂಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ರಾಜಕೀಯಕ್ಕೆ ಸೇರ್ಪಡೆಗೊಂಡಿದ್ದರು. ಅಲ್ಲಿಂದ ಈ ಸ್ಥಾನ ಖಾಲಿ ಉಳಿದಿತ್ತು.

ಮಾಸ್ಕೊ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಬಳಿಕ ಆಚಾರ್ಯ ಅವರು, ಎಡಪಂಥೀಯ ಚಿಂತಕರಾಗಿ ಗುರುತಿಸಿಕೊಂಡಿದ್ದರು. ತದನಂತರ, ನೇಪಾಳಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

1990ರ ಮಧ್ಯಂತರ ಸರ್ಕಾರದಲ್ಲಿ ಕಾನೂನು, ಸಂಸದೀಯ ವ್ಯವಹಾರ, ಕಾರ್ಮಿಕ ಹಾಗೂ ಸಮಾಜ ಕಲ್ಯಾಣ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದ್ದರು.

ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇಪಾಳ ಅಧ್ಯಕ್ಷೆ ವಿದ್ಯಾ ದೇವಿ ಭಂಡಾರಿ ಅವರು ನೀಲಾಂಬರ್‌ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ನೇಪಾಳ ಸರ್ಕಾರ ಜಾರಿಗೆ ತಂದಿರುವ ಹೊಸ ಕಾಯ್ದೆ ಪ್ರಕಾರ, ಇದೇ ಮೊದಲ ಬಾರಿಗೆ ನೇಪಾಳದ ರಾಯಭಾರಿಯೊಬ್ಬರು ರಾಷ್ಟ್ರಪತಿಗಳಿಂದ ಪ್ರತಿಜ್ಞಾವಿಧಿ ಸ್ವೀಕರಿಸಿದರು. ರಾಯಭಾರಿಗಳಿಗೆ ಈ ಹಿಂದೆ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಪ್ರತಿಜ್ಞಾವಿಧಿ ಬೋಧಿಸುತ್ತಿದ್ದರು.

ಸವಾಲಿನ ಹಾದಿ: 2015ರಲ್ಲಿ ನೇಪಾಳದಲ್ಲಿ ಹೊಸ ಸಂವಿಧಾನ ಅಳವಡಿಸಿಕೊಂಡ ನಂತರ, ಮಾಧೇಶಿ ಸಮುದಾಯದವರು ದೊಡ್ಡ ಮಟ್ಟದಲ್ಲಿ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು. ಇದರಿಂದ ಜೀವನಾವಶ್ಯಕ ವಸ್ತುಗಳಿಗೆ ಭಾರತವನ್ನೇ ಅವಲಂಬಿಸಿದ ನೇಪಾಳ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಮಾಧೇಶಿ ಸಮುದಾಯವನ್ನು ಮುಂದಿಟ್ಟುಕೊಂಡು ಭಾರತವೇ ರಸ್ತೆ ತಡೆ ಉಂಟುಮಾಡಿದೆ ಎಂದು ನೇಪಾಳ ಸರ್ಕಾರ ಆರೋ‍ಪಿಸಿತ್ತು. ಈ ಆರೋಪವನ್ನು ಭಾರತ ನಿರಾಕರಿಸಿತ್ತು.

‘ಈ ಬೆಳವಣಿಗೆ ಬಳಿಕ ಇದೇ ಮೊದಲ ಬಾರಿಗೆ ಭಾರತಕ್ಕೆ ನೇಪಾಳದ ರಾಯಭಾರಿಯನ್ನು ನೇಮಿಸಿದ್ದು, ಮುಂದಿನ ತಿಂಗಳು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಎರಡು ರಾಷ್ಟ್ರಗಳ ನಡುವೆ ಹದಗೆಟ್ಟಿರುವ ದ್ವಿಪಕ್ಷೀಯ ಸಂಬಂಧದ ಮರುಸ್ಥಾಪನೆ ಆಚಾರ್ಯ ಮುಂದಿರುವ ಅತೀ ದೊಡ್ಡ ಸವಾಲು’ ಎಂದು ‘ದಿ ಕಠ್ಮಂಡು ಪೋಸ್ಟ್‌’ ವರದಿ ಮಾಡಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !